ಶನಿವಾರ, ಜೂನ್ 12, 2021
23 °C
ಕುಮಟಾ ಉಪ ವಿಭಾಗಾಧಿಕಾರಿ ಎಂ.ಅಜಿತ್ ಭೇಟಿ

ಗೋಕರ್ಣ ದೇವಸ್ಥಾನ ಆಡಳಿತ ಹಸ್ತಾಂತರ ಪ್ರಕ್ರಿಯೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಕರ್ಣ: ಮಹಾಬಲೇಶ್ವರ ದೇವಸ್ಥಾನ ಹಸ್ತಾಂತರ ವಿವಾದಕ್ಕೆ ಸಂಬಂಧ ಪಟ್ಟಂತೆ ಕುಮಟಾ ಉಪ ವಿಭಾಗಾಧಿಕಾರಿ ಎಂ.ಅಜಿತ್ ಬುಧವಾರ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಸ್ಥಾನದ ಆಡಳಿತಾಧಿಕಾರಿಗೆ ನೋಟಿಸ್ ನೀಡುವುದರ ಮೂಲಕ ಹಸ್ತಾಂತರ ಪ್ರಕ್ರಿಯೆ ಪ್ರಾರಂಭಿಸಿದರು. ಮೇ 10ರಂದು ಸಂಪೂರ್ಣ ಆಡಳಿತ ವಹಿಸಿಕೊಡುವಂತೆ ಸೂಚಿಸಿದರು.

ಮೊದಲು ಮೇ 7ರಂದು ಹಸ್ತಾಂತರಿಸುವಂತೆ ಅವರು ದೇವಸ್ಥಾನದ ಆಡಳಿತಾಧಿಕಾರಿಗೆ ತಿಳಿಸಿದರು. ಆದರೆ, ಅಂದು ಸಾಧ್ಯವಿಲ್ಲ, ಮಠದ ಆಡಳಿತಾಧಿಕಾರಿ ಬೆಂಗಳೂರಿನಿಂದ ಬರಬೇಕಾಗಿದೆ. ಮಂಗಳೂರಿನಿಂದ ಮತ್ತೊಬ್ಬರು ಬರಬೇಕು. ಹಾಗಾಗಿ ಮೇ 10ರಂದು ಹಸ್ತಾಂತರಿಸುವುದಾಗಿ ದೇಗುಲ ಆಡಳಿತ ಮಂಡಳಿಯವರು ತಿಳಿಸಿದಾಗ ಉಪ ವಿಭಾಗಾಧಿಕಾರಿ ಒಪ್ಪಿಗೆ ಸೂಚಿಸಿದರು.

ದೇವಸ್ಥಾನದ ಚರ ಮತ್ತು ಸ್ಥಿರಾಸ್ಥಿ, ಚಿನ್ನಾಭರಣ, ಬೆಳ್ಳಿಯ ವಸ್ತುಗಳು ಹಾಗೂ ಇತರ ವಸ್ತುಗಳನ್ನು ಸರಿಯಾಗಿ ಪಟ್ಟಿ ಮಾಡಿ ಇಡುವಂತೆಯೂ ತಿಳಿಸಿದ್ದಾರೆ.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಎಂ.ಅಜಿತ್, ‘ಈಗ ನ್ಯಾಯಾಂಗ ನಿಂದನೆಯಾಗುವುದಿಲ್ಲ. ನಾವು ಈಗಾಗಲೇ ಹಸ್ತಾಂತರ ಪ್ರಕ್ರಿಯೆ ಪ್ರಾರಂಭಿಸಿದ್ದೇವೆ’ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಕುಮಟಾ ಸಿ.ಪಿ.ಐ. ಶಿವಪ್ರಕಾಶ ನಾಯ್ಕ, ಗೋಕರ್ಣ ಪಿ.ಎಸ್.ಐ ನವೀನ್ ನಾಯ್ಕ, ಗೋಕರ್ಣ ಕಂದಾಯ ಅಧಿಕಾರಿ ಕೆ.ಎಸ್.ಗೊಂಡ ಇದ್ದರು.

ಅಸಮಾಧಾನ: ಈ ಮಧ್ಯೆ ಉಪ ವಿಭಾಗಾಧಿಕಾರಿಯ ಕ್ರಮಕ್ಕೆ ಶ್ರೀ ಕ್ಷೇತ್ರ ಗೋಕರ್ಣ ರಕ್ಷಣಾ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ. ಅಧಿಕಾರಿಗೆ ಕಾಲಾವಕಾಶ ನೀಡುವ ಅಧಿಕಾರವಿಲ್ಲ. ಈಗಾಗಲೇ ಸುಪ್ರೀಂಕೋರ್ಟ್ ನೀಡಿದ್ದ ಗಡುವು ಮುಗಿದಿದೆ. ಸರ್ಕಾರ ಹೊರಡಿಸಿದ ಆದೇಶದಲ್ಲಿಯೂ ಕೂಡಲೇ ಅಧಿಕಾರ ಹಸ್ತಾಂತರಿಸಿಕೊಳ್ಳುವಂತೆ ಸೂಚಿಸಲಾಗಿದೆ. ಆದರೂ ಉಪ ವಿಭಾಗಾಧಿಕಾರಿ ರಾಮಚಂದ್ರಾಪುರ ಮಠದ ಬಗ್ಗೆ ಮೃದು ಧೋರಣೆ ತೋರಿಸಿ, ಮೇ 10ರವರೆಗೆ ಸಮಯಾವಕಾಶ ನೀಡಿದ ಕ್ರಮ ಸರಿಯಲ್ಲ ಎಂದು ಸಮಿತಿ ಆಕ್ಷೇಪಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು