ಶುಕ್ರವಾರ, ಮಾರ್ಚ್ 5, 2021
17 °C
ಅವಕಾಶದ ಪ್ರಪಂಚದತ್ತ ಹಳ್ಳಿ ಜನರ ಪ್ರಯಾಣಕ್ಕೆ ಪರಿಶ್ರಮ: ಗಿರೀಶ್ ಭಾರದ್ವಾಜ್

ಗ್ರಾಮೀಣ ಮನಸ್ಸುಗಳ ನಡುವೆ ಸೇತುವೆ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Deccan Herald

ಕಾರವಾರ: ‘ನಾವು ಕೇವಲ ಭೂಮಿಯ ತುಂಡುಗಳನ್ನು ಜೋಡಿಸುವುದಲ್ಲ, ಹಳ್ಳಿಯ ಜನರನ್ನು ಅವಕಾಶದ ಜಗತ್ತಿಗೆ ಸಂಪರ್ಕಿಸುತ್ತಿದ್ದೇವೆ. ಅವರ ಕನಸು ಮತ್ತು ಹೃದಯಗಳನ್ನು ಬೆಸೆಯುತ್ತಿದ್ದೇವೆ..’

ಹೀಗೆ ಹೇಳುತ್ತ ನಗುತ್ತಾ ಮಾತಿಗಿಳಿದವರು ‘ತೂಗುಸೇತುವೆಗಳ ಸರದಾರ’ ಎಂದೇ ಪ್ರಸಿದ್ಧರಾಗಿರುವ ಗಿರೀಶ್ ಭಾರದ್ವಾಜ್. ಬಾಹ್ಯ ಜಗತ್ತಿನೊಂದಿಗೆ ಸಂಪರ್ಕಕ್ಕೆ ಹಾತೊರೆಯುತ್ತಿದ್ದ ನೂರಾರು ಹಳ್ಳಿಗಳನ್ನು ತಮ್ಮ ಕಾರ್ಯದ ಮೂಲಕ ಬೆಸೆದ ಕೀರ್ತಿ ಅವರಿಗೆ ಸಲ್ಲುತ್ತದೆ. ಈವರೆಗೆ ಸುಮಾರು 135 ತೂಗುಸೇತುವೆಗಳನ್ನು ನಿರ್ಮಿಸಿರುವ ಅವರ ಸಾಧನೆಯನ್ನು ಪರಿಗಣಿಸಿದ ಕೇಂದ್ರ ಸರ್ಕಾರ 2017ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿಯಿಂದಲೂ ಪುರಸ್ಕರಿಸಿದೆ. 

ಕರಾವಳಿ ಉತ್ಸವದ ಅಂಗವಾಗಿ ಅವರು ಕಾರವಾರಕ್ಕೆ ಬಂದಿದ್ದಾಗ ‘ಪ್ರಜಾವಾಣಿ’ ಜತೆ ತಮ್ಮ ಮನದಾಳ ಹಂಚಿಕೊಂಡರು.

* ಅದೆಷ್ಟೋ ಹಳ್ಳಿಗಳ ನಡುವೆ ಹರಿಯುವ ಹಳ್ಳಗಳನ್ನು ದಾಟಲು ಇಂದಿಗೂ ಪರದಾಡುವ ಸ್ಥಿತಿಯಿದೆ. ಅವುಗಳ ಸಂಪರ್ಕಕ್ಕೆ ಏನು ಮಾಡಬಹುದು?
ಇದಕ್ಕೆ ಸರ್ಕಾರದಿಂದ ಅನುದಾನ ಮತ್ತು ಜನರ ಇಚ್ಛಾಶಕ್ತಿ ಬೇಕು. ಈಗ ಜನರ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಯಾರು ಕೂಡ ಪಾದಚಾರಿ ಸೇತುವೆ ಮಾಡಿಕೊಡಿ ಎಂದು ಕೇಳುತ್ತಿಲ್ಲ. ತಮ್ಮ ವಾಹನ ಸಾಗುವ ರೀತಿಯ ಸೇತುವೆಯೇ ಬೇಕು ಎನ್ನುತ್ತಾರೆ. ಪಾದಚಾರಿ ಸೇತುವೆಯು 400 ಕೆ.ಜಿ.ಗಳಷ್ಟು ತೂಕವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರಬೇಕು ಎಂಬ ನಿಯಮವಿದೆ. ಆದರೆ, ಹಳ್ಳಿಗಳಲ್ಲಿ ಅಷ್ಟು ಬೇಕಾಗುವುದಿಲ್ಲ.

* ಅನಗತ್ಯವಾಗಿ ದೊಡ್ಡ ಸೇತುವೆಗಳ ನಿರ್ಮಿಸುವ ಬದಲು ತೂಗುಸೇತುವೆ ಕಟ್ಟಬಹುದಲ್ಲ?
ಅಗತ್ಯಕ್ಕೆ ಸರಿಯಾಗಿ ಸೇತುವೆಗಳನ್ನು ನಿರ್ಮಿಸಬಹುದು. ಊರಿನವರ ಇಚ್ಛಾಶಕ್ತಿಯಿದ್ದು, ತಮ್ಮನ್ನು ತೊಡಗಿಸಿಕೊಂಡರೆ ಮತ್ತೂ ಕಡಿಮೆ ಖರ್ಚು ಸಾಕಾಗುತ್ತದೆ. ತೂಗುಸೇತುವೆ ಕಟ್ಟಿದಲ್ಲಿ ಮುಂದೆ ದೊಡ್ಡ ಸೇತುವೆ ನಿರ್ಮಿಸುತ್ತಿದ್ದರೆ ಶೇ 60ರಷ್ಟು ಸಲಕರಣೆಗಳನ್ನು ಬಿಚ್ಚಿ ತೆಗೆದುಕೊಂಡು ಹೋಗಬಹುದು.

* ತೂಗುಸೇತುವೆಗಳು ಪ್ರವಾಸೋದ್ಯಮಕ್ಕೂ ತುಂಬ ಕೊಡುಗೆ ನೀಡುತ್ತಿವೆಯಲ್ಲ?
1993ರಿಂದ ತೂಗುಸೇತುವೆಗಳನ್ನು ನಿರ್ಮಿಸುತ್ತಿರುವ ನಾವು, ಗ್ರಾಮೀಣ ಭಾಗಗಳನ್ನು ಬೆಸೆದಿದ್ದೇವೆ. ಆದರೆ, ಇಂದು ಪ್ರವಾಸಿ ತಾಣಗಳಲ್ಲಿ ನಿರ್ಮಿಸಲು ಬೇಡಿಕೆ ಬರುತ್ತಿದೆ. ಅಲ್ಲಿ ಮೋಜಿನಾಟಗಳನ್ನು ತಡೆದುಕೊಳ್ಳುವ ರೀತಿಯಲ್ಲಿ ಭದ್ರವಾದ ನಿರ್ಮಾಣ ಬೇಕಾಗುತ್ತದೆ. ಅದಕ್ಕೆ ವೆಚ್ಚ ಸ್ವಲ್ಪ ಜಾಸ್ತಿಯಾಗುತ್ತದೆ.

* ನಿರ್ಮಾಣಕ್ಕೆ ಬಳಸುವ ಪರಿಕರಗಳು ಆಯಾ ಪ್ರದೇಶಕ್ಕೆ ಅನುಗುಣವಾಗಿ ಬದಲಾಗುತ್ತವೆಯೇ?
ಹೌದು. ಈ ಮೊದಲು ಕಡಿಮೆ ಖರ್ಚಿನ ಸಲುವಾಗಿ ಕರಾವಳಿಯಲ್ಲೂ ಸಾಮಾನ್ಯ ಕಬ್ಬಿಣವನ್ನೇ ಬಳಸಲಾಗುತ್ತಿತ್ತು. ಯಾರೂ ಅದನ್ನು ನಿರ್ವಹಣೆ ಮಾಡದ ಕಾರಣ ಕೆಲವು ವರ್ಷಗಳ ಬಳಿಕ ತುಕ್ಕು ಹಿಡಿದು ಹಾಳಾಗುತ್ತಿತ್ತು. ಈಗ 125 ಮೈಕ್ರಾನ್ ಸತುವನ್ನು ಬಳಿದಿರುವ ಕಬ್ಬಿಣವನ್ನು ಉಪಯೋಗಿಸುವ ಕಾರಣ ದೀರ್ಘ ಕಾಲ ಬಾಳಿಕೆ ಬರುತ್ತದೆ.

* ಜನರ ಪ್ರೀತಿ ಮತ್ತು ಗೌರವದ ಬಗ್ಗೆ ಏನನ್ನುತ್ತೀರಿ?
ಇದು ಕೋಟಿ ರೂಪಾಯಿ ಕೊಟ್ಟರೂ ಸಿಗುವುದಿಲ್ಲ. ಕೆಲವು ಕುಗ್ರಾಮಗಳಿಂದ ಕರೆ ಮಾಡಿ, ‘ಸರ್, ನೀವು ತೂಗುಸೇತುವೆ ನಿರ್ಮಾಣ ಮಾಡಿದ ಬಳಿಕ ನಮ್ಮ ಹಳ್ಳಿಯಲ್ಲಿ ಹೆರಿಗೆ ಸಲುವಾಗಿ ಮಹಿಳೆಯರು ಸಾವನ್ನಪ್ಪಿದ ಉದಾಹರಣೆಗಳೇ ಇಲ್ಲ’ ಎಂದಾಗ ಕಣ್ತುಂಬಿ ಬರುತ್ತದೆ. 

* ಸೇತುವೆ ನಿರ್ಮಾಣ ಮತ್ತು ಜನರ ಒಡನಾಟವನ್ನು ಹೇಗೆ ವಿಶ್ಲೇಷಿಸುತ್ತೀರಿ?
ಕೇವಲ ಸೇತುವೆಗಳನ್ನು ನಿರ್ಮಿಸುವುದು ನನ್ನ ಉದ್ದೇಶವಲ್ಲ. ಅದು ಜನರಿಗೆ ಮಾಡುವ ಸೇವೆ. ನಾನು ಜೀವನದ ಸಂಜೆಯಲ್ಲಿದ್ದೇನೆ. ನಾಳೆ ನಾನು ಇಲ್ಲದಿದ್ದರೂ ನನ್ನ ಸೇತುವೆ 100 ವರ್ಷ ಬಾಳಿಕೆ ಬರಬೇಕು ಎಂಬುದಷ್ಟೇ ಚಿಂತನೆ ಎನ್ನುತ್ತಾ ಗಿರೀಶ್ ಭಾರದ್ವಾಜ್ ಜೋರಾಗಿ ನಕ್ಕರು.

ಮರುಕ್ಷಣದಲ್ಲಿ ಅಷ್ಟೇ ಗಂಭೀರವಾಗಿ, ‘ತೂಗುಸೇತುವೆ ನಿರ್ಮಾಣವೆಂದರೆ ನಾವು ಜನರ ಜೀವಗಳೊಂದಿಗೆ ಆಟವಾಡಿದಂತೆ. ಎರಡು ಕಂಬಗಳು, ಎರಡು ಲಂಗರು, ಎರಡು ಸ್ಟೀಲ್ ಹಗ್ಗಗಳ ಆಧಾರದಲ್ಲಿ ನಾವು ನಿರ್ಮಾಣ ಮಾಡುತ್ತೇವೆ. ಇದು ಅತ್ಯಂತ ಸೂಕ್ಷ್ಮ ಕೆಲಸವಾಗಿರುವ ಕಾರಣ ನಾನು ಸ್ಥಳದಲ್ಲೇ ಇದ್ದು ಇಂಚು ಇಂಚು ಕೆಲಸವನ್ನೂ ಪರಿಶೀಲನೆ ಮಾಡುತ್ತೇನೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು