ಮಂಗಳವಾರ, ಅಕ್ಟೋಬರ್ 20, 2020
26 °C

ಕೆಲಸ ಕಾಯಂಗೆ ಆಗ್ರಹಿಸಿ ಮುಷ್ಕರ ಆರಂಭಿಸಿದ ಅರಣ್ಯ ಇಲಾಖೆ ಗುತ್ತಿಗೆ ನೌಕರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾಂಡೇಲಿ: ಪೂರ್ಣ ವೇತನ ಪಾವತಿ, ಕೆಲಸವನ್ನು ಕಾಯಂಗೊಳಿಸುವುದು, ಸೇವಾ ಭದ್ರತೆ ಮತ್ತು ನೌಕರರ ವಜಾ ವಿರೋಧಿಸಿ ಅರಣ್ಯ ಇಲಾಖೆಯ ಗುತ್ತಿಗೆ ನೌಕರರು ನಗರದಲ್ಲಿ ಬುಧವಾರ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು.

ರಾಜ್ಯ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ನೌಕರರ ಸಂಘದ ಸದಸ್ಯರು, ಕಾಳಿ ಹುಲಿ ಸಂರಕ್ಷಣಾ ವಲಯದಲ್ಲಿ ಬರುವ ಕುಳಗಿ, ಕುಂಬಾರವಾಡ, ಪನ್ಸೋಲೆ, ಗುಂದ, ಕಾನವಾಡ ಕ್ಯಾಂಪ್‌ಗಳಲ್ಲಿ ಕೆಲಸ ಮಾಡುವ ನೌಕರರು ಮುಷ್ಕರದಲ್ಲಿ ಭಾಗವಹಿಸಿದ್ದಾರೆ.

ಚೆಕ್‌ಪೋಸ್ಟ್ ಗಾರ್ಡ್‌ಗಳು, ಅರಣ್ಯ ವೀಕ್ಷಕರು, ಅರಣ್ಯ ಕಾವಲುಗಾರರು, ನಿಸ್ತಂತು ನಿರ್ವಾಹಕರು, ಲಿಪಿಕ ಸಹಾಯಕರು, ಪ್ರವಾಸಿ ಮಾರ್ಗದರ್ಶಕರು, ಅಡುಗೆ ಸಿಬ್ಬಂದಿ ಹಾಗೂ ಅವರ ಸಹಾಯಕರು ಸೇರಿದಂತೆ 295 ನೌಕರರು ಪಾಲ್ಗೊಂಡಿದ್ದಾರೆ.

ಕರ್ನಾಟಕ ರಾಜ್ಯ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ನೌಕರರ ಸಂಘದ ಅಧ್ಯಕ್ಷ ಹರೀಶ್ ಜಿ. ನಾಯಕ ಮಾತನಾಡಿ, ‘ಜೀವ ವೈವಿಧ್ಯತೆಯ ರಕ್ಷಣೆಯಲ್ಲಿ ಅರಣ್ಯ ರಕ್ಷಕರ ಪಾತ್ರ ಮಹತ್ವದ್ದು. ಸ್ಥಳೀಯರ ಜ್ಞಾನವನ್ನು ಪರಿಸರ ಸಂರಕ್ಷಣೆಯಲ್ಲಿ ಬಳಸಿಕೊಳ್ಳಬೇಕು. ಕಾಳಿ ಹುಲಿ ಸಂರಕ್ಷಿತ ವಲಯಕ್ಕೆ ಸರ್ಕಾರದಿಂದ ಬರುವ ಅನುದಾನವನ್ನು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳು ಹೇಗೆ ಬಳಸಬೇಕು ಎಂದು ಗೊತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕಾಳಿ ಹುಲಿ ಯೋಜನೆಗೆ ನಿರ್ವಹಿಸಲು ವರ್ಷಕ್ಕೆ ₹ 10 ಕೋಟಿ ಬೇಕು. ಆದರೆ, ಸರ್ಕಾರ ₹ 5 ಕೋಟಿಯನ್ನು ಮಾತ್ರವೇ ಕೊಡುತ್ತಿದೆ. ಹೀಗಾಗಿ ನೌಕರರ ಸಂಖ್ಯೆಯನ್ನು ಕಡಿಮೆ ಮಾಡಲಾಗುತ್ತಿದೆ. ಇಲ್ಲಿ ನಮ್ಮ ಬದುಕಿನ ಪ್ರಶ್ನೆ ಇದೆ. ಹಾಗಾಗಿ ನಾವು ನ್ಯಾಯ ಸಿಗುವವರೆಗೂ ಹೋರಾಡುತ್ತೇವೆ’ ಎಂದರು.

ಕಾಳಿ ಬ್ರಿಗೇಡ್‌ನ ರವಿ ರೇಡ್ಕರ್, ‘ಕಾಡಿನ ಜೀವ ವೈವಿಧ್ಯವನ್ನು ಕಾಪಾಡುವಲ್ಲಿ ಸ್ಥಳೀಯವಾಗಿ ನೇಮಕಗೊಂಡ ನೌಕರರಷ್ಟು ಸಮರ್ಥರು ಯಾರೂ ಇಲ್ಲ. ನ್ಯಾಯುತವಾದ ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕು’ ಎಂದು ಒತ್ತಾಯಿಸಿದರು.

ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಟೆನಸಿ, ಪ್ರಮುಖರಾದ ಸಲೀಂ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು