ಗುರುವಾರ , ಮೇ 19, 2022
24 °C

ಉತ್ತರ ಕನ್ನಡ ವಿಭಜನೆ ಮಾತು: ಮಹೇಶ ಜೋಶಿ ಹೇಳಿಕೆಗೆ ತೀವ್ರ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಕೋಲಾ: 'ಉತ್ತರ ಕನ್ನಡ ಜಿಲ್ಲೆಯನ್ನು ಬೆಳವಣಿಗೆಯ ದೃಷ್ಟಿಯಿಂದ ವಿಭಜನೆ ಮಾಡಬೇಕು' ಎಂದು ಹೇಳಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರ ಹೇಳಿಕೆಗೆ ಹಲವರಿಂದ ತೀವ್ರ ಖಂಡನೆ ವ್ಯಕ್ತವಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕವು ಸೋಮವಾರ ಪಟ್ಟಣದಲ್ಲಿ ಆಯೋಜಿಸಿದ್ದ ಅಕ್ಷರೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆ ವಿಭಜನೆ ಕುರಿತು ಜೋಶಿ ಹೇಳಿಕೆ ನೀಡಿದ್ದರು. ಇದಕ್ಕೆ ಸಾಹಿತಿಗಳು, ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

'ಕನ್ನಡದ ವೇದಿಕೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಜಿಲ್ಲೆಯ ಜನರು ಭಾವನಾತ್ಮಕವಾಗಿ ಬೆಸೆದುಕೊಂಡಿದ್ದಾರೆ. ಈಗಷ್ಟೇ ವಿಭಜನೆಯ ವಿವಾದ ತಣ್ಣಗಾಗಿದೆ. ಮಹೇಶ ಜೋಶಿಯವರು ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಹಿತಿ ಮಹಾಂತೇಶ ರೇವಡಿ, 'ಜಿಲ್ಲೆ ವಿಭಜನೆಯ ಮಾತು ಈಗ ಅಪ್ರಸ್ತುತ. ಮಹೇಶ ಜೋಶಿ, ಸಾಹಿತ್ಯ ವೇದಿಕೆಯಲ್ಲಿ ವಿಭಜನೆ ಮಾತು ಆಡಿದ್ದು ಖಂಡನೀಯ. ಇದು ಜಿಲ್ಲೆಯ ಹಿತಾಸಕ್ತಿಗೆ ವಿರುದ್ಧವಾಗಿದೆ' ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: 

ಪರಿಷತ್ತಿನ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ರೋಹಿದಾಸ ನಾಯಕ, 'ಸಾಹಿತ್ಯ ವೇದಿಕೆಯಲ್ಲಿ ಈ ಚರ್ಚೆ ಅಪ್ರಸ್ತುತ. ಜಿಲ್ಲೆ ಆರ್ಥಿಕವಾಗಿ ಇನ್ನೂ ಪ್ರಬಲಗೊಳ್ಳಬೇಕು. ಆ ದಿಸೆಯಲ್ಲಿ ಪ್ರಯತ್ನ ಮುಂದುವರಿಯಬೇಕು' ಎಂದು ಹೇಳಿದರು.

ಸಿ.ಐ.ಟಿ.ಯು ಜಿಲ್ಲಾ ಘಟಕದ ಅಧ್ಯಕ್ಷೆ ಯಮುನಾ ಗಾಂವಕರ, 'ಸಾಹಿತಿಗಳಿಂದ ನಾಡು ಕಟ್ಟುವ ಕಾರ್ಯವಾಗಬೇಕು. ಜಿಲ್ಲೆಯ ಮಲೆನಾಡು, ಮಲೆನಾಡ ಸೆರಗು ಮತ್ತು ಕರಾವಳಿ ಒಗ್ಗೂಡುವಿಕೆಯಿಂದ ಇರುವ ಅನನ್ಯತೆ ಉಳಿಯಬೇಕು. ಕಾರ್ಯಕ್ರಮದಲ್ಲಿ ಸಾಹಿತ್ಯಿಕ ವಿಚಾರ ನಿರೂಪಣೆಯನ್ನು ಕೇಳಲು ಬಂದಿದ್ದೇವೆ ಹೊರತು, ಜಿಲ್ಲೆ ಒಡೆಯುವ ಮಾತು ಕೇಳಲು ಬಂದಿಲ್ಲ. ಇದು ಕಸಾಪ ನಿಲುವೋ ಇಲ್ಲವೇ ಜೋಶಿಯವರ ವೈಯಕ್ತಿಕ ಹೇಳಿಕೆಯ ಸ್ಪಷ್ಟಪಡಿಸಬೇಕು' ಎಂದು ಆಗ್ರಹಿಸಿದರು.

'ಇದು ಸಾಹಿತ್ಯ ಪರಿಷತ್ತಿನ ನಿಲುವಲ್ಲ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ನನ್ನ ವೈಯಕ್ತಿಕ ಹೇಳಿಕೆಯಾಗಿದೆ. ಭೌಗೋಳಿಕವಾಗಿ ವಿಸ್ತಾರವಾಗಿರುವುದರಿಂದ ಗಡಿಭಾಗದ ತಾಲ್ಲೂಕುಗಳಿಗೆ ಜಿಲ್ಲಾ ಕೇಂದ್ರ ದೂರವಾಗುತ್ತದೆ. ಅವಿಭಜಿತ ಧಾರವಾಡ ಜಿಲ್ಲೆಯನ್ನು ಮೂರು ಜಿಲ್ಲೆಗಳನ್ನಾಗಿ ವಿಭಜಿಸಿದ ನಂತರ ಅಭಿವೃದ್ಧಿ ಸಾಧ್ಯವಾಗಿದೆ. ಆ ದೂರದೃಷ್ಟಿಯಿಂದ ಹೇಳಿದ್ದೇನೆ ಹೊರತು ರಾಜಕೀಯವಾಗಿ ಅಲ್ಲ' ಮಹೇಶ ಜೋಶಿ ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು