ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಅನಧಿಕೃತ ನಳ ಸಂಪರ್ಕ ಅವ್ಯಾಹತ: ನಗರಸಭೆಯಿಂದ ನೋಟಿಸ್ ಜಾರಿ

ನೀರಿನ ಅಭಾವ ಎದುರಾಗುವ ಆತಂಕ
Last Updated 14 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಶಿರಸಿ: ನಗರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ನಳ ಸಂಪರ್ಕ ಹಾಗೂ ಅಧಿಕೃತ ಸಂಪರ್ಕಗಳಿಗೆ ವಿದ್ಯುತ್ ಪಂಪ್ ಜೋಡಣೆಯ ಪ್ರಕರಣಗಳು ಅವ್ಯಾಹತವಾಗಿರುವ ಕಾರಣ ಬೇಸಿಗೆಯಲ್ಲಿ ನೀರಿನ ತುಟಾಗ್ರತೆ ಉಂಟಾಗುವ ಆತಂಕ ಎದುರಾಗಿದೆ.

ನಗರದ ಎಲ್ಲ 31 ವಾರ್ಡ್‌ಗಳಿಗೆ ನಗರಸಭೆ ಕುಡಿಯುವ ನೀರು ಪೂರೈಕೆ ಮಾಡುತ್ತದೆ. ನೀರು ಪೂರೈಕೆ ಮಾಡುವ ಪೈಪ್‌ಗಳ ಮೂಲಕ ಕೆಲವರು ಅನಧಿಕೃತ ನಳ ಸಂಪರ್ಕ ಪಡೆದುಕೊಂಡಿದ್ದಾರೆ. ಇನ್ನು ಕೆಲವರು ಅನಧಿಕೃತ ಹಾಗೂ ಅಧಿಕೃತ ಸಂಪರ್ಕಗಳಿಗೆ ಅನುಮತಿಯಿಲ್ಲದೇ ವಿದ್ಯುತ್ ಪಂಪ್‌ ಬಳಸಿ, ನೀರನ್ನು ಬಳಸುತ್ತಿದ್ದಾರೆ. ವಿದ್ಯಾನಗರ, ಗಣೇಶ ನಗರ, ಕಸ್ತೂರಬಾ ನಗರ, ಮರಾಠಿಕೊಪ್ಪ, ಕೋಟೆಕೆರೆ ಸುತ್ತಲಿನ ಪ್ರದೇಶ, ಶ್ರದ್ಧಾನಂದ ಗಲ್ಲಿ ಮೊದಲಾದ ಕಡೆಗಳಲ್ಲಿ ಇಂತಹ ಅನಧಿಕೃತ ಸಂಪರ್ಕಗಳನ್ನು ನಗರಸಭೆ ಗುರುತಿಸಿದೆ.

ಈ ರೀತಿ ಅನಧಿಕೃತ ಪಂಪ್‌ಸೆಟ್ ಬಳಕೆಯ ಕಾರಣಕ್ಕೆ ನಿಯಮಿತವಾಗಿ ಕರ ಪಾವತಿಸುವ ನಮಗೆ ಕುಡಿಯುವ ನೀರು ಸರಿಯಾಗಿ ಬರುವುದಿಲ್ಲ. ನೀರು ಬಿಡುವ ಅವಧಿಯಲ್ಲೂ ಕಾಯುತ್ತ ಕುಳಿತುಕೊಳ್ಳುವ ಪರಿಸ್ಥಿತಿ ಬಂದಿದೆ. ನಗರಸಭೆ ಪ್ರತಿದಿನ ನೀರು ಕೊಡುತ್ತಿದ್ದರೂ, ಮನೆ ಬಾಗಿಲಿಗೆ ಬರುವಷ್ಟರಲ್ಲಿ ನಳದಲ್ಲಿ ಬರುವ ನೀರಿನ ಹರಿವು ಸಣ್ಣದಾಗುತ್ತದೆ’ ಎನ್ನುತ್ತಾರೆ ದೇವಿಕೆರೆಯ ವರ್ಷಾ ನಾಯ್ಕ.

ನಗರದಲ್ಲಿ 10,500ರಷ್ಟು ಅಧಿಕೃತ ನಳ ಸಂಪರ್ಕಗಳಿವೆ. ಇವುಗಳನ್ನು ಹೊರತುಪಡಿಸಿ, 1500ರಷ್ಟು ಅನಧಿಕೃತ ಸಂಪರ್ಕಗಳಿರಬಹುದೆಂದು ಅಂದಾಜಿಸಲಾಗಿದೆ. ಇದರಿಂದ ಪ್ರತಿದಿನ ಲಕ್ಷಾಂತರ ಲೀಟರ್ ನೀರು ನಷ್ಟವಾಗುತ್ತದೆ. ಅಲ್ಲದೇ, ಪೈಪ್‌ಲೈನ್‌ಗೆ ಪಂಪ್ ಅಳವಡಿಸಿರುವ ಪ್ರಕರಣಗಳೂ ಸಾಕಷ್ಟಿವೆ. ಕುಡಿಯಲು ಪೂರೈಕೆ ಮಾಡುವ ನೀರನ್ನು ಗಾರ್ಡನ್, ವಾಹನ ತೊಳೆಯಲು ಬಳಸುತ್ತಾರೆ. ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರೂ, ಇದು ನಿಂತಿಲ್ಲ ಎನ್ನುತ್ತಾರೆ ನಗರಸಭೆ ಸಿಬ್ಬಂದಿಯೊಬ್ಬರು.

ಕೆಂಗ್ರೆ ಹೊಳೆ ಹಾಗೂ ಮಾರಿಗದ್ದೆಯಿಂದ ನಗರಕ್ಕೆ ನೀರು ಪೂರೈಕೆಯಾಗುತ್ತದೆ. ಈ ಬಾರಿ ಮಾರಿಕಾಂಬಾ ಜಾತ್ರೆ ಇರುವುದರಿಂದ ಲಕ್ಷಾಂತರ ಜನರು ನಗರಕ್ಕೆ ಭೇಟಿ ನೀಡುತ್ತಾರೆ. ಈ ಸಂದರ್ಭದಲ್ಲಿ ನೀರಿನ ಕೊರತೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಕೆಂಗ್ರೆ ಹೊಳೆಯಲ್ಲಿ ಎರಡು ಒಡ್ಡು ನಿರ್ಮಿಸಲಾಗಿದೆ. ಮಾರಿಗದ್ದೆಯಲ್ಲಿ ಒಡ್ಡು ನಿರ್ಮಾಣ ಕಾರ್ಯ ನಡೆದಿದೆ. ಜಾತ್ರೆಯ ವೇಳೆ ಪ್ರತಿದಿನ ನೀರು ಸರಬರಾಜು ಮಾಡಲಾಗುವುದು. ಬೇಸಿಗೆಯಲ್ಲಿ ತುಸು ಕೊರತೆಯಾಗುವ ಸಾಧ್ಯತೆಯಿದೆ ಎಂದು ಪೌರಾಯುಕ್ತ ರಮೇಶ ನಾಯಕ ಪ್ರತಿಕ್ರಿಯಿಸಿದರು.

ಅನಧಿಕೃತ ನಳ ಸಂಪರ್ಕ ಹೊಂದಿರುವವರಿಗೆ ನೋಟಿಸ್ ನೀಡಲಾಗಿದೆ. ಅವರಲ್ಲಿ ಈಗಾಗಲೇ ಕೆಲವರು ಬಂದು, ಹಣ ಪಾವತಿಸಿ ಅಧಿಕೃತಪಡಿಸಿಕೊಳ್ಳುತ್ತಿದ್ದಾರೆ. ಅನಧಿಕೃತ ನಳ ಸಂಪರ್ಕಕ್ಕೆ ಕಡಿವಾಣ ಹಾಕಲಾಗುವುದು ಎಂದು ಹೇಳಿದರು.

*
ನಗರಸಭೆ ನೀರಿನ ಪೈಪ್‌ಲೈನ್‌ಗೆ ಅಕ್ರಮವಾಗಿ ವಿದ್ಯುತ್ ಪಂಪ್‌ಸೆಟ್ ಅಳವಡಿಸಿದವರ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಹೆಸ್ಕಾಂಗೆ ಪತ್ರ ಬರೆಯಲಾಗಿದೆ.
–ರಮೇಶ ನಾಯಕ,ಪೌರಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT