ಗುರುವಾರ , ಜುಲೈ 29, 2021
21 °C
ಯುವಕರ ತಂಡದಿಂದ ಮಾದರಿ ಕಾರ್ಯ

ಶಿರಸಿ | ಕೊರೊನಾ ಸೋಂಕಿತರ ಕುಟುಂಬದ ಆಪದ್ಬಾಂಧವರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಕೊರೊನಾ ಸೋಂಕು ಪೀಡಿತರನ್ನು ಹಲವರು ವಿನಾಕಾರಣ ವಕ್ರದೃಷ್ಟಿದಿಂದ ನೋಡುವುದನ್ನು ಗಮನಿಸಿದ ಯುವಕರ ತಂಡವೊಂದು, ಜನರಲ್ಲಿರುವ ನಕಾರಾತ್ಮಕ ಭಾವವನ್ನು ಹೊಡೆದೋಡಿಸಲು ಪ್ರಯತ್ನಿಸುತ್ತಿರುವ ಜತೆಗೆ, ಕೋವಿಡ್ 19 ಕಾಯಿಲೆ ಬಂದಿರುವ ವ್ಯಕ್ತಿಯ ಕುಟುಂಬಕ್ಕೆ ನೆರವಾಗುವ ಕಾರ್ಯ ಮಾಡುತ್ತ, ಮಾದರಿಯಾಗಿದೆ.

ಇಲ್ಲಿನ ಚಿಪಗಿ ನಾರಾಯಣಗುರು ನಗರದಲ್ಲಿ ನಾಲ್ಕೈದು ಯುವಕರು ಸಕ್ರಿಯರಾಗಿ ಈ ಕಾರ್ಯದಲ್ಲಿ ತೊಡಗಿದ್ದಾರೆ. ‘ಕೋವಿಡ್ 19 ಗಂಭೀರ ಕಾಯಿಲೆಯಲ್ಲ, ಆದರೆ, ಜನರು ಸೋಂಕಿತರನ್ನು ಅನುಮಾನದ ದೃಷ್ಟಿಯಿಂದ ನೋಡುತ್ತಾರೆ. ಆ ಮೂಲಕ ಅವರ ಕುಟುಂಬದವರ ಆತ್ಮಸ್ಥೈರ್ಯ ಕಳೆಯುತ್ತಾರೆ. ಇದನ್ನು ಹತ್ತಿರದಿಂದ ಗಮನಿಸಿದ ನಾವು, ಸೋಂಕಿಗೆ ಒಳಗಾದ ಕುಟುಂಬಕ್ಕೆ ನೆರವಾದೆವು. ಅವರ ಮನೆಗೆ ಅಗತ್ಯವಿರುವ ಸಾಮಗ್ರಿಗಳನ್ನು ಪೂರೈಸಲು ಪ್ರಾರಂಭಿಸಿದೆವು’ ಎನ್ನುತ್ತಾರೆ ತಂಡದ ಪ್ರಮುಖ ಗೌರೀಶ ನಾಯ್ಕ.

‘ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಾಗ ಇಡೀ ಕುಟುಂಬ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಅವರಿಗೆ ದಿನಸಿ, ಹಾಲು, ಅನಾರೋಗ್ಯಕ್ಕೊಳಗಾದವರು ಇದ್ದರೆ ಔಷಧ ಬೇಕಾಗುತ್ತದೆ. ಇಂತಹುದೇ ಘಟನೆ ಸಮೀಪದಲ್ಲೇ ನಡೆಯಿತು. ಆಗ ನಾವು, ಅವರ ಕುಟುಂಬಕ್ಕೆ ಸಾಂತ್ವನ ಹೇಳಿ, ಅವರಿಗೆ ಅಗತ್ಯ ಸಾಮಗ್ರಿಗಳನ್ನು ತಂದು, ಮನೆಯ ಗೇಟಿನ ಬಳಿ ಇಟ್ಟು ಬರುತ್ತಿದ್ದೆವು. ನಮ್ಮ ನಡವಳಿಕೆಯನ್ನು ಕಂಡು, ಸುತ್ತಮುತ್ತಲಿನವರೂ ಸಹ ಕ್ರಮೇಣ ಬದಲಾದರು’ ಎನ್ನುತ್ತಾರೆ ಅವರು.

‘ಚಿಕಿತ್ಸೆ ಪಡೆದು, ಸೋಂಕಿನಿಂದ ಮುಕ್ತರಾಗಿ ಬಂದ ವ್ಯಕ್ತಿ, ಅವರ ಕುಟುಂಬವನ್ನು ಆತ್ಮೀಯವಾಗಿ ಕಾಣಬೇಕು. ಇಲ್ಲವಾದಲ್ಲಿ ಅವರ ಮಾನಸಿಕ ಸ್ಥೈರ್ಯ ಕುಗ್ಗುತ್ತದೆ. ನಮ್ಮ ಭಾಗದ ಜನರಲ್ಲಿ ನಾವು ಈ ಜಾಗೃತಿಯನ್ನು ಮೂಡಿಸುತ್ತಿದ್ದೇವೆ. ಇದರ ಪರಿಣಾಮವಾಗಿ, ಅನೇಕರ ಸೋಂಕಿನಿಂದ ಗುಣಮುಖರಾಗಿ ಬಂದವರನ್ನು ನೋಡುವ ದೃಷ್ಟಿಕೋನ ಬದಲಾಗಿದೆ’ ಎಂದು ಅವರು ವಿವರಿಸಿದರು.

 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು