ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಗ್ಗ’ ದಾಖಲಾತಿಗೆ ಸರ್ಕಾರಕ್ಕೆ ಪ್ರಸ್ತಾವ

ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾಹಿತಿ
Last Updated 7 ಸೆಪ್ಟೆಂಬರ್ 2020, 14:34 IST
ಅಕ್ಷರ ಗಾತ್ರ

ಕುಮಟಾ: ‘ಇಡೀ ದೇಶದಲ್ಲಿ ವಿಶಿಷ್ಟ ಕೃಷಿ ಪದ್ಧತಿ ಹೊಂದಿರುವ ಅಘನಾಶಿನಿ ಹಿನ್ನೀರು ಪ್ರದೇಶದ ಕಗ್ಗ ಭತ್ತ ಬೆಳೆಯ ಪ್ರದೇಶವನ್ನು ಜೀವವೈವಿಧ್ಯ ಮಂಡಳಿಯಿಂದ ಗುರುತಿಸಲು ಸರ್ಕಾರಕ್ಕೆ ಶೀಘ್ರ ಪ್ರಸ್ತಾವ ಕಳುಹಿಸಲಾಗುವುದು’ ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.

ಇಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ಮಾಣಿಕಟ್ಟಾ ‘ಕಗ್ಗ’ ಭತ್ತ ಬೆಳೆಗಾರರ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು, ‘ಕಗ್ಗ ಭತ್ತ ಹಾಗೂ ನೈಸರ್ಗಿಕ ಮೀನು ಕೃಷಿ ಅಭಿವೃದ್ಧಿಗೆ ಮಾಣಿಕಟ್ಟಾ ಕಗ್ಗ ಭತ್ತ ಬೆಳೆಗಾರರ ಸಂಘದ ಅಧ್ಯಕ್ಷರಾಗಿದ್ದ ಸಿ.ಆರ್.ನಾಯ್ಕ ಸಾಕಷ್ಟು ಶ್ರಮಿಸಿದ್ದಾರೆ. ಈ ಕೃಷಿ ಪದ್ಧತಿಯನ್ನು ಮುಂದಿನ ಪೀಳಿಗೆ ನಡೆಸಿಕೊಂಡು ಹೋಗುವಂತೆ ನೋಡಿಕೊಳ್ಳಬೇಕಾಗಿದೆ’ ಎಂದರು.

‘ಪ್ರಸ್ತಾವ ಕಳುಹಿಸಿಕೊಡಿ’

‘ಕೃಷಿ ಇಲಾಖೆ, ಕಂದಾಯ ಇಲಾಖೆ ಹಾಗೂ ತಾಲ್ಲೂಕು ಪಂಚಾಯ್ತಿ ಸೇರಿ ತಾಲ್ಲೂಕು ಪಂಚಾಯ್ತಿ ಜೀವ ವೈವಿಧ್ಯ ಸಮಿತಿ ಸಭೆಯಲ್ಲಿ, ಇಲ್ಲಿ ಆಗಬೇಕಾದ ಪ್ರಮುಖ ಕೆಲಸಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು. ಸಮಗ್ರ ಕ್ರಿಯಾ ಯೋಜನೆಯೊಂದಿಗೆ ಜೀವ ವೈವಿಧ್ಯ ಮಂಡಳಿಗೆ ಪ್ರಸ್ತಾವ ಕಳುಸಿಕೊಡಬೇಕು. ಅದನ್ನು ಶಿಫಾರಸು ಮಾಡಿ ಮುಂದಿನ ಕ್ರಮಕ್ಕೆ ಸರ್ಕಾರದ ಕಳಿಸಿಕೊಡಲಾಗುವುದು’ ಎಂದು ಅನಂತ ಹೆಗಡೆ ತಿಳಿಸಿದರು.

ತಾಲ್ಲೂಕು ಪಂಚಾಯ್ತಿ ಸದಸ್ಯ ಜಗನ್ನಾಥ ನಾಯ್ಕ, ‘ಈ ಹಿಂದೆ ಸುಮಾರು ಮೂರು ಸಾವಿರ ಕ್ವಿಂಟಲ್ ಕಗ್ಗ ಭತ್ತ ಬೆಳೆಯುವ ಕೃಷಿ ಪದ್ಧತಿ ಸ್ಥಳೀಯ ಸಂಸ್ಕೃತಿಯ ಪ್ರತೀಕವಾಗಿತ್ತು. ಆದರೆ, ಈಗ ಅದು ಒಂದು ಪೀಳಿಗೆಗೆ ನಿಲ್ಲುವ ಆತಂಕ ಎದುರಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ನಿವೃತ್ತ ಕೃಷಿ ಸಹಾಯಕ ನಿರ್ದೇಶಕ ಎಸ್.ವಿ.ಹೆಗಡೆ ಮಾತನಾಡಿ, ‘ಕಗ್ಗ ಭತವನ್ನು ಜೀವ ವೈವಿಧ್ಯ ಮಂಡಳಿ ಗುರುತಿಸಬೇಕು. ರೈತರ ಪಹಣಿಯಲ್ಲಿ ಕಗ್ಗ ಭತ್ತ ಬೆಳೆ ದಾಖಲಾಗುತ್ತಿಲ್ಲ. ಬದಲಾಗಿ ನೀರು ಪಡೆ ಎಂದು ನಮೂದಿಸಲಾಗುತ್ತದೆ. ಇದರಿಂದ ರೈತರಿಗೆ ಬೆಳೆಸಾಲ ಸಿಗುತ್ತಿಲ್ಲ. ಇದರ ಬಗ್ಗೆ ಸಿ.ಆರ್. ನಾಯ್ಕ ಹೋರಾಟ ನಡೆಸಿದ್ದರು’ ಎಂದರು.

ಕಗ್ಗ ಭತ್ತ ಬೆಳೆಗಾರರ ಸಂಘದ ಜನಾರ್ದನ ನಾಯ್ಕ, ಆರ್.ಡಿ.ಪೈ, ನಾರಾಯಣ ಪಟಗಾರ, ಇಲ್ಲಿ ಎರಡನೇ ಬೆಳೆಯಾಗಿರುವ ನೈಸರ್ಗಿಕ ಮೀನು, ಸಿಗಡಿ, ಏಡಿ ಕೃಷಿ ಕೂಡ ರೈತರ ಪಹಣಿಯಲ್ಲಿ ದಾಖಲಾಗಬೇಕು ಎಂದರು. ಸಹಾಯಕ ಕೃಷಿ ನಿರ್ದೇಶಕಿ ಚಂದ್ರಕಲಾ ಬರ್ಗಿ ಸ್ವಾಗತಿಸಿದರು. ದೇವರಾಯ ನಾಯಕ ವಂದಿಸಿದರು.

ಕೃಷಿ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಜಿ.ವಿ.ನಾಯಕ, ಡಾ. ಎಂ.ಎಸ್.ಸ್ವಾಮಿನಾಥನ್ ಫೌಂಡೇಶನ್ ಸಂಶೋಧಕರಾದ ಬಸಪ್ಪ ಕರಡಿಗುಡ್ಡ, ಮಣಿಕಂಠ ಗುನಗಾ ಇದ್ದರು. ನಂತರ ಅನಂತ ಹೆಗಡೆ ಅಶೀಸರ, ಈಚೆಗೆ ನಿಧನರಾದ ರೈತ ಮುಖಂಡ ದಿವಂಗತ ಸಿ.ಆರ್.ನಾಯ್ಕ ಅವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT