ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂಡಮಾರುತ: ಕಾರವಾರ ಬಂದರಿಗೆ ಮರಳಿದ ದೋಣಿಗಳು

Last Updated 14 ಮೇ 2021, 14:30 IST
ಅಕ್ಷರ ಗಾತ್ರ

ಕಾರವಾರ: ‘ತೌಕ್ತೆ’ ಚಂಡಮಾರುತದಿಂದಾಗಿ ಮೂರು ದಿನ ಭಾರಿ ಗಾಳಿ, ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ, ಅರಬ್ಬಿ ಸಮುದ್ರದಲ್ಲಿ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಹತ್ತಾರು ದೋಣಿಗಳು ಇಲ್ಲಿನ ಬೈತಖೋಲ್ ಮೀನುಗಾರಿಕಾ ಬಂದರಿಗೆ ಶುಕ್ರವಾರ ಮರಳಿವೆ.

ಸ್ಥಳೀಯ ಮೀನುಗಾರಿಕಾ ದೋಣಿಗಳೊಂದಿಗೇ ಉಡುಪಿ, ಮಂಗಳೂರು, ಮಲ್ಪೆ ಹಾಗೂ ತಮಿಳುನಾಡಿನ ಮೀನುಗಾರರು ಬಂದರಿಗೆ ಬಂದಿದ್ದಾರೆ. ಇಲ್ಲಿನ ನೈಸರ್ಗಿಕ ಬಂದರು ಚಂಡಮಾರುತದಂಥ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ದೋಣಿಗಳಿಗೆ ಆಶ್ರಯ ಒದಗಿಸುತ್ತದೆ. ಆದ್ದರಿಂದ ಪ್ರತಿಬಾರಿ ಸಮುದ್ರ ‍ಪ್ರಕ್ಷುಬ್ಧಗೊಂಡಾಗ ಸಮೀಪದಲ್ಲಿರುವ ದೋಣಿಗಳು ಇಲ್ಲಿಗೆ ಬರುತ್ತವೆ.

ಈ ಬಗ್ಗೆ ಮಾಹಿತಿ ನೀಡಿದ ಮೀನುಗಾರಿಕಾ ಇಲಾಖೆ ಉಪ ನಿರ್ದೆಶಕ ಪಿ.ನಾಗರಾಜು, ‘ಉಡುಪಿ, ಮಂಗಳೂರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ 599 ದೋಣಿಗಳು ನಾಲ್ಕು ದಿನಗಳಿಂದ ಸಮುದ್ರದಲ್ಲಿ ಇರುವುದಾಗಿ ಮಾಹಿತಿಯಿದೆ. ಅವುಗಳಲ್ಲಿ ಹಲವು ಕಾರವಾರದ ದಡಕ್ಕೆ ಮರಳಿದ್ದು, ಕೆಲವು ಗೋವಾದಲ್ಲಿ ಲಂಗರು ಹಾಕಿವೆ’ ಎಂದು ತಿಳಿಸಿದರು.

‘ಆ ದೋಣಿಗಳಲ್ಲಿರುವ ಮೀನುಗಾರರು ದಡಕ್ಕೆ ಬರುವಂತಿಲ್ಲ. ಅಗತ್ಯ ವಸ್ತುಗಳು ಬೇಕಿದ್ದರೆ ಮೀನುಗಾರಿಕಾ ಸಂಘಟನೆಗಳು, ಇಲಾಖೆಯ ಮೂಲಕ ದೋಣಿಗೇ ಒದಗಿಸಲಾಗುತ್ತದೆ. ಒಂದುವೇಳೆ, ದಡಕ್ಕೆ ಬಂದು ಸುತ್ತಾಡುತ್ತಿರುವುದು ಕಂಡುಬಂದರೆ ಪೊಲೀಸರು ಕೋವಿಡ್ ನಿಯಮದಂತೆ ಕ್ರಮ ಕೈಗೊಳ್ಳುತ್ತಾರೆ’ ಎಂದು ಎಚ್ಚರಿಕೆ ನೀಡಿದರು.

ಜಾಗ್ರತೆ ವಹಿಸಲು ಶಾಸಕಿ ಸಲಹೆ

ಮೇ 15 ಹಾಗೂ 16ರಂದು ಬಿರುಗಾಳಿ ಸಹಿತ ಭಾರಿ ಮಳೆ ಬೀಳುವ ಮುನ್ನೆಚ್ಚರಿಕೆ ಇರುವ ಕಾರಣ ಮೀನುಗಾರರು ಮೀನುಗಾರಿಕೆಗೆ ಹೋಗದೇ ಸುರಕ್ಷಿತವಾಗಿ ಇರಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ಮನವಿ ಮಾಡಿದ್ದಾರೆ.

‘ನಮ್ಮ ಕರಾವಳಿಯಲ್ಲಿ ಪ್ರತಿ ಗಂಟೆಗೆ 70ರಿಂದ 80 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಹಾಗೂ 12ರಿಂದ 20 ಸೆಂಟಿಮೀಟರ್ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕಡಲತೀರದ ನಿವಾಸಿಗಳು, ಮೀನುಗಾರರು, ಮಕ್ಕಳು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಶಾಸಕರು ವಿನಂತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT