ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವರ್ಣವಲ್ಲಿಯಲ್ಲಿ ಕೃಷಿ ಜಯಂತಿ 16ರಿಂದ

ಸಾಧಕ ರೈತರಿಗೆ ಪ್ರಶಸ್ತಿ ಪ್ರದಾನ, ಗೋಷ್ಠಿಗಳು, ಯಂತ್ರೋಪಕರಣಗಳ ಪ್ರದರ್ಶನ
Last Updated 12 ಮೇ 2019, 11:31 IST
ಅಕ್ಷರ ಗಾತ್ರ

ಶಿರಸಿ: ಬೆಳೆಗಳಿಗೆ ರೋಗಬಾಧೆ, ಅಸ್ಥಿರ ಬೆಲೆ, ಸಾಲ ಬಾಧೆ, ಕೃಷಿ ಕೂಲಿಗಳ ಸಮಸ್ಯೆಗಳಿಂದ ಹತಾಶೆಯಲ್ಲಿರುವ ಕೃಷಿಕ್ಷೇತ್ರಕ್ಕೆ ಪುನಶ್ಚೇತನ ತುಂಬುವ ಆಶಯದಿಂದ ತಾಲ್ಲೂಕಿನ ಸೋಂದಾ ಸ್ವರ್ಣವಲ್ಲಿ ಮಠ ನಡೆಸುತ್ತಿರುವ ಕೃಷಿ ಜಯಂತಿ ಈ ಬಾರಿ ಮೇ 16 ಮತ್ತು 17ರಂದು ನಡೆಯಲಿದೆ.

ಶನಿವಾರ ಮಠದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಈ ಕುರಿತು ಮಾಹಿತಿ ನೀಡಿದರು. ವಿವಿಧ ಸ್ಪರ್ಧೆ, ಸಾಧಕ ರೈತರಿಗೆ ಪ್ರಶಸ್ತಿ ಪ್ರದಾನ, ಗೋಷ್ಠಿಗಳು, ಯಂತ್ರೋಪಕರಣಗಳ ಪ್ರದರ್ಶನ ನಡೆಯಲಿದೆ. ನರಸಿಂಹ ಜಯಂತಿಯನ್ನು ಕೃಷಿ ಜಯಂತಿಯಾಗಿ ಆಚರಿಸುವ ಮೂಲಕ ಕೃಷಿಕರ ಸಮಸ್ಯೆ ದೂರವಾಗಿ,ಟು ಕೃಷಿ ಬದುಕು ಆಪ್ತವಾಗಲಿ ಎಂಬುದು ಆಶಯವಾಗಿದೆ ಎಂದರು.

ಮೊದಲನೇ ದಿನದ ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಕೃಷಿಕಂಠೀರವ, ಕೃಷಿಕ ಮಹಿಳೆ, ಅವಿಭಕ್ತ ಕೃಷಿ ಕುಟುಂಬ, ಕೃಷಿ ಕುಶಲ ಕರ್ಮಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ. ಅಂಗನವಾಡಿ ಹಾಗೂ ಬಾಲವಾಡಿ ಮಕ್ಕಳಿಗೆ ತರಕಾರಿ ಗುರುತಿಸುವ, ಒಂದರಿಂದ ನಾಲ್ಕನೇ ತರಗತಿಯ ಮಕ್ಕಳಿಗೆ ಕಾಳು–ಬೀಜಗಳನ್ನು ಗುರುತಿಸುವ, 5ರಿಂದ 7ನೇ ತರಗತಿಯ ಮಕ್ಕಳಿಗೆ ಸಸ್ಯದ ಎಲೆಗಳನ್ನು ಗುರುತಿಸುವ ಸ್ಪರ್ಧೆ, ಕೇಂದ್ರ ಮಾತೃಮಂಡಲದ ಸಹಕಾರದಲ್ಲಿ ಕೃಷಿ ಸಂಬಂಧಿತ ಪರಿಕರಗಳಿಂದ ಸ್ಥಳದಲ್ಲೇ ಆರತಿ ತಾಟು ತಯಾರಿಸುವ ಸ್ಪರ್ಧೆ ಹಾಗೂ ಏಕ್ ಮಿನಿಟ್‍ ಸ್ಪರ್ಧೆ ನಡೆಯಲಿವೆ. ಶಿಕ್ಷಣ ಇಲಾಖೆಯ ಶಿರಸಿ ಶೈಕ್ಷಣಿಕ ಜಿಲ್ಲೆಯ ಸಹಕಾರದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕೃಷಿ ರಸಪ್ರಶ್ನೆ ಸ್ಪರ್ಧೆ ಹಾಗೂ ಕೃಷಿ ವಿಜ್ಞಾನ ಮಾದರಿ ಸ್ಪರ್ಧೆ, ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.

ಉತ್ತಮ ಬೆಟ್ಟ ನಿರ್ವಹಣಾ ಪುರಸ್ಕಾರ ಪ್ರದಾನ, ವಿಚಾರಪೂರ್ಣ ಗೋಷ್ಠಿಗಳು ನಡೆಯಲಿವೆ. ಪ್ರಥಮ ಗೋಷ್ಠಿಯಲ್ಲಿ ‘ಬೆಟ್ಟದಲ್ಲಿ ಬಿದಿರು’ ಕುರಿತು ತಜ್ಞರಾದ ಬೆಂಗಳೂರಿನ ಜಯಚಂದ್ರ, ಮಂಗಳ ಶೆಟ್ಟಿ, ಗೌತಮ ಪಳನಿ ವಿಷಯ ಮಂಡಿಸುವರು‌. ಅರಣ್ಯ ಕಾಲೇಜಿನ ಪ್ರಾಧ್ಯಾಪಕ ಡಾ. ಆರ್. ವಾಸುದೇವ ಅಧ್ಯಕ್ಷತೆ ವಹಿಸುವರು. ಸಾಂಸ್ಕೃತಿಕ ಸಂಜೆಯಲ್ಲಿ ಜಡ್ಡಿಗದ್ದೆಯ ತಿಮ್ಮೇಗೌಡ ಹಾಗೂ ಗಣಪತಿ ಗೌಡ ಅವರಿಂದ ಕೊಳಲಾಟ, ವಿ.ಕೆ.ಹೆಗಡೆ ಹೊಸಗದ್ದೆ ವಾಜಗದ್ದೆ ಅವರಿಂದ ‘ಕನಸು ಕಂಡ ಕಂಸ’ ಯಕ್ಷಗಾನ ದೃಶ್ಯ ಚಿತ್ರಣ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.

ಎರಡನೇ ದಿನ ಮಹಿಳೆಯರಿಗೆ ಕೃಷಿ ಪದಬಂಧ, ಚಾಲಿ ಸುಲಿಯುವ, ಪುರುಷರಿಗೆ ತೆಂಗಿನಕಾಯಿ ಸುಲಿಯುವ, ಶಂಖನಾದ ಸ್ಪರ್ಧೆ ಹಾಗೂ 55 ವರ್ಷ ಮೇಲ್ಪಟ್ಟ ಪುರುಷ ಹಾಗೂ ಮಹಿಳೆಯರಿಗೆ ಕೃಷಿ ಸಂಬಂಧಿ ಛದ್ಮವೇಷ ಸ್ಪರ್ಧೆ ನಡೆಯಲಿದೆ. ಕೇಂದ್ರ ಮಾತೃಮಂಡಲದ ಸಹಕಾರದಲ್ಲಿ ಜಗನ್ನಾಥಾಷ್ಟಕಸ್ತೋತ್ರ ಸ್ಪರ್ಧೆ ಜರುಗಲಿದೆ. ಗೋಬರ್ ಅನಿಲ ಘಟಕದ ಸದ್ಬಳಕೆ ಕುರಿತು ತಜ್ಞರಾದ ಶಿವಾಜಿ ಕಾಗ್ನೇಕರ ಬೆಳಗಾವಿ, ಅಡಿಕೆಯ ವಿವಿಧ ಉಪಯೋಗಗಳ ಕುರಿತು ಕೃಷಿ ತಜ್ಞ ಶಂಕರ ಭಟ್ಬ ಬದನಾಜೆ, ಕೀಟನಾಶಕಗಳ ಅತಿ ಬಳಕೆಯ ದುಷ್ಪರಿಣಾಮಗಳ ಕುರಿತು ಅಡ್ಡೂರು ಕೃಷ್ಣರಾವ್ ಏಲಕ್ಕಿ ಹಾಗೂ ವೆನಿಲ್ಲಾ ಬೆಳೆಗಳ ಪುನಶ್ಚೇತನ ಕುರಿತು ಕೇದಾರಕೊಲ್ಲೆ ಭಟ್ಕಳ, ಕೆ.ಎಸ್ ಪುರುಷೋತ್ತಮ ಮುತ್ತಿಗೆ ಸಿದ್ದಾಪುರ ವಿಷಯ ಮಂಡಿಸುವರು ಎಂದು ವಿವರಿಸಿದರು.

ಕೃಷಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆರ್.ಎನ್.ಹೆಗಡೆ ಉಳ್ಳಿಕೊಪ್ಪ, ಕಾರ್ಯದರ್ಶಿ ಸುರೇಶ ಹಕ್ಕಿಮನೆ, ಸನ್ಮಾನ ಸಮಿತಿ ಪ್ರಮುಖ ಸುಬ್ರಾಯ ಹೆಗಡೆ ತ್ಯಾಗಲಿ, ಮಠದ ವ್ಯವಸ್ಥಾಪಕ ಮಂಜುನಾಥ ಹೆಗಡೆ ಮಣಿಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT