ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್ ಚುನಾವಣೆ: ಗಣಪತಿ ಉಳ್ವೇಕರ್ ಬಿ.ಜೆ.ಪಿ ಅಭ್ಯರ್ಥಿ

Last Updated 19 ನವೆಂಬರ್ 2021, 16:31 IST
ಅಕ್ಷರ ಗಾತ್ರ

ಕಾರವಾರ: ಮೀನುಗಾರರ ಮುಖಂಡ ಗಣಪತಿ ಉಳ್ವೇಕರ್ ಅವರು ಈ ಬಾರಿ ವಿಧಾನಪರಿಷತ್ ಚುನಾವಣೆಗೆ ಉತ್ತರ ಕನ್ನಡ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿಯಾಗಿದ್ದಾರೆ. ಪಕ್ಷದ ಮುಖಂಡರು ನಿರೀಕ್ಷೆಯಂತೆಯೇ ಅವರನ್ನು ಆಯ್ಕೆ ಮಾಡಿದ್ದು, ಶುಕ್ರವಾರ ಅಧಿಕೃತವಾಗಿ ಹೆಸರು ಪ್ರಕಟಿಸಿದ್ದಾರೆ.

ಸದ್ಯ ಅವರು ಪಕ್ಷದ ಮೀನುಗಾರರ ಪ್ರಕೋಷ್ಠದ ಅಧ್ಯಕ್ಷರಾಗಿದ್ದಾರೆ. 2015ರಲ್ಲಿ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ನ ಶ್ರೀಕಾಂತ ಘೊಟ್ನೇಕರ್ ಅವರ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿದ್ದರು. ಆಗ ಗಣಪತಿ 1005 ಮತಗಳನ್ನು ಪಡೆದುಕೊಂಡಿದ್ದರು.

ಎರಡು ಬಾರಿ ಕಾರವಾರ ನಗರಸಭೆ ಅಧ್ಯಕ್ಷರಾಗಿದ್ದ ಅವರು, ಮಾಜಿ ಸಚಿವ ದಿ.ವಸಂತ ಅಸ್ನೋಟಿಕರ್ ಅವರ ಪಾಳಯದಲ್ಲಿ ಬೆಳೆದವರು. 2008ರಲ್ಲಿ ಮಾಜಿ ಸಚಿವ ಆನಂದ ಅಸ್ನೋಟಿಕರ್ ಅವರ ಜೊತೆ ಬಿ.ಜೆ.ಪಿ ಸೇರಿದ್ದರು. ಶಾಸಕಿ ರೂಪಾಲಿ ನಾಯ್ಕ ಅವರ ಆಪ್ತರ ಬಳಗದಲ್ಲಿ ಗುರುತಿಸಿಕೊಂಡಿರುವ ಗಣಪತಿ, ಪಕ್ಷಾಂತರದ ಬಳಿಕ ದೃಢವಾಗಿ ನಿಂತರು. ಈ ಹಿಂದೆ ನಿಗಮಗಳ ಅಧ್ಯಕ್ಷ ಸ್ಥಾನಕ್ಕೆ ಅವರ ಹೆಸರು ಪ್ರಸ್ತಾಪವಾಗಿದ್ದರೂ ಹುದ್ದೆ ಲಭಿಸಿರಲಿಲ್ಲ. ಈಗ ವಿಧಾನಪರಿಷತ್ ಟಿಕೆಟ್ ನೀಡುವ ಮೂಲಕ ಪಕ್ಷವು ಕೊರತೆಯನ್ನು ನೀಗಿಸುವ ಯತ್ನ ಮಾಡಿದೆ.

ಗುರುವಾರ ಯಲ್ಲಾಪುರದಲ್ಲಿ ನಡೆದ ಬಿ.ಜೆ.ಪಿ ಜನ ಸ್ವರಾಜ್ ಸಮಾವೇಶದ ವೇದಿಕೆಯಲ್ಲಿ ಆಸೀನರಾಗಿ, ಭಾಷಣ ಮಾಡಿದಾಗಲೇ ಗಣಪತಿ ಅವರಿಗೆ ಟಿಕೆಟ್ ಖಚಿತವಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಅಲ್ಲದೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಭಾಷಣದಲ್ಲಿ ‘ನಿಮಗೆಲ್ಲ ಅಭ್ಯರ್ಥಿ ಯಾರೆಂಬ ಊಹೆ ಇದೆ. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ’ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾಗ ಮತ್ತಷ್ಟು ದೃಢವಾಗಿಯಿತು ಎಂದು ಸೇರಿದ್ದವರು ಮಾತನಾಡಿಕೊಂಡಿದ್ದರು.

ಪಕ್ಷವು ಅವರಿಗೆ ಟಿಕೆಟ್ ಪ್ರಕಟಿಸುವ ಮೂಲಕ ಜಿಲ್ಲೆಯಲ್ಲಿ ಚುನಾವಣೆಯ ರಣಭೇರಿಯನ್ನು ಅಧಿಕೃತವಾಗಿ ಬಾರಿಸಿದೆ. ಸದ್ಯ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬ ಕುತೂಹಲ ಏರ್ಪಟ್ಟಿದೆ. ಆ ಪಕ್ಷದ ಹುರಿಯಾಳಿನ ಹೆಸರು ಪ್ರಕಟವಾದ ಬಳಿಕ ಸ್ಪರ್ಧೆಯ ತೀವ್ರತೆ ಮತ್ತಷ್ಟು ಹೆಚ್ಚಾಗಲಿದೆ.

24 ಹೆಸರುಗಳಿದ್ದವು!:

ವಿಧಾನಪರಿಷತ್ ಚುನಾವಣೆಗೆ ಬಿ.ಜೆ.ಪಿ.ಯಿಂದ 24 ಮಂದಿ ಆಕಾಂಕ್ಷಿಗಳ ಹೆಸರನ್ನು ಕೇಂದ್ರ ಸಮಿತಿಗೆ ಕಳುಹಿಸಲಾಗಿತ್ತು ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ. ಅವರಲ್ಲಿ ಯಾರ ಹೆಸರು ಅಂತಿಮಗೊಂಡರೂ ಅವರಿಗೆ ಎಲ್ಲರೂ ಬೆಂಬಲಿಸಿ ಗೆಲ್ಲಿಸುವುದಾಗಿ ಹೇಳಿದ್ದರು. ಆದರೆ, ಕೆಲವು ದಿನಗಳಿಂದ ಗಣಪತಿ ಉಳ್ವೇಕರ್ ಅವರ ಹೆಸರೇ ಹೆಚ್ಚು ಮುನ್ನೆಲೆಗೆ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT