ಒಂಟಿ ಮಹಿಳೆಗೆ ‘ಭೀಮ ಬಲ’

ಹೆಬ್ರಿ: ತಾಲ್ಲೂಕಿನ ವರಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡುಕುಡೂರು ಒಳಗುಡ್ಡೆಯ ಹಳೆ ಮಜಲು ಪ್ರೇಮಾ ಪೂಜಾರಿ ಎಂಬುವರು ಬಂಡೆಯ ಮೇಲೆ ಅಡುಗೆ ಮಾಡಿ, ಅಕ್ಕಪಕ್ಕದ ಮನೆಯ ಜಗುಲಿಯಲ್ಲಿ ವಾಸ ಮಾಡುತ್ತಿರುವ ಸುದ್ದಿ ತಿಳಿದ ತಹಶೀಲ್ದಾರ್ ಪುರಂದರ್ ಕೆ, ಸೋಮವಾರ ಸ್ಥಳಕ್ಕೆ ಭೇಟಿ ನೀಡಿ, ಮಹಿಳೆಯ ಕಷ್ಟ ವಿಚಾರಿಸಿದರು.
‘ಗಂಡ ಮನೆಗೆ ಬರುವುದಿಲ್ಲ, ಮಕ್ಕಳು ಇಲ್ಲ, ಮನೆಯವರೂ ನೋಡಿಕೊಳ್ಳುವುದಿಲ್ಲ’ ಎಂದು ಮಹಿಳೆ ಕಷ್ಟ ಹೇಳಿಕೊಂಡರು. ಎದುರಿಗೆ ನಿಂತು ಮಾತನಾಡಿದ ವ್ಯಕ್ತಿ ತಹಶೀಲ್ದಾರ್ ಎಂದು ತಿಳಿದಾಗ ಅಸಹಾಯಕ ಸ್ಥಿತಿಯಲ್ಲಿರುವ ಪ್ರೇಮಾ ಕಣ್ಣೀರಾದರು.
‘ನಿಮ್ಮ ಜೊತೆಗೆ ನಾವು ಇದ್ದೇವೆ, ದೇವರು ಇದ್ದಾನೆ. ಇನ್ನುಳಿದ ದಿನಗಳನ್ನು ಸಾಧ್ಯವಾದಷ್ಟು ಖುಷಿಯಿಂದ ಕಳೆಯಿರಿ’ ಎಂದು ಹೇಳಿ ಧೈರ್ಯ ತುಂಬಿದ ತಹಶೀಲ್ದಾರ್, ಅಕ್ಕಿ, ಆಹಾರ ಧಾನ್ಯಗಳ ಕಿಟ್ ಮತ್ತು ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿದರು.
ಪ್ರೇಮಾ ಅವರ ಅಣ್ಣನನ್ನು ಸ್ಥಳಕ್ಕೆ ಕರೆಯಿಸಿದ ತಹಶೀಲ್ದಾರ್, ‘ನಿಮ್ಮ ವೈಯಕ್ತಿಕ ಸಮಸ್ಯೆ ಏನೇ ಇದ್ದರೂ, ಒಡಹುಟ್ಟಿದ ತಂಗಿಯನ್ನು ದೂರ ಮಾಡಿ ಬೀದಿಗೆ ಹಾಕಬೇಡಿ. ಕುಟುಂಬದ ಜಮೀನನ್ನು ಸಮಾನವಾಗಿ ಹಂಚಿಕೆ ಮಾಡಿ ಪ್ರೇಮಾ ಅವರಿಗೂ ಪಾಲು ನೀಡಿ. ಕಂದಾಯ ಇಲಾಖೆಯ ಕೆಲಸ ಮತ್ತು ಕಾನೂನು ನೆರವು ನೀಡಲು ನಾವು ಸಿದ್ಧ’ ಎಂದರು.
ಶೇ 75ರಷ್ಟು ಅಂಗವಿಕಲರಾಗಿರುವ ಪ್ರೇಮಾ ಅವರಿಗೆ ಅಂಗವಿಕಲ ವೇತನ ಸಹಿತ ಸರ್ಕಾರದ ವಿವಿಧ ಸವಲತ್ತು ನೀಡಲು ಶೀಘ್ರ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ಭರವಸೆ ನೀಡಿದರು. ಗಂಡ ಮನೆಗೆ ಬಾರದಿರುವುದು, ಮನೆ ಮಂದಿ ನೋಡಿಕೊಳ್ಳದಿರುವ ಬಗ್ಗೆ ತನಿಖೆ ನಡೆಸುವಂತೆ ಕಂದಾಯ ನಿರೀಕ್ಷಕ ಹಿತೇಶ್ ಯು.ಬಿ ಅವರಿಗೆ ತಹಶೀಲ್ದಾರ್ ಸೂಚನೆ ನೀಡಿದರು.
ಮನೆ ನಿರ್ಮಾಣಕ್ಕೆ ಸಿದ್ಧತೆ: ಪಡುಕುಡೂರು ದಲಿತ ಸಂಘರ್ಷ ಸಮಿತಿಯು ದಲಿತ ಮುಖಂಡ ಶೇಖರ್ ಹಾವಂಜೆ ನೇತೃತ್ವದ ತಂಡವು ಈ ಮಹಿಳೆಗೆ ಮನೆ ನಿರ್ಮಿಸಿಕೊಡಲು ಮುಂದಾಗಿದ್ದು, ಈಗಾಗಲೇ ಮನೆಗೆ ತಳಪಾಯ ಹಾಕಲಾಗಿದೆ. ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಜಿಲ್ಲಾ ಘಟಕದ ಸಹಕಾರದಲ್ಲಿ ಗೋಡೆಗೆ ಇಟ್ಟಿಗೆಯನ್ನು ನೀಡಲಾಗಿದೆ. ಶಿವಪುರದ ಮುಖಂಡ ಸುರೇಶ ಶೆಟ್ಟಿ ಮನೆಗೆ ಬೇಕಾಗುವಷ್ಟು ಸಿಮೆಂಟ್ ಶೀಟ್ ನೀಡುವುದಾಗಿ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.