ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವರ್ಷವೂ ತಪ್ಪದ ಕಾಲು ಸಂಕ(ಟ): ಹೊಳೆ ದಾಟಲು ಮರದ ದಬ್ಬೆಯೇ ಆಸರೆ

ಜಿಲ್ಲೆಯ ವಿವಿಧ ಕುಗ್ರಾಮಗಳಲ್ಲಿ ಹಳ್ಳ,
Last Updated 4 ಜೂನ್ 2020, 3:46 IST
ಅಕ್ಷರ ಗಾತ್ರ

ಕಾರವಾರ:ಮಳೆಗಾಲ ಹತ್ತಿರವಾಗುತ್ತಿರುವಂತೆಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಕಾಲುಸಂಕಗಳ ನಿರ್ಮಾಣ ಆರಂಭವಾಗುತ್ತದೆ. ಪ್ರತಿ ವರ್ಷದಂತೆ ಈಬಾರಿಯೂ ಗ್ರಾಮಸ್ಥರು, ಅಡಿಕೆ ಮರದ ದಬ್ಬೆ, ಕಾಡು ಬಳ್ಳಿಗಳನ್ನು ಸಂಗ್ರಹಿಸಿ ಸಂಕಗಳ ನಿರ್ಮಾಣ ಶುರು ಮಾಡಿದ್ದಾರೆ.

ಕಳೆದ ವರ್ಷ ಜೂನ್ 8ರಂದು‘ಪ್ರಜಾವಾಣಿ’ಯಲ್ಲಿ ಕಾಲುಸಂಕ(ಟ) ಎಂಬ ಶೀರ್ಷಿಕೆಯ ವಿಶೇಷ ಪುಟ ಪ್ರಕಟಿಸಲಾಗಿತ್ತು. ಬಳಿಕ ಅಂದಿನ ಕಾಂಗ್ರೆಸ್– ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ‘ಶಾಲಾ ಸಂಪರ್ಕ ಸೇತು’ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ್ದರು. ಬಾಕಿಯಿರುವ ಎಲ್ಲ ಕಾಮಗಾರಿಗಳನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಲು ಗಡುವು ವಿಧಿಸಿದ್ದರು. ಆದರೆ, ಹಲವು ಕಾಮಗಾರಿಗಳು ಒಂದು ವರ್ಷ ಕಳೆದರೂ ಅನುಷ್ಠಾನವಾಗಿಲ್ಲ.

ಶಾಲೆಗಳಿಲ್ಲದ ಕುಗ್ರಾಮಗಳಲ್ಲಿ ಜನರ ಬವಣೆ ಇನ್ನೂ ಹೆಚ್ಚಿದೆ. ಅಲ್ಲಿನವಿದ್ಯಾರ್ಥಿಗಳು ಮಳೆಗಾಲದಲ್ಲಿ ಹಳ್ಳ, ನದಿ ದಾಟಲು ಸಾಧ್ಯವಾಗದೇ ಹಾಸ್ಟೆಲ್‌, ಸಂಬಂಧಿಕರ ಮನೆಗಳಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯುಮಳೆಗಾಲದಲ್ಲೇ ಆಯೋಜನೆಯಾಗಿರುವುದು ಪಾಲಕರ ಚಿಂತೆಯನ್ನು ಮತ್ತಷ್ಟು ಹೆಚ್ಚಿಸಿದೆ.

‘ನಮ್ಮ ಗ್ರಾಮದಲ್ಲಿ ಸುಮಾರು 20 ವಿದ್ಯಾರ್ಥಿಗಳಿದ್ದು, ಮೂವರು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವವರಿದ್ದಾರೆ. ಮಳೆಗಾಲದಲ್ಲಿ ಅವರೆಲ್ಲ 12 ಕಿಲೋಮೀಟರ್ ದೂರದ ಅಣಶಿಯಲ್ಲಿ ಕೊಠಡಿ ಬಾಡಿಗೆ ಪಡೆದುಕೊಂಡಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದವರು ಜೊಯಿಡಾ ತಾಲ್ಲೂಕಿನ ಅಣಶಿ ಗ್ರಾಮದ ಸಾವಂತ್ ಮಾತ್ಕರಣಿ ನಿವಾಸಿ ರಮೇಶ ಸಾವಂತ್.

‘ಊರಿನಲ್ಲಿ ಹರಿಯುವ ಹಳ್ಳಕ್ಕೆ ಸೇತುವೆ ನಿರ್ಮಿಸಲೆಂದು1988ರಲ್ಲಿ ಕಾಂಕ್ರೀಟ್‌ನ ನಾಲ್ಕು ಕಂಬಗಳನ್ನು ಅಳವಡಿಸಲಾಗಿದೆ. ನಂತರ ಸಿಮೆಂಟ್ ಹಲಗೆಗಳನ್ನುಕೂಡಿಸಲೇ ಇಲ್ಲ. ಸೇತುವೆ ಪೂರ್ಣಗೊಳಿಸಿ ಎಂದು ಶಾಸಕರು, ಸಂಸದರು, ಸಚಿವರಿಗೆ ಎಲ್ಲರಿಗೂ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ. ಪ್ರತಿ ಮಳೆಗಾಲದಲ್ಲೂ ಮರದ ಕೋಲುಗಳನ್ನಿಟ್ಟು ಕಾಲುಸಂಕ ಮಾಡಲು 10 ಜನರಿಗೆ ನಾಲ್ಕೈದು ದಿನಗಳ ಕೆಲಸವಾಗುತ್ತದೆ. ಇಲ್ಲದಿದ್ದರೆಮೂರು ತಿಂಗಳು ನಮಗೆ ವನವಾಸವೇ ಗತಿ. ಇದೇ ಪರಿಸ್ಥಿತಿ ಗ್ರಾಮದ ನಾರಗಾಳಿ ಎಂಬಲ್ಲಿ ಕೂಡ ಇದೆ’ ಎಂದು ಹೇಳಿದರು.

‘ಅನಾರೋಗ್ಯವಿದ್ದಾಗ ಭಾರಿ ಸಮಸ್ಯೆಯಾಗುತ್ತದೆ. ಕಳೆದ ವರ್ಷ ಮರದಿಂದ ಬಿದ್ದ ಒಬ್ಬರಿಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಲಾಗದೇ ಮೃತಪಟ್ಟರು. 12 ಕಿಲೋಮೀಟರ್ ನಡೆದುಕೊಂಡು ಅಣಶಿಗೆ ಬರಬೇಕು.ಸೇತುವೆಯ ಸಮಸ್ಯೆಯಿಂದ ಗ್ರಾಮದಏಳೆಂಟು ಕುಟುಂಬಗಳು ಬೇರೆಡೆಗೆ ಸ್ಥಳಾಂತರವಾದವು’ ಎಂದು ವಿವರಿಸಿದರು.

ಹೊನ್ನಾವರ ತಾಲ್ಲೂಕಿನ ಕುಗ್ರಾಮ ಜನ್ನಕಡ್ಕಲ್‌ನಲ್ಲೂ ಇದೇ ಪರಿಸ್ಥಿತಿಯಿದೆ. ಮುಕ್ತಿ ಹೊಳೆಗೆಮುಂಗಾರು ಆರಂಭಕ್ಕೂ ಮೊದಲೇಕಾಲು ಸಂಕ ನಿರ್ಮಿಸದಿದ್ದರೆ ಸ್ಥಳೀಯರಿಗೆ ಸಂಚಾರ ಸಾಧ್ಯವಾಗುವುದಿಲ್ಲ.

‘ಈ ಬಾರಿ ಹೊಸ ಮರದ ದಬ್ಬೆ ಹಾಕಿ ಸಂಕ ನಿರ್ಮಿಸಿಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದೇವೆ. ಗ್ರಾಮದಲ್ಲಿ ಸುಮಾರು 15 ವಿದ್ಯಾರ್ಥಿಗಳಿದ್ದಾರೆ. ಅವರಲ್ಲಿ ಮೂವರು ಎಸ್ಸೆಸ್ಸೆಲ್ಸಿ ಓದುತ್ತಿದ್ದಾರೆ. ಇಲ್ಲಿಂದ ಹೋಗಿಬರುವುದು ಅಸಾಧ್ಯ ಎಂದು ಎಲ್ಲರೂ ನೆಂಟರ ಮನೆಯಲ್ಲಿದ್ದಾರೆ’ ಎಂದ ಗ್ರಾಮಸ್ಥ ಯೋಗೇಶ ನಾಯ್ಕ ಬೇಸರಿಸಿದರು.

‘ಮಾಹಿತಿ ಕೇಳಲಾಗಿದೆ’:‘ಜಿಲ್ಲೆಯಲ್ಲಿ ಎಷ್ಟು ಕಾಲು ಸಂಕಗಳ ಬೇಕು ಮತ್ತು ಅಂದಾಜು ವೆಚ್ಚ ಎಷ್ಟಾಗಬಹುದು ಎಂದು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಂದ ಮಾಹಿತಿ ಪಡೆದು ತಿಳಿಸುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಸೂಚಿಸಿದ್ದೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರತಿಳಿಸಿದ್ದಾರೆ.

‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ನಮ್ಮ ಜಿಲ್ಲೆಗೆ ಕಳೆದ ವರ್ಷ ಮಂಜೂರಾದ ಅನೇಕ ಕಾಲುಸಂಕಗಳ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ.ಈ ವರ್ಷ ಹೊಸದಾಗಿ ಮಂಜೂರಾಗಿಲ್ಲ. ಕೊರೊನಾದಿಂದಾಗಿ ಕಾಮಗಾರಿಗಳು ಸುಮಾರು ಒಂದು ವರ್ಷದಷ್ಟು ಹಿಂದೆ ಸಾಗಿವೆ. ಮಳೆಗಾಲದ ಬಳಿಕ ವಿಶೇಷ ಕಾಮಗಾರಿ ಎಂದು ಪರಿಗಣಿಸಿ ಕಾಲುಸಂಕ ನಿರ್ಮಿಸಲಾಗುತ್ತದೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT