ಸೋಮವಾರ, ಮೇ 17, 2021
31 °C
ಕೋವಿಡ್‌ಗೆ ಬೆದರಿ ಭಟ್ಕಳದಿಂದ ಹೊರ ಹೋಗುತ್ತಿರುವ ಬೇರೆ ರಾಜ್ಯಗಳ ಕಾರ್ಮಿಕರು

ಪಟ್ಟಣ ತೊರೆಯುತ್ತಿರುವ ಶ್ರಮಜೀವಿಗಳು

ಮೋಹನ ನಾಯ್ಕ Updated:

ಅಕ್ಷರ ಗಾತ್ರ : | |

Prajavani

ಭಟ್ಕಳ: ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದ ಆತಂಕಗೊಂಡಿರುವ ಇಲ್ಲಿನ ಹೊರ ರಾಜ್ಯಗಳ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ವಾಪಸಾಗುತ್ತಿದ್ದಾರೆ. ಅವರಲ್ಲಿ ಬಹುತೇಕರು ಉತ್ತರ ಭಾರತೀಯರಾಗಿದ್ದಾರೆ.

ಭಟ್ಕಳದಲ್ಲಿ ಕಟ್ಟಡ, ಮೀನುಗಾರಿಕೆ, ಚಿನ್ನಾಭರಣ ತಯಾರಿಕೆ, ಕೆಲ್ಸಿಗಳು ಸೇರಿದಂತೆ ಸಾವಿರಾರು ಕಾರ್ಮಿಕರು ನೆಲೆಸಿದ್ದಾರೆ. ಕಳೆದ ಬಾರಿ ಲಾಕ್‌ಡೌನ್ ಸಮಯದಲ್ಲಿ ಹಲವು ಕಾರ್ಮಿಕರು ತಮ್ಮ ಊರುಗಳಿಗೆ ಮರಳಲಾರದೇ ಸಂಕಷ್ಟಪಟ್ಟಿದ್ದರು. ದಿನನಿತ್ಯದ ‌ಅಗತ್ಯ ಸಾಮಗ್ರಿ ಕೊಳ್ಳಲೂ ಹಣವಿಲ್ಲದೇ ಪರದಾಡಿದ್ದರು. 

ಈ ಬಾರಿ ಆ ಸನ್ನಿವೇಶ ಬಂದರೆ ಎಂಬ ಆತಂಕದಲ್ಲಿ ಕಾರ್ಮಿಕರು ಮೊದಲೇ ಪ್ರಯಾಣಿಸುತ್ತಿದ್ದಾರೆ. ಭಟ್ಕಳದಿಂದ ಮುಂಬೈ, ದೆಹಲಿಗೆ ಸಂಚರಿಸುವ ಮತ್ಸ್ಯಗಂಧ, ಮಂಗಳಾ ಎಕ್ಸ್‌ಪ್ರೆಸ್ ರೈಲಿನಲ್ಲಿ ದಿನನಿತ್ಯ 100ಕ್ಕೂ ಹೆಚ್ಚು ಕಾರ್ಮಿಕರು ತೆರಳುತ್ತಿದ್ದಾರೆ.

ಗುತ್ತಿಗೆದಾರರ ನಿರ್ಲಕ್ಷ್ಯ

‘ಕಟ್ಟಡ ಕಾಮಗಾರಿ ನಡೆಸುವ ನಮಗೆ ಲಾಕ್‌ಡೌನ್ ಸಮಯದಲ್ಲಿ ಗುತ್ತಿಗೆದಾರರು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಕೆಲಸ ಮಾಡಲು ತುಂಬಾ ಇದೆ. ಆದರೆ, ಲಾಕ್‌ಡೌನ್ ನೆಪವೊಡ್ಡಿ ಸರಿಯಾಗಿ ಸಂಬಳ ನೀಡುತ್ತಿಲ್ಲ. ಹೋಟೆಲ್ ಮುಚ್ಚಿರುವ ಕಾರಣ ಹೇಳಿ ಊಟ, ತಿಂಡಿಗಳನ್ನು ಕೊಡುತ್ತಿಲ್ಲ. ಹೀಗೆ ಮಾಡಿದರೆ ನಾವು ಕೆಲಸ ಮಾಡುವುದಾದರೂ ಹೇಗೆ’ ಎಂದು ಕಾರ್ಮಿಕರು ಪ್ರಶ್ನಿಸುತ್ತಾರೆ.

‘ಇತ್ತ ಕರ್ನಾಟಕದಲ್ಲಿ ಕೋವಿಡ್‍ನಿಂದ ಉಂಟಾದ ಸಾವು ನೋವುಗಳನ್ನು ಟಿ.ವಿ.ಗಳಲ್ಲಿ ನೋಡಿದ ಮನೆಯವರು ಕರೆಯ ಮೇಲೆ ಕರೆ ಮಾಡಿ ಕೆಲಸ ಬಿಟ್ಟು ಮನೆಗೆ ಬರುವಂತೆ ಒತ್ತಾಯಿಸುತ್ತಿದ್ದಾರೆ. ಊರಿನಲ್ಲಿ ಮಾಡಲು ಕೆಲಸವಿಲ್ಲದಿದ್ದರೂ ಪರವಾಗಿಲ್ಲ. ಕೋವಿಡ್ ಮುಗಿಯುವ ತನಕ ಅಲ್ಲೇ ಇರುತ್ತೇವೆ. ನಂತರ ಪರಿಸ್ಥಿತಿ ಸುಧಾರಿಸಿದರೆ ಪುನಃ ಬಂದರಾಯಿತು’ ಎಂದು ಹೇಳುತ್ತಾರೆ.

ಕಳೆದ ಬಾರಿ ಲಾಕ್‌ಡೌನ್ ಸಂದರ್ಭದಲ್ಲಿ ಪಟ್ಟಣದಿಂದ ಹೋಗಿದ್ದ ಹಲವು ಕಾರ್ಮಿಕರು ವಾಪಸ್ ಬಂದಿರಲಿಲ್ಲ. ಇದರಿಂದ ಕಟ್ಟಡ ನಿರ್ಮಾಣ, ಮೀನುಗಾರಿಕೆಯಂಥ ಕೆಲಸಗಳ ಮೇಲೆ ಪರಿಣಾಮವಾಗಿತ್ತು. ಈಗ ಮತ್ತೆ ಕಾರ್ಮಿಕರು ತಮ್ಮೂರಿಗೆ ಹೋಗುತ್ತಿರುವುದರಿಂದ ಸಮಸ್ಯೆಯಾಗುವ ಸಾಧ್ಯತೆಯಿದೆ.

ಮನೆಗೆ ಬರಲು ಒತ್ತಾಯ

‘ಕರ್ನಾಟಕದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ನೋಡಿ ಊರಿಗೆ ಮರಳಲು ಮನೆಯವರು ಒತ್ತಾಯಿಸುತ್ತಿದ್ದಾರೆ. ಪ್ರಯಾಣಿಕರ ಕೊರತೆಯ ಕಾರಣದಿಂದ ವಿವಿಧ ರೈಲುಗಳು ಒಂದೊಂದಾಗಿ ರದ್ದಾಗುತ್ತಿವೆ. ಕೆಲವ ಭಾಗಶಃ ರದ್ದಾಗಿವೆ. ಪರಿಸ್ಥಿತಿ ಇದೇ ರೀತಿ ಮುಂದುವರಿದು, ಮುಂದೆ ರೈಲು ಸಂಚಾರ ಸಂಪೂರ್ಣವಾಗಿ ಸ್ಥಗಿತವಾದರೆ ಮನೆಗೆ ತೆರಳಲು ಸಾಧ್ಯವಾಗುವುದಿಲ್ಲ. ಇಲ್ಲೇ ಇದ್ದರೆ ಗುತ್ತಿಗೆದಾರರು ನಮ್ಮನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ’ ಎನ್ನುತ್ತಾರೆ ಬಿಹಾರದ ಕಾರ್ಮಿಕ ಪಪ್ಪು ಕುಮಾರ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು