ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಂಡಿಗೆ ತ್ಯಾಜ್ಯ ನೀರು: ನಗರಸಭೆ ನೋಟಿಸ್

ಇಂಗುಗುಂಡಿಯಲ್ಲಿ ನೀರು ಇಂಗದಿದ್ದರೆ ನಾವು ಹೇಗೆ ಹೊಣೆ: ಸ್ಥಳೀಯರ ಪ್ರಶ್ನೆ
Last Updated 9 ಫೆಬ್ರುವರಿ 2020, 11:54 IST
ಅಕ್ಷರ ಗಾತ್ರ

ಕಾರವಾರ:ನಗರದ ಕೆ.ಎಚ್.ಕಾಲೊನಿ ಸೇರಿದಂತೆ ವಿವಿಧೆಡೆ ಮನೆಗಳ ತ್ಯಾಜ್ಯ ನೀರನ್ನುಚರಂಡಿಗೆ ಹರಿಸುವವರಿಗೆ ನಗರಸಭೆಯು ಕಾನೂನು ಕ್ರಮದ ನೋಟಿಸ್ ಜಾರಿ ಮಾಡಿದೆ.ಇದಕ್ಕೆಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದು,ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ದೂರಿದ್ದಾರೆ.

ಕೆ.ಎಚ್.ಬಿ ಕಾಲೊನಿಯ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಸ್ಥಳೀಯ ನಿವಾಸಿಗಳು ಇಂಗು ಗುಂಡಿಗಳನ್ನು ಮಾಡಿ ಮನೆಯ ತ್ಯಾಜ್ಯ ನೀರನ್ನು ಅಲ್ಲಿಗೆ ಹರಿಸುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ.ಚರಂಡಿಯನ್ನುದುರಸ್ತಿ ಮಾಡದೇ ಸ್ಥಳೀಯ ನಿವಾಸಿಗಳಿಗೆ ನೋಟಿಸ್ ನೀಡುತ್ತಿರುವುದು ಎಷ್ಟು ಸರಿ ಎಂದು ಕೆ.ಎಚ್.ಬಿ ಕಾಲೊನಿಯ ಪಿ.ಎಸ್.ಭಟ್ ಪ್ರಶ್ನಿಸುತ್ತಾರೆ.

ಅದೆಷ್ಟೋ ವರ್ಷಗಳಿಂದ ಈ ಸಮಸ್ಯೆಯನ್ನು ಸ್ಥಳೀಯರು ಎದುರಿಸುತ್ತಿದ್ದರೂ ಬಗೆಹರಿಸಲು ನಗರಸಭೆ ಗಮನಹರಿಸಿಲ್ಲ. ಇಂಗುಗುಂಡಿಗಳಲ್ಲಿ ನೀರು ಇಂಗುವ ಪ್ರಮಾಣ ಕಡಿಮೆಯಾಗಿದೆ. ಇಂಗುಗುಂಡಿಗಳೇ ತುಂಬಿ ತುಳುಕುತ್ತಿರುವಾಗ ಚರಂಡಿಯಲ್ಲಿ ನೀರು ನಿಂತರೆ ಸ್ಥಳೀಯರು ಹೇಗೆ ಜವಾಬ್ದಾರರಾಗುತ್ತಾರೆ? ನಗರಸಭೆಯವರು ಬಹು ಮಹಡಿ ಕಟ್ಟಡಗಳಿಗೆ ಪರವಾನಗಿ ನೀಡುವಾಗಲೇ ಮೂಲಸೌಕರ್ಯವನ್ನು ನೋಡಬೇಕಿತ್ತು. ಬಡಾವಣೆಯು ಕೆ.ಎಚ್.ಬಿಯಿಂದ ನಗರಸಭೆಗೆ ವರ್ಗಾವಣೆಯಾಗುವ ಸಂದರ್ಭದಲ್ಲೇ ಈ ಬಗ್ಗೆ ವರದಿ ಕೊಡಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನೋಟಿಸ್‌ನಲ್ಲಿ ಏನಿದೆ?

ಮನೆಗಳಲ್ಲಿ ಉತ್ಪತ್ತಿಯಾದ ತ್ಯಾಜ್ಯ ನೀರನ್ನು ಚರಂಡಿಗೆ ಹರಿಯ ಬಿಡುತ್ತಿದ್ದು, ಇದು ಕಾನೂನು ಬಾಹಿರವಾಗಿದೆ. ಇದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಅನೈರ್ಮಲ್ಯದ ವಾತಾವರಣ ಉಂಟಾಗಿದೆ. ನೀರು ಸರಾಗವಾಗಿ ಹರಿಯದೇ ಸೊಳ್ಳೆಗಳು ಹೆಚ್ಚಾಗಿ ಡೆಂಗಿ, ಮಲೇರಿಯಾದಂತಹ ಆರೋಗ್ಯ ಸಮಸ್ಯೆಗಳು ಕಂಡುಬರಬಹುದು. ಆದ್ದರಿಂದ ನೋಟಿಸ್ ತಲುಪಿದ ಮೂರು ದಿನಗಳಲ್ಲಿ ತಮ್ಮ ನಿವೇಶನದಲ್ಲೇ ಇಂಗುಗುಂಡಿಯನ್ನು ನಿರ್ಮಿಸಿ ತ್ಯಾಜ್ಯವನ್ನು ವಿಲೇವಾರಿ ಮಾಡಿಕೊಳ್ಳತಕ್ಕದ್ದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಈ ಸೂಚನೆಗೆ ತಪ್ಪಿದರೆ ಪುರಸಭೆಗಳ ಅಧಿನಿಯಮ 1964 ನಿಯಮ 224, 225, 226 ಹಾಗೂ ಸಿ.ಆರ್.ಪಿ.ಸಿ ಕಾಯ್ದೆ 133 (ಎ) ಮತ್ತು (ಸಿ) ಅನ್ವಯ ದಂಡ ವಸೂಲಿ ಮಾಡಲಾಗುವುದು ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇದರಿಂದ ಆಗುವ ಹಾನಿಗೆ ನಗರಸಭೆ ಯಾವುದೇ ರೀತಿಯಿಂದ ಜವಾಬ್ದಾರವಾಗಿರುವುದಿಲ್ಲ ಎಂದು ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT