ಮಂಗಳವಾರ, ಸೆಪ್ಟೆಂಬರ್ 22, 2020
25 °C
ಸಾಗರಮಾಲಾ ಯೋಜನೆಯಡಿ ಅಲೆ ತಡೆಗೋಡೆ ನಿರ್ಮಿಸದಂತೆ ಆಗ್ರಹ

ಅಲೆ ತಡೆಗೋಡೆ ನಿರ್ಮಾಣಕ್ಕೆ ವಿರೋಧ: ಕಾರವಾರ ಮೀನುಗಾರರಿಂದ ಪ್ರಧಾನಿಗೆ ಪತ್ರ ಚಳವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಸಾಗರಮಾಲಾ ಯೋಜನೆಯಡಿ ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಅಲೆ ತಡೆಗೋಡೆ ನಿರ್ಮಾಣ ಮಾಡುವುದಕ್ಕೆ ಮೀನುಗಾರರ ವಿರೋಧ ಮುಂದುವರಿದಿದೆ. ಯೋಜನೆಯನ್ನು ರದ್ದು ಪಡಿಸುವಂತೆ ಒತ್ತಾಯಿಸಿ ಪ್ರಧಾನಮಂತ್ರಿಗೆ ಪತ್ರ ಬರೆಯುವ ಚಳವಳಿಗೆ ಶುಕ್ರವಾರ ಚಾಲನೆ ನೀಡಿದರು.

ನಗರದ ಕೇಂದ್ರ ಅಂಚೆ ಕಚೇರಿ ಬಳಿ ಸೇರಿದ ಮೀನುಗಾರರು, ಸರ್ಕಾರವು ಅಲೆ ತಡೆಗೋಡೆ ನಿರ್ಮಾಣವನ್ನು ಕೈಬಿಡುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

‘ನಮ್ಮ ಕಡಲತೀರವನ್ನು ಉಳಿಸಿಕೊಳ್ಳಲು ನಮಗೆ ಹೋರಾಟ ಅನಿವಾರ್ಯವಾಗಿದೆ. ನಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಈ ಯೋಜನೆಯನ್ನು ಬಿಡಬೇಕು ಎಂದು ಆಗ್ರಹಿಸುತ್ತಿದ್ದೇವೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಬಾಲ್ಯದಿಂದಲೂ ಕಾರವಾರದಲ್ಲಿ ವಾಸವಿರುವ ನಾವು, ಸರ್ಕಾರದಿಂದ ಆಗುತ್ತಿರುವ ಅನ್ಯಾಯ ಹಾಗೂ ದೌರ್ಜನ್ಯವನ್ನು ಕಣ್ಣಾರೆ ಕಂಡಿದ್ದೇವೆ. ಕಡಲ ನಗರಿ ಎಂದು ಕರೆಯಿಸಿಕೊಳ್ಳುವ ಕಾರವಾರದಲ್ಲಿ ಈ ಹಿಂದೆ ಹತ್ತಾರು ಕಡಲತೀರಗಳು ಮುಕ್ತವಾಗಿದ್ದವು. ಆದರೆ, ಸೀಬರ್ಡ್ ನೌಕಾನೆಲೆಯ ಸ್ಥಾಪನೆಯಾದಾಗ ರವೀಂದ್ರನಾಥ ಟ್ಯಾಗೋರ್ ಕಡಲತೀರ ಮಾತ್ರ ಉಳಿದುಕೊಂಡಿತು. ಈಗ ಬಂದರು ವಿಸ್ತರಣೆಗಾಗಿ ಅದನ್ನೂ ವಶಪಡಿಸಿಕೊಂಡರೆ ಜನರಿಗೆ ಕಡಲತೀರವೇ ಇಲ್ಲದಂತಾಗುತ್ತದೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

‘ಬಂದರು ವಿಸ್ತರಣೆಯ ನೆಪದಲ್ಲಿ ಕಾಮಗಾರಿ ಆರಂಭಿಸಲು ಮುಂದಾದಾಗ ಮೀನುಗಾರರೆಲ್ಲರೂ ಹೋರಾಡಿದ್ದೆವು. ಕಾಮಗಾರಿಯನ್ನು ನಿಲ್ಲಿಸಿದ್ದೆವು. ಮುಂದಿನ ದಿನಗಳಲ್ಲೂ ಯೋಜನೆಯನ್ನು ಮುಂದುವರಿಸಬಾರದು’ ಎಂದು ಒತ್ತಾಯಿಸಿದ್ದಾರೆ.

ಪತ್ರಗಳನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬರೆಯಲಾಗಿದೆ. ಹಂತ ಹಂತವಾಗಿ 500ಕ್ಕೂ ಹೆಚ್ಚು ಪತ್ರಗಳನ್ನು ಪ್ರಧಾನಮಂತ್ರಿಯ ಕಚೇರಿ ವಿಳಾಸಕ್ಕೆ ಅಂಚೆ ಮೂಲಕ ರವಾನಿಸುವ ಉದ್ದೇಶ ಹೊಂದಲಾಗಿದೆ ಎಂದು ಬೈತಖೋಲ್‌ನ ಮೀನುಗಾರ ಮುಖಂಡ ವಿನಾಯಕ ಹರಿಕಂತ್ರ ತಿಳಿಸಿದರು.

ಈ ಸಂದರ್ಭದಲ್ಲಿ ಚಿತ್ತಾಕುಲಾ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ರಾಜು ತಾಂಡೇಲ ಸೇರಿದಂತೆ ಹಲವು ‍ಪ್ರಮುಖರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು