ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಮ್ಸ್, ಪತಂಜಲಿ ಆಸ್ಪತ್ರೆ ನಡುವೆ ವೈದ್ಯಕೀಯ ಸಹಕಾರ ಒಪ್ಪಂದ

150 ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳ ಪ್ರವೇಶಾತಿಗೆ ಎಂ.ಸಿ.ಐ ಅನುಮತಿ
Last Updated 14 ಜುಲೈ 2021, 16:01 IST
ಅಕ್ಷರ ಗಾತ್ರ

ಕಾರವಾರ: ವೈದ್ಯಕೀಯ ಸಹಕಾರ, ಆರೋಗ್ಯ ಕ್ಷೇತ್ರದ ತುರ್ತು ಸಂದರ್ಭಗಳಲ್ಲಿ ಸ್ಪಂದನ ಸಂಬಂಧ ಇಲ್ಲಿನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕ್ರಿಮ್ಸ್) ಮತ್ತು ‘ಸೀಬರ್ಡ್’ ನೌಕಾನೆಲೆಯ ‘ಐ.ಎನ್.ಎಚ್.ಎಸ್ ಪತಂಜಲಿ’ ಆಸ್ಪತ್ರೆಯ ನಡುವೆ ಬುಧವಾರ ಒಪ್ಪಂದ ಏರ್ಪಟ್ಟಿದೆ.

ಇದರಿಂದ ಇನ್ನುಮುಂದೆ ಎರಡೂ ಸಂಸ್ಥೆಗಳ ಅಧಿಕಾರಿಗಳ ನಡುವೆ, ವೈದ್ಯಕೀಯ ಕ್ಷೇತ್ರದ ಮಾಹಿತಿಗಳ ವಿನಿಮಯವಾಗಲಿದೆ. ಅಲ್ಲದೇ ತುರ್ತು ಸಂದರ್ಭದಲ್ಲಿ ‍ನೌಕಾನೆಲೆಯ ಆಸ್ಪತ್ರೆಯಲ್ಲಿ ನಾಗರಿಕರಿಗೂ ಚಿಕಿತ್ಸೆ ನೀಡಲು ಅವಕಾಶ ಸಿಗಲಿದೆ. ಅಂತೆಯೇ ನೌಕಾನೆಲೆಯ ಸಿಬ್ಬಂದಿ ಮತ್ತು ಅವರ ಕುಟುಂಬದ ಸದಸ್ಯರಿಗೆ ‘ಕ್ರಿಮ್ಸ್’ನಲ್ಲಿ ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡಲು ಸಾಧ್ಯವಾಗಲಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಗಜಾನನ ನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.

ಎಂ.ಸಿ.ಐ ಅನುಮತಿ: 2021–22ನೇ ಸಾಲಿಗೆ 150 ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳ ಪ್ರವೇಶಾತಿಗೆ ಭಾರತೀಯ ವೈದ್ಯಕೀಯ ಪರಿಷತ್ತು (ಎಂ.ಸಿ.ಐ) ಅನುಮತಿ ನೀಡಿದೆ. ಈ ಸಂದರ್ಭದಲ್ಲೇ ಕರಾರು ಏರ್ಪಟ್ಟಿರುವುದು, ನಗರದ ಸರ್ಕಾರಿ ವೈದ್ಯಕೀಯ ಸೌಲಭ್ಯಕ್ಕೆ ಮಹತ್ವದ ಹೆಜ್ಜೆಯಾಗಿದೆ. 2019ನೇ ಸಾಲಿನಲ್ಲಿ ಕಾರವಾರದ ವೈದ್ಯಕೀಯ ಕಾಲೇಜಿಗೆ ಈ ಅನುಮತಿ ಸಿಕ್ಕಿರಲಿಲ್ಲ.

‘ಕಾರಣಾಂತರಗಳಿಂದ ವೈದ್ಯಕೀಯ ಕಾಲೇಜಿನ ನೂತನ ಕಟ್ಟಡ ನಿರ್ಮಾಣ ವಿಳಂಬವಾಗುತ್ತಿದ್ದರೂ 150 ವಿದ್ಯಾರ್ಥಿಗಳ ಪ್ರವೇಶಾತಿಗೆ ಅವಕಾಶ ದೊರೆತಿದೆ. 150 ಹಾಸಿಗೆಗಳ ಪತಂಜಲಿ ಆಸ್ಪತ್ರೆಯೊಂದಿಗೆ ಒಪ್ಪಂದ ಆಗಿರುವುದು ಈ ನಿಟ್ಟಿನಲ್ಲಿ ಸಹಕಾರಿಯಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

‘ಜಿಲ್ಲಾ ಆಸ್ಪತ್ರೆಯಲ್ಲಿ ಈಗ ಕಾಮಗಾರಿಯ ಸಲುವಾಗಿ ಮಕ್ಕಳ ವಿಭಾಗ, ಹೆರಿಗೆ ವಿಭಾಗದ ಕಟ್ಟಡವನ್ನು ತೆರವು ಮಾಡಲಾಗಿದೆ. ಪತಂಜಲಿ ಆಸ್ಪತ್ರೆಯ ಜೊತೆ ಒಪ್ಪಂದ ಆಗಿರುವ ಕಾರಣ ಆ ಸ್ಥಳಾಭಾವದ ಕೊರತೆ ನೀಗಿದಂತಾಗಿದ್ದು, ಎಂ.ಸಿ.ಐ ಮಾನ್ಯತೆಗೆ ಸಹಕಾರಿಯಾಗಿದೆ. ನಿಯಮದಲ್ಲಿ 10 ಕಿಲೋಮೀಟರ್ ಒಳಗಿನ ಆಸ್ಪತ್ರೆಯ ಜೊತೆ ಕರಾರು ಮಾಡಿಕೊಳ್ಳಲು ಅವಕಾಶವಿದೆ. ಪತಂಜಲಿ ಆಸ್ಪತ್ರೆಯು ಅಷ್ಟೇ ದೂರದಲ್ಲಿದೆ’ ಎಂದರು.

‘ಕ್ರಿಮ್ಸ್’ಗೆ ಭೇಟಿ, ಪರಿಶೀಲನೆ: ‘ಐ.ಎನ್.ಎಚ್.ಎಸ್ ಪತಂಜಲಿ’ ಆಸ್ಪತ್ರೆಯ ಸರ್ಜನ್ ಕ್ಯಾಪ್ಟನ್ ಜೆ.ಎಸ್.ರಾಂಧವಾ, ಕಮಾಂಡಿಂಗ್ ಆಫೀಸರ್ ಸರ್ಜನ್ (ಮಕ್ಕಳ ತಜ್ಞ) ಕಮಾಂಡರ್ ಅನೂಪ್ ಕುಮಾರ್ ನಾಯರ್, ರೇಡಿಯಾಲಜಿ ವಿಭಾಗದ ಕಾರ್ಯಪಾಲಕ ಅಧಿಕಾರಿ ಸರ್ಜನ್ ಡಾ.ಅಜಯ್ ಶಂಕರ್ ಶರ್ಮ ಅವರು ಬುಧವಾರ ‘ಕ್ರಿಮ್ಸ್’ಗೆ ಭೇಟಿ ನೀಡಿ ವೈದ್ಯಕೀಯ ಸೌಲಭ್ಯಗಳನ್ನು ನೀಡುವ ಬಗ್ಗೆ ವೈದ್ಯಾಧಿಕಾರಿಗಳ ಜೊತೆ ಚರ್ಚಿಸಿದರು.

ಅಲ್ಲದೇ ದ್ರವೀಕೃತ ಆಮ್ಲಜನಕ ಸಂಗ್ರಹಣಾ ಟ್ಯಾಂಕ್ ನಿರ್ಮಾಣದ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತರಕರ್, ಡಾ.ರಾಜಕುಮಾರ ಮರೋಳ ಹಾಗೂ ಡಾ.ಹರೀಶ ನಾಯ್ಕ ಇದ್ದರು.

ಮನವಿಗೆ ಸ್ಪಂದನ, ಸಂತಸ: ಈಚೆಗೆ ‘ಸೀಬರ್ಡ್’ ನೌಕಾನೆಲೆಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಭೇಟಿ ನೀಡಿದ್ದಾಗ ಶಾಸಕಿ ರೂಪಾಲಿ ನಾಯ್ಕ, ‘ಕ್ರಿಮ್ಸ್’ ಜೊತೆ ನೌಕಾನೆಲೆಯ ಆಸ್ಪತ್ರೆ ಸಂಪರ್ಕ ಇಟ್ಟುಕೊಂಡು ವೈದ್ಯಕೀಯ ಸೌಲಭ್ಯವನ್ನು ಉನ್ನತಮಟ್ಟಕ್ಕೆ ಏರಿಸಲು ಸಹಕರಿಸಬೇಕು. ನೌಕಾನೆಲೆಗೆ ಭೂಮಿ, ಆಸ್ತಿ ತ್ಯಾಗ ಮಾಡಿದ ಚೆಂಡಿಯಾ ಹಾಗೂ ಸಮೀಪದ ಗ್ರಾಮಸ್ಥರಿಗೆ ನೌಕಾನೆಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಂತಾಗಬೇಕು ಎಂದು ಮನವಿ ಮಾಡಿದ್ದರು. ಸಂಸದ ಅನಂತಕುಮಾರ ಹೆಗಡೆ ಅವರಿಗೂ ತಿಳಿಸಿದ್ದರು. ಇದಕ್ಕೆ ಪೂರಕವಾಗಿ ಸ್ಪಂದನ ವ್ಯಕ್ತವಾಗಿರುವುದು ಸಂತಸ ತಂದಿದೆ’ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT