ಸೋಮವಾರ, ಆಗಸ್ಟ್ 2, 2021
27 °C
ಜಿಲ್ಲೆಯಲ್ಲಿ ಏರಿಕೆ ಕಾಣುತ್ತಲೇ ಇದೆ ಸೋಂಕಿತರ ಸಂಖ್ಯೆ: ಶನಿವಾರ ಶಿರಸಿಯಲ್ಲಿ ಅಧಿಕ

ಉತ್ತರ ಕನ್ನಡ: 40 ಮಂದಿಗೆ ಕೋವಿಡ್ ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

coronavirus

ಕಾರವಾರ: ಜಿಲ್ಲೆಯಲ್ಲಿ ಕೋವಿಡ್–19 ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗುತ್ತಿದ್ದು, ಶನಿವಾರ 40 ಮಂದಿಗೆ ದೃಢಪಟ್ಟಿದೆ. ಈ ಪೈಕಿ ಶಿರಸಿಯಲ್ಲೇ 24 ಮಂದಿ ಸೋಂಕಿತರಾಗಿದ್ದಾರೆ.

ಶಿರಸಿಯ ಸೋಂಕಿತರ ಪೈಕಿ 22 ಮಂದಿ ಈಗಾಗಲೇ ಸೋಂಕಿತರಾದವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರಾಗಿದ್ದಾರೆ. ದಾಂಡೇಲಿಯ ಆರು ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಅವರಲ್ಲಿ ಒಬ್ಬರ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ. ಕಾರವಾರದಲ್ಲಿ ಇಬ್ಬರಿಗೆ ಕೋವಿಡ್ ಖಚಿತವಾಗಿದ್ದು, ಒಬ್ಬರು ಗೋವಾದಿಂದ ಮರಳಿದವರು. ಮತ್ತೊಬ್ಬರು ರೋಗಿಯೊಬ್ಬರ ಪ್ರಾಥಮಿಕ ಸಂಪರ್ಕವಾಗಿದ್ದಾರೆ. 

ಮುಂಬೈನಿಂದ ಕುಮಟಾಕ್ಕೆ ಬಂದ ವ್ಯಕ್ತಿಯೊಬ್ಬರಿಗೂ ಕೋವಿಡ್ ದೃಢಪಟ್ಟಿದೆ. ಮತ್ತೊಂದು ಪ್ರಕರಣದಲ್ಲಿ 73 ವರ್ಷದ ಹಿರಿಯ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿದ್ದು, ಮೂಲ ತಿಳಿದುಬಂದಿಲ್ಲ. ಮುಂಡಗೋಡದಲ್ಲಿ 51 ವರ್ಷದ ವ್ಯಕ್ತಿಗೆ ದೃಢಪಟ್ಟಿದ್ದು, ಅವರಿಗೂ ಸೋಂಕಿನ ಮೂಲ ತಿಳಿದುಬರಬೇಕಿದೆ. ತಾಲ್ಲೂಕಿನ 26 ವರ್ಷದ ಯುವಕ ಸೋಂಕಿತರೊಬ್ಬರ ಪ್ರಾಥಮಿಕ ಸಂಪರ್ಕಕ್ಕೆ ಬಂದು ಕೋವಿಡ್ ಪೀಡಿತರಾಗಿದ್ದಾರೆ.

ಹೊನ್ನಾವರದಲ್ಲಿ ಇಬ್ಬರಿಗೆ ಸೋಂಕು ದೃಢಪಟ್ಟಿದ್ದು, ಒಬ್ಬರು ಕುವೈತ್‌ನಿಂದ ಮರಳಿದವರು. ಮತ್ತೊಬ್ಬರು ರೋಗಿಯೊಬ್ಬರ ಪ್ರಾಥಮಿಕ ಸಂಪರ್ಕಕ್ಕೆ ಬಂದವರು. ಭಟ್ಕಳದ 40 ವರ್ಷದ ವ್ಯಕ್ತಿ ಸೋಂಕಿತರಾಗಿದ್ದು, ಮೂಲ ಹುಡುಕಲಾಗುತ್ತಿದೆ.

‘ವಿಡಿಯೊದಿಂದ ತಪ್ಪು ಸಂದೇಶ’: ಕಾರವಾರದ ವೈದ್ಯಕೀಯ ವಿಜ್ಞಾನಗಳ ಕೇಂದ್ರದ ಕೋವಿಡ್ ವಾರ್ಡ್‌ನಲ್ಲಿ ಶುಚಿತ್ವ ಕಾಪಾಡುತ್ತಿಲ್ಲ ಎಂದು ಆರೋಪಿಸಿ, ಸೋಂಕಿತ ವ್ಯಕ್ತಿಯೊಬ್ಬರು ವಿಡಿಯೊ ಮಾಡಿ ವಾಟ್ಸ್‌ಆ್ಯಪ್‌ಗಳ ಮೂಲಕ ಹರಿಯಬಿಟ್ಟಿದ್ದಾರೆ.

ಈ ಸಂಬಂಧ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿರುವ ಸಂಸ್ಥೆಯ ನಿರ್ದೇಶಕ ಡಾ.ಗಜಾನನ ನಾಯಕ, ‘ಆಸ್ಪತ್ರೆಯ ವ್ಯವಸ್ಥೆಯ ಬಗ್ಗೆ ವಿನಾಕಾರಣ ಆಪಾದನೆ ಮಾಡಿದ್ದಾರೆ. ಕೇವಲ 12 ತಾಸುಗಳ ಹಿಂದೆ ದಾಖಲಾಗಿರುವ ಅವರು, ವ್ಯವಸ್ಥೆಯ ಬಗ್ಗೆ ದೂರುತ್ತಿರುವುದು ವಿಷಾದನೀಯ’ ಎಂದು ಹೇಳಿದ್ದಾರೆ.

‘ಮೂರು ತಿಂಗಳಿನಿಂದ ನಿಯಮಾನುಸಾರ ವೈದ್ಯಕೀಯ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತಿದೆ. ತಪ್ಪು ಸಂದೇಶ ನೀಡುತ್ತಿರುವ ವಿಡಿಯೊ ಮಾಡಿದವರು ಹಾಗೂ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ಆರು ಮಂದಿ ಗುಣಮುಖ: ‘ಕ್ರಿಮ್ಸ್‌’ನ ಕೋವಿಡ್‌ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರು ಮಂದಿ ಗುಣಮುಖರಾಗಿದ್ದು, ಶನಿವಾರ ಬಿಡುಗಡೆ ಮಾಡಲಾಯಿತು. ಅವರಲ್ಲಿ ಅಂಕೋಲಾದ 45 ವರ್ಷದ ವ್ಯಕ್ತಿಯೂ ಸೇರಿದ್ದಾರೆ.

ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದರು. ಅವರನ್ನು ಕೋವಿಡ್ ವಾರ್ಡ್‌ನ ಐ.ಸಿ.ಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಉಳಿದಂತೆ, ಮುಂಡಗೋಡದ ಮೂವರು, ಹಳಿಯಾಳದ ಎರಡು ವರ್ಷದ ಮಗು, ದಾಂಡೇಲಿಯ ಒಬ್ಬರು ಸೋಂಕುಮುಕ್ತರಾಗಿದ್ದಾರೆ. 

ಉತ್ತರ ಕನ್ನಡದಲ್ಲಿ ಕೊರೊನಾ: ಅಂಕಿ ಅಂಶ

585 - ಒಟ್ಟು ಸೋಂಕಿತರು

354 - ಸಕ್ರಿಯ ಪ್ರಕರಣಗಳು

227 - ಗುಣಮುಖರಾದವರು

4 - ಮೃತರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು