ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗೇರಿಗೆ ಸಚಿವ ಸ್ಥಾನ: ಹೆಚ್ಚಿದ ಕುತೂಹಲ

ಶಾಸಕರ ಅನರ್ಹತೆ ತಂದು ಕೊಟ್ಟೀತೇ ಲಾಭ; ಬಿಜೆಪಿಗರ ಲೆಕ್ಕಾಚಾರ
Last Updated 29 ಜುಲೈ 2019, 19:31 IST
ಅಕ್ಷರ ಗಾತ್ರ

ಶಿರಸಿ: ಅತೃಪ್ತ ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದ ಬೆನ್ನಲ್ಲೇ ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ದಾರಿ ಸುಗಮವಾಗಿದೆ.

ರಾಜೀನಾಮೆ ನೀಡಿದ ಅತೃಪ್ತರಲ್ಲಿ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಕೂಡ ಒಬ್ಬರು. ಅವರು ಸಚಿವ ಸ್ಥಾನದ ಆಕಾಂಕ್ಷಿಯಾಗಿ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಸುದ್ದಿ ಕಾಗೇರಿ ಬಣದಲ್ಲಿ ಕೊಂಚ ಬೇಸರ ಮೂಡಿಸಿತ್ತು. ‘ಬೇರೆ ಪಕ್ಷಗಳಿಂದ ಬಿಜೆಪಿಗೆ ಬರುವವರಿಗೆ ಪ್ರಾಧಾನ್ಯತೆ ನೀಡಿ, ಸಚಿವ ಸ್ಥಾನ ಹಂಚಿಕೆಯಾಗುತ್ತದೆ. ಹೀಗಾಗಿ ಕಾಗೇರಿ ಅವರನ್ನು ಸ್ಪೀಕರ್ ಮಾಡಬಹುದು ಅಥವಾ ಸಚಿವ ಸ್ಥಾನ ನೀಡದಿರಬಹುದು ಎಂಬ ಮಾಹಿತಿ ಸಿಕ್ಕಿತ್ತು. ಆದರೆ, ಅತೃಪ್ತರು ಅನರ್ಹಗೊಂಡಿದ್ದಾರೆ. ನ್ಯಾಯಾಲಯದ ಮೊರೆಹೋಗಿ, ಅಲ್ಲಿ ತಡೆಯಾಜ್ಞೆ ಸಿಕ್ಕಿದರೆ ಮಾತ್ರ ಅವರು ಸಚಿವ ಸಂಪುಟ ಸೇರಬಹುದು. ಇದು ವಿಳಂಬವಾಗುವುದರಿಂದ ಕಾಗೇರಿಗೆ ಮೊದಲ ಪಟ್ಟಿಯಲ್ಲೇ ಸಚಿವ ಸ್ಥಾನ ಸಿಗಬಹುದು’ ಎಂದು ಬಿಜೆಪಿ ಪ್ರಮುಖರೊಬ್ಬರು ಕಾರ್ಯಕರ್ತರ ಲೆಕ್ಕಾಚಾರ ಬಿಚ್ಚಿಟ್ಟರು.

’ರಾಜ್ಯದಿಂದ ಯಾರನ್ನೇ ಆಯ್ಕೆ ಮಾಡಿ ಪಟ್ಟಿ ಕಳುಹಿಸಿದರೂ, ಎಲ್ಲವನ್ನೂ ನಿರ್ಧರಿಸುವುದು ಹೈಕಮಾಂಡ್. ರಾಜ್ಯ ನಾಯಕರಿಗೆ ಒಲವಿದ್ದರೂ, ಹೈಕಮಾಂಡ್ ಕೃಪೆಯಿದ್ದರೆ ಮಾತ್ರ ಸಚಿವರಾಗಬಹುದು ಅಷ್ಟೇ. ಅಲ್ಲಿ ಆದ ನಿರ್ಧಾರದ ವಿರುದ್ಧ ಧ್ವನಿ ಎತ್ತುವಂತಿಲ್ಲ’ ಎಂದು ಹೇಳಲು ಅವರು ಮರೆಯಲಿಲ್ಲ.

ಶಿವರಾಮ ಹೆಬ್ಬಾರ್ ಮತ್ತು ವಿಶ್ವೇಶ್ವರ ಹೆಗಡೆ ಇಬ್ಬರೂ ಒಂದೇ ಜಿಲ್ಲೆಯವರು ಮತ್ತು ಹವ್ಯಕ ಸಮುದಾಯಕ್ಕೆ ಸೇರಿದವರು. ಬಿಜೆಪಿಯ ಹಿರಿಯ ಶಾಸಕರಲ್ಲಿ ಸುರೇಶಕುಮಾರ್, ರಾಮದಾಸ್, ರವಿ ಸುಬ್ರಹ್ಮಣ್ಯ ಇನ್ನೂ ಅನೇಕ ಬ್ರಾಹ್ಮಣರಿದ್ದಾರೆ. ಕಾಗೇರಿ ಹಿರಿಯ ಶಾಸಕರಾದರೂ ಒಂದೇ ಜಿಲ್ಲೆಯ ಇಬ್ಬರಿಗೆ ಸಚಿವ ಸ್ಥಾನ ನೀಡುವುದು ಅನುಮಾನ ಎಂದು ಬಿಜೆಪಿ ಪ್ರಮುಖರು ವಿಶ್ಲೇಷಿಸಿದ್ದರು.

‘ಕಾಗೇರಿ ಆರು ಬಾರಿ ಶಾಸಕರಾದವರು. ಹಿಂದೆ ಬಿಜೆಪಿ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದಾಗ ಉತ್ತಮವಾಗಿ ಕೆಲಸ ನಿರ್ವಹಿಸಿದ ಹೆಗ್ಗಳಿಕೆ ಅವರಿಗಿದೆ. ಪಕ್ಷದಲ್ಲೂ ಒಳ್ಳೆಯ ಹೆಸರು ಇರುವ ಅವರನ್ನು ಪಕ್ಷ ಪರಿಗಣಿಸುತ್ತದೆ. ಅವರಿಗೆ ಸಚಿವ ಸ್ಥಾನ ಸಿಗುವ ಎಲ್ಲ ನಿರೀಕ್ಷೆಯಿದೆ’ ಎನ್ನುತ್ತಾರೆ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಆರ್.ವಿ.ಹೆಗಡೆ ಚಿಪಗಿ.

ಅಡಿ ಹೊರಗಿಟ್ಟವರು ಅತಂತ್ರ

ಪಕ್ಷ ತೊರೆದು ಶಿವರಾಮ ಹೆಬ್ಬಾರ್ ಜೊತೆ ಬಿಜೆಪಿ ಸೇರಲು ಉತ್ಸುಕರಾಗಿದ್ದ ಕಾಂಗ್ರೆಸ್‌ನ ಬ್ಲಾಕ್‌ ಪ್ರಮುಖರು, ಕಾರ್ಯಕರ್ತರು ಈಗ ಅತಂತ್ರರಾಗಿದ್ದಾರೆ. ಪಕ್ಷದಿಂದ ಒಂದು ಅಡಿ ಹೊರಗಿಟ್ಟವರು ಈಗ ಕಾಂಗ್ರೆಸ್‌ನಲ್ಲಿ ನಿರ್ಲಕ್ಷ್ಯಕ್ಕೊಳಗಾಗಿದ್ದರೆ, ಬಿಜೆಪಿ ಅವರನ್ನು ಸ್ವೀಕರಿಸಲು ಸಿದ್ಧವಿಲ್ಲ. ಹೀಗಾಗಿ, ಅತ್ತವೂ ಇಲ್ಲ ಇತ್ತವೂ ಇಲ್ಲದೇ ಗೊಂದಲದಲ್ಲಿದ್ದಾರೆ. ಯಲ್ಲಾಪುರ ಕ್ಷೇತ್ರದ ಶಾಸಕರ ಅನರ್ಹತೆಯಿಂದ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುವ ತನಕ ಶಾಸಕರಿಲ್ಲದಂತಾಗಿದೆ. ಅಭಿವೃದ್ಧಿಯಲ್ಲಿ ಹಿಂದಿರುವ ಕ್ಷೇತ್ರ ಇನ್ನಷ್ಟು ಅವಗಣನೆಗೆ ಒಳಗಾಗಬಹುದು ಎಂದು ಜನರು ಆಡಿಕೊಳ್ಳುತ್ತಿದ್ದಾರೆ.

***

ವಿಶ್ವೇಶ್ವರ ಹೆಗಡೆ ಕಾಗೇರಿ ಹಿರಿಯ ಶಾಸಕರಾಗಿರುವುದರಿಂದ, ಪಕ್ಷ ಅವರ ಕಾರ್ಯವನ್ನು ಗುರುತಿಸಿರುವುದರಿಂದ ಅವರಿಗೆ ಸಚಿವ ಸ್ಥಾನ ಸಿಗುವುದು ಖಚಿತ. ಈಗ ಜಿಲ್ಲೆಯಲ್ಲಿ ಬೇರೆ ಸ್ಪರ್ಧೆಯೂ ಇಲ್ಲವಾಗಿದ್ದು, ಅವರ ಮಾರ್ಗ ಸುಗಮವಾಗಿದೆ

–ಕೆ.ಜಿ.ನಾಯ್ಕ.ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT