ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ ಸರ್ವೇಕ್ಷಣೆ: ಕಾರವಾರಕ್ಕೆ ರಾಜ್ಯದಲ್ಲಿ ಮೊದಲ ರ‍್ಯಾಂಕ್

ರ‍್ಯಾಂಕಿಂಗ್‌ನಲ್ಲಿ ಭಾರಿ ಸುಧಾರಣೆ ಕಂಡ ಶಿರಸಿ, ಹಳಿಯಾಳ, ಕುಮಟಾ
Last Updated 25 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಕಾರವಾರ: ಮೂರು ವರ್ಷಗಳ ಹಿಂದೆ ಸ್ವಚ್ಛತೆಯ ವಿಚಾರದಲ್ಲಿ ರಾಜ್ಯಕ್ಕೆ 144ನೇ ರ‍್ಯಾಂಕ್ ಪಡೆದಿದ್ದ ಕಾರವಾರ ನಗರಸಭೆಯು, ಈ ವರ್ಷ ಮೊದಲನೇ ಸ್ಥಾನಕ್ಕೇರಿದೆ. ಪುರಸಭೆಗಳ ಪೈಕಿ ಹಳಿಯಾಳವು 51ನೇ ರ‍್ಯಾಂಕ್‌ನಿಂದ ಪ್ರಥಮ ಸ್ಥಾನಕ್ಕೇರಿದ ಸಾಧನೆ ಮಾಡಿದೆ.

ಕೇಂದ್ರ ಸರ್ಕಾರದ ವಸತಿ ಮತ್ತು ನಗರಾಡಳಿತ ಸಚಿವಾಲಯವು ಪ್ರತಿ ವರ್ಷ ನಗರ, ಪಟ್ಟಣಗಳ ‘ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ’ ನಡೆಸುತ್ತದೆ. ತ್ಯಾಜ್ಯಗಳ ವಿಲೇವಾರಿ, ಹಸಿ ಮತ್ತು ಒಣ ಕಸಗಳ ವಿಂಗಡನೆ, ಜನರ ಸ್ಪಂದನೆ ಮುಂತಾದ ಹಲವು ಅಂಶಗಳು ರ‍್ಯಾಂಕಿಂಗ್ ಮಾನದಂಡದಲ್ಲಿ ಒಳಗೊಂಡಿವೆ.

ಇದರಂತೆ, ಕಾರವಾರವು 50 ಸಾವಿರದಿಂದ 1 ಲಕ್ಷದವರೆಗಿನ ಜನಸಂಖ್ಯೆಯ ನಗರಗಳಲ್ಲಿ ರಾಜ್ಯಕ್ಕೇ ಮೊದಲ ಸ್ಥಾನ ಪಡೆದುಕೊಂಡು ಗಮನ ಸೆಳೆದಿದೆ. 2020ರಲ್ಲಿ ನಗರವು 11ನೇ ರ‍್ಯಾಂಕ್ ಗಳಿಸಿತ್ತು. ಇದೇ ವಿಭಾಗದಲ್ಲಿ ಶಿರಸಿ ನಗರಸಭೆಯೂ ಗಣನೀಯ ಸಾಧನೆ ಮಾಡಿದ್ದು, ಈ ಬಾರಿ ಎರಡನೇ ಸ್ಥಾನಕ್ಕೇರಿದೆ. 2019ರಲ್ಲಿ 19ನೇ, 2020ರಲ್ಲಿ ಮೂರನೇ ರ‍್ಯಾಂಕ್ ಪಡೆದುಕೊಂಡಿತ್ತು.

ದಕ್ಷಿಣ ವಲಯ ಮಟ್ಟದಲ್ಲೂ 1,400 ನಗರಸಭೆಗಳ ಪೈಕಿ ಕಾರವಾರ ನಗರಸಭೆಯ ರ‍್ಯಾಂಕಿಂಗ್ ಗಮನಾರ್ಹವಾಗಿ ಏರಿಕೆಯಾಗಿದ್ದು, ಈ ವರ್ಷ ಆರನೇ ಸ್ಥಾನಕ್ಕೇರಿದೆ. ಕಳೆದ ವರ್ಷ 57 ಹಾಗೂ 2019ರಲ್ಲಿ 790ನೇ ರ‍್ಯಾಂಕ್ ಪಡೆದು ಟೀಕೆಗೆ ಒಳಗಾಗಿತ್ತು. ಆದರೆ, ಅವುಗಳನ್ನು ಸವಾಲಾಗಿ ಸ್ವೀಕರಿಸಿದ ನಗರಸಭೆಯು ತ್ಯಾಜ್ಯ ವಿಲೇವಾರಿಗೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡು ಯಶಸ್ಸು ಕಂಡಿದೆ.

ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡ ನಗರಸಭೆ ಆಯುಕ್ತ ಆರ್.ಪಿ.ನಾಯ್ಕ, ‘ಸ್ವಚ್ಛ ಸರ್ವೇಕ್ಷಣೆ ಸಮೀಕ್ಷೆಯ ಸಂದರ್ಭದಲ್ಲಿ ಭೇಟಿ ನೀಡಿ ತಂಡವು ಸ್ಥಳೀಯ ಆಡಳಿತಕ್ಕೆ ಮುನ್ಸೂಚನೆ ನೀಡದೇ ನಗರದ ವಿವಿಧ ಕಡೆಗಳಿಗೆ ಭೇಟಿ ನೀಡಿ ಜನಾಭಿಪ್ರಾಯ ಸಂಗ್ರಹಿಸಿದೆ. ಅಲ್ಲದೇ ತ್ಯಾಜ್ಯ ವಿಲೇವಾರಿಯ ಕ್ರಮ, ತ್ಯಾಜ್ಯ ವಿಲೇವಾರಿ ಘಟಕದ ನಿರ್ವಹಣೆ, ನಗರದಲ್ಲಿ ಗಿಡಗಳನ್ನು ನೆಟ್ಟಿರುವುದು, ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಮುಂತಾದ ವಿಚಾರಗಳನ್ನು ಗಣನೆಗೆ ತೆಗೆದುಕೊಂಡಿದೆ’ ಎಂದರು.

‘ಮುಂದಿನ ವರ್ಷ ಎರಡು ವರ್ಷಗಳಲ್ಲಿ ‘ಫೈವ್ ಸ್ಟಾರ್’ ರ‍್ಯಾಂಕಿಂಗ್ ಪಡೆಯುವ ಗುರಿಯೊಂದಿಗೆ ಕೆಲಸ ಮಾಡುತ್ತಿದ್ದೇವೆ. ನಗರಸಭೆಯ ವ್ಯಾಪ್ತಿಯಲ್ಲಿ ಉದ್ಯಾನಗಳ ಸ್ವಚ್ಛತೆ, ಅಭಿವೃದ್ಧಿ ಮಾಡಲಾಗುತ್ತಿದೆ. ಈ ಕಾರ್ಯದ ಫಲಿತಾಂಶ ಬರಲು ಎರಡು ವರ್ಷಗಳು ಬೇಕು’ ಎಂದು ಹೇಳಿದರು.

‘ನಗರಸಭೆಯ ಕಾರ್ಯಗಳಿಗೆ ಆಡಳಿತ ಮಂಡಳಿಯು ಸಹಕಾರ ನೀಡಿದೆ. ಹಾಗಾಗಿ ಈ ಸಾಧನೆ ಸಾಧ್ಯವಾಗಿದೆ. ಪೌರ ಕಾರ್ಮಿಕರು, ನಗರಸಭೆ ಸಿಬ್ಬಂದಿ, ಜಿಲ್ಲಾಧಿಕಾರಿಗಳ ಮಾರ್ಗದರ್ಶನ, ಸಾರ್ವಜನಿಕರ ಸಹಕಾರ, ಸಂಘ ಸಂಸ್ಥೆಗಳ ಬೆಂಬಲವೆಲ್ಲ ಒಟ್ಟು ಸೇರಿ ತಂಡವಾಗಿ ಕೆಲಸ ಮಾಡಿದ್ದರಿಂದ ರ‍್ಯಾಂಕಿಂಗ್‌ನಲ್ಲಿ ಏರಿಕೆ ಕಾಣಲು ಸಾಧ್ಯವಾಯಿತು’ ಎಂದು ತಿಳಿಸಿದರು.

ಮಕ್ಕಳಿಗೆ ತರಬೇತಿಗೆ ಚಿಂತನೆ:‘ನಗರ ಸ್ವಚ್ಛತೆಯ ಬಗ್ಗೆ ಶಾಲೆಗಳಲ್ಲಿ ಮಕ್ಕಳಿಗೆ ತರಬೇತಿ ಕಾರ್ಯಕ್ರಮಗಳನ್ನು ಹೆಚ್ಚಿಸಲು ಚಿಂತಿಸಲಾಗಿದೆ. ಅಲ್ಲದೇ ನಾಗರಿಕರಿಗೆ ತಿಳಿವಳಿಕೆ ನೀಡುವ ಸಂಬಂಧ ವಾರ್ಡ್ ಮಟ್ಟದಲ್ಲಿ ಸಭೆ ಮಾಡಬೇಕಿದೆ. ಇದರಿಂದ ಜನರ ಸಹಕಾರ ಮತ್ತಷ್ಟು ಪರಿಣಾಮಕಾರಿಯಾಗುತ್ತದೆ’ ಎಂದು ಆಯುಕ್ತ ಆರ್.ಪಿ.ನಾಯ್ಕ ಅಭಿಪ್ರಾಯಪಟ್ಟರು.

ಕಾರವಾರ ನಗರದ ಮನೆಗಳಿಂದ ಸಂಗ್ರಹಿಸಿ ಘನತ್ಯಾಜ್ಯಗಳನ್ನು ಶಿರವಾಡದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ವಿಂಗಡಿಸಿ ಇಟ್ಟಿರುವುದು
ಕಾರವಾರ ನಗರದ ಮನೆಗಳಿಂದ ಸಂಗ್ರಹಿಸಿ ಘನತ್ಯಾಜ್ಯಗಳನ್ನು ಶಿರವಾಡದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ವಿಂಗಡಿಸಿ ಇಟ್ಟಿರುವುದು

‘ಈಗ ಮನೆ ಮನೆಯಿಂದ ಹಸಿ ಮತ್ತು ಒಣ ಕಸ ಸಂಗ್ರಹಿಸುವ ಮಾದರಿಯಲ್ಲೇ ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯವಿದ್ದರೆ ವಿಲೇವಾರಿಗೆ ನಗರಸಭೆ ಸಹಕರಿಸುತ್ತದೆ. ಒಂದು ಲೋಡ್ ಕಸವಿದ್ದರೆ ನಗರಸಭೆಗೆ ₹ 200 ಶುಲ್ಕ ಪಾವತಿಸಿದರೆ ಸಾಗಿಸಿ ವಿಲೇವಾರಿ ಮಾಡಲಾಗುತ್ತದೆ. ಈ ರೀತಿ ಜನರಿಗೆ ಸೌಲಭ್ಯಗಳನ್ನು ನೀಡಿದಾಗ ಅವುಗಳನ್ನು ಬಳಸುವಂತೆ ಪ್ರೇರೇಪಿಸಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಸ್ವಚ್ಛ ಸರ್ವೇಕ್ಷಣೆ: ಜಿಲ್ಲೆಯ ಸಾಧನೆ

ಸ್ಥಳೀಯ ಸಂಸ್ಥೆ ರಾಜ್ಯ ರ‍್ಯಾಂಕಿಂಗ್ ದಕ್ಷಿಣ ವಲಯ ರ‍್ಯಾಂಕಿಂಗ್
ಕಾರವಾರ 1 6
ಶಿರಸಿ 2 11
ದಾಂಡೇಲಿ 22 150

* 50 ಸಾವಿರದಿಂದ 1 ಲಕ್ಷ ಜನಸಂಖ್ಯೆ

***

ಸ್ವಚ್ಛ ಸರ್ವೇಕ್ಷಣೆ: ಜಿಲ್ಲೆಯ ಸಾಧನೆ

ಸ್ಥಳೀಯ ಸಂಸ್ಥೆ ರಾಜ್ಯ ರ‍್ಯಾಂಕಿಂಗ್ ದಕ್ಷಿಣ ವಲಯ ರ‍್ಯಾಂಕಿಂಗ್
ಕುಮಟಾ 2 3
ಭಟ್ಕಳ 8 57

* 25 ಸಾವಿರದಿಂದ 50 ಸಾವಿರ ಜನಸಂಖ್ಯೆ

***

ಸ್ವಚ್ಛ ಸರ್ವೇಕ್ಷಣೆ: ಜಿಲ್ಲೆಯ ಸಾಧನೆ

ಸ್ಥಳೀಯ ಸಂಸ್ಥೆ ರಾಜ್ಯ ರ‍್ಯಾಂಕಿಂಗ್ ದಕ್ಷಿಣ ವಲಯ ರ‍್ಯಾಂಕಿಂಗ್
ಹಳಿಯಾಳ 1 7
ಮುಂಡಗೋಡ 4 32
ಸಿದ್ದಾಪುರ 5 34
ಯಲ್ಲಾಪುರ 7 42
ಅಂಕೋಲಾ 9 44
ಹೊನ್ನಾವರ 11 54
ಜಾಲಿ 17 80

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT