ಗುರುವಾರ , ಏಪ್ರಿಲ್ 22, 2021
25 °C
ಚಾತುರ್ಮಾಸ್ಯ ವ್ರತ ಆಚರಣೆಯ ವಿಶೇಷತೆ

ಹಸಿರು ಶ್ರೀಗಳ ವೃಕ್ಷ ಮಂತ್ರಾಕ್ಷತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಹಸಿರು ಸ್ವಾಮೀಜಿ ಎಂದೇ ಎಲ್ಲೆಡೆ ಪರಿಚಿತರಾಗಿರುವ ತಾಲ್ಲೂಕಿನ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಪ್ರತಿವರ್ಷದಂತೆ ಈ ವರ್ಷವೂ ಚಾತುರ್ಮಾಸ್ಯದಲ್ಲಿ ವೃಕ್ಷ ಮಂತ್ರಾಕ್ಷತೆ ನೀಡುತ್ತಿದ್ದಾರೆ.

ಪರಿಸರ ಸಂರಕ್ಷಣೆ ಜಾಗೃತಿ ಪ್ರತಿಯೊಬ್ಬರಲ್ಲೂ ಮೂಡಬೇಕು. ಮಠ ನೀಡಿದ ಹಸಿರು ಉಡುಗೊರೆಯನ್ನು ಪ್ರೀತಿಯಿಂದ ಬೆಳೆಸಬೇಕು ಎಂಬ ಆಶಯದಲ್ಲಿ ವೃಕ್ಷ ಮಂತ್ರಾಕ್ಷತೆಯನ್ನು ಸ್ವಾಮೀಜಿಗಳು ನೀಡುತ್ತಿದ್ದಾರೆ. ಬೇರೆ ಬೇರೆ ಅರಣ್ಯ ಪ್ರದೇಶಗಳಲ್ಲಿ ಲಭ್ಯವಿರುವ ಅನೇಕ ವೃಕ್ಷ ಪ್ರಭೇದಗಳು ಅನೇಕ ಕಾರಣಗಳಿಂದ ವಿನಾಶದ ಅಂಚಿಗೆ ಹೋಗುತ್ತಿರುವೆ. ಅಂತಹ ಸಸ್ಯಗಳನ್ನು ಬೆಳೆಸಿ ಶಿಷ್ಯರಿಗೆ ನೀಡಲಾಗುತ್ತಿದೆ.

ಸಂಪಿಗೆ, ಬಿಲ್ವ, ನೆಲ್ಲಿ, ಸಾಂಬಾರು ಗಿಡ, ಹಲಸು, ರಕ್ತ ಚಂದನ, ಮಾವು, ಸೀತಾ ಅಶೋಕ, ಪುತ್ರ ಸಂಜೀವಿನಿ, ನೇರಳೆ, ಪಾರಿಜಾತ, ಕದಂಬ, ಶಮಿ, ಮೊದಲಾದ ಹಣ್ಣು, ಹೂವು, ಔಷಧ ಸೇರಿದಂತೆ 22ಕ್ಕೂ ಹೆಚ್ಚು ಬಗೆಯ ಸಸ್ಯಗಳನ್ನು ಶ್ರೀಗಳು ವಿತರಿಸುತ್ತಿದ್ದಾರೆ. ಹೀಗೆ ವಿತರಿಸುವ ಸಸ್ಯಗಳನ್ನು ಮಠದ ಸಸ್ಯಲೋಕದಲ್ಲಿ ಬೆಳೆಸಲಾಗುತ್ತಿರುವುದು ಇನ್ನೊಂದು ವಿಶೇಷ. ಇದಕ್ಕೆ ಅರಣ್ಯ ಇಲಾಖೆ ಸಹ ಕೈಜೋಡಿಸುತ್ತಿದೆ.

2006ರ ಚಾತುರ್ಮಾಸ್ಯದಿಂದ ವೃಕ್ಷ ಮಂತ್ರಾಕ್ಷತೆ ನೀಡುವ ಕ್ರಮವನ್ನು ಶ್ರೀಗಳು ಆರಂಭಿಸಿದ್ದಾರೆ. ಈ ವರೆಗೂ ಶಿಷ್ಯರಿಗೆ ಮಂತ್ರಾಕ್ಷತೆ ಜೊತೆ ಸಸಿ ನೀಡುತ್ತಿರುವ ಸಂಖ್ಯೆ ಲಕ್ಷಕ್ಕೂ ದಾಟಿರಬಹುದು ಎನ್ನುತ್ತಾರೆ ಪರಿಸರ ಕಾರ್ಯಕರ್ತ ಅನಂತ ಹೆಗಡೆ ಅಶೀಸರ. ಸೀಮಾ ಭಿಕ್ಷೆಗೆ ಬರುವ ಭಕ್ತರೆಲ್ಲರಿಗೂ ಮಂತ್ರಾಕ್ಷತೆಯ ಜೊತೆ ಸಸಿಯನ್ನು ನೀಡುವದು ವಾಡಿಕೆ. ಪ್ರತಿ ಸೀಮಾ ಭಿಕ್ಷೆಯಲ್ಲಿ 250ಕ್ಕೂ ಅಧಿಕ ಸಸಿಗಳನ್ನು ವಿತರಿಸಲಾಗುತ್ತದೆ. ವನವಾಸಿಗಳಿಗೂ ಹಸಿರು ಪ್ರೀತಿಯಿಂದ ಶ್ರೀಗಳು ವೃಕ್ಷ ನೀಡುತ್ತಾರೆ. ಶಿಷ್ಯರ ಮೊಗದಲ್ಲೂ ಹಸಿರು ಪ್ರೀತಿ ಮೂಡಿಸುತ್ತಿದ್ದಾರೆ ಎನ್ನುತ್ತಾರೆ ಮಠದ ಪ್ರಮುಖರು.

ಪ್ರತಿವರ್ಷ ಸಸ್ಯಲೋಕದಲ್ಲಿ 25ಸಾವಿರಕ್ಕೂ ಹೆಚ್ಚು ಸಸಿಗಳನ್ನು ನರ್ಸರಿ ಮಾಡಿ ಬೆಳೆಸಲಾಗುತ್ತಿದೆ. ಅರಣ್ಯ ಇಲಾಖೆ, ಅರಣ್ಯ ಕಾಲೇಜಿನವರು ಬೀಜವನ್ನು ನೀಡಿ ಸಹಕರಿಸುತ್ತಾರೆ ಎನ್ನುತ್ತಾರೆ ಸಸ್ಯಲೋಕದ ಸಹ ಸಂಚಾಲಕ ಮಹಾಬಲೇಶ್ವರ ಗುಮ್ಮಾನಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು