ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ಕಟ್ಟಡ ನಿರ್ಮಾಣಕ್ಕೆ ನಿವೇಶನದ ಕೊರತೆ, ಶೆಡ್‍ನೊಳಗೆ ಚಿಣ್ಣರ ಕಲಿಕೆ!

ಬಾಡಿಗೆ ಕಟ್ಟಡ ಅಲಭ್ಯ
Last Updated 26 ಜನವರಿ 2022, 4:06 IST
ಅಕ್ಷರ ಗಾತ್ರ

ಶಿರಸಿ: ಸುತ್ತಲೂ ಆಳೆತ್ತರದವರೆಗೆ ಗಿಡಗಂಟಿ ಬೆಳೆದುಕೊಂಡಿದೆ. ಅದರ ನಡುವೆ ತಗಡುಗಳನ್ನು ಜೋಡಿಸಿ ರೂಪಿಸಿದ ತಾತ್ಕಾಲಿಕ ಮನೆ. ಇದು ಅಲೆಮಾರಿ ಕಾರ್ಮಿಕರ ವಾಸಸ್ಥಾನವಲ್ಲ! ನಲ್ವತ್ತಕ್ಕೂ ಹೆಚ್ಚು ಚಿಣ್ಣರು ಕಲಿಯುವ ಅಂಗನವಾಡಿ ಕೇಂದ್ರ.

ಇಲ್ಲಿನ ರಾಜೀವ ನಗರದಲ್ಲಿರುವ 2ನೇ ಅಂಗನವಾಡಿ ಕೇಂದ್ರದ ಚಿತ್ರಣವಿದು. ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಪ್ರದೇಶದಲ್ಲಿ ಎರಡು ಅಂಗನವಾಡಿ ಕೇಂದ್ರಗಳಿವೆ. ಒಂದು ಅಂಗನವಾಡಿ ಸರ್ಕಾರಿ ಶಾಲೆಯ ಕಟ್ಟಡದಲ್ಲಿ ನಡೆಯುತ್ತಿದೆ. ಇನ್ನೊಂದು ಅಂಗನವಾಡಿ ಕೇಂದ್ರಕ್ಕೆ ತಗಡಿನ ಶೆಡ್ ಆಸರೆಯಾಗಿದೆ.

ಕಳೆದ ಐದು ವರ್ಷಗಳಿಂದಲೂ ಇದೇ ಶೆಡ್‍ ಒಳಗೆ ಮಕ್ಕಳು ಆಡಿ ನಲಿಯುತ್ತಿದ್ದಾರೆ. ಬಾಲ್ಯದ ಚಟುವಟಿಕೆಗಳಿಗೆ ಈ ಶೆಡ್ ಒಳಗೆ ಕಲ್ಪಿಸಿದ ಸೌಕರ್ಯಗಳು ಆಸರೆಯಾಗಿವೆ. ಮಕ್ಕಳಿಗೆ ಈ ಮಾದರಿಯ ಕಟ್ಟಡದೊಳಗೆ ಕಲಿಕೆ ಹೊಸ ಅನುಭವ ನಿಡುತ್ತಿದ್ದರೆ, ಪಾಲಕರು ಮಾತ್ರ ಆತಂಕದಲ್ಲಿ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳಿಸಿಕೊಡುವ ಸನ್ನಿವೇಶ ಎದುರಾಗಿದೆ.

‘ಈ ಪ್ರದೇಶದಲ್ಲಿ ಅಂಗನವಾಡಿ ಕೇಂದ್ರದ ಅಗತ್ಯತೆ ಇದೆ. ಪ್ರತಿ ವರ್ಷ 40ಕ್ಕಿಂತ ಹೆಚ್ಚು ಮಕ್ಕಳು ಪ್ರವೇಶಾತಿ ಪಡೆಯುತ್ತಿದ್ದಾರೆ. ಬಾಡಿಗೆ ಕಟ್ಟಡ ಲಭ್ಯತೆ ಇಲ್ಲದೆ ಪ್ರತ್ಯೇಕ ಕಟ್ಟಡ ನಿರ್ಮಿಸಿಕೊಂಡಿದ್ದೇವೆ’ ಎನ್ನುತ್ತಾರೆ ಅಂಗನವಾಡಿ ಸಿಬ್ಬಂದಿ.

‘ಹತ್ತಾರು ಮಕ್ಕಳು ಓದುವ ಅಂಗನವಾಡಿ ಕೇಂದ್ರಕ್ಕೆ ಸುಸಜ್ಜಿತ ಕಟ್ಟಡ ನೀಡಿಲ್ಲ. ಸಮೀಪವೇ ಗಿಡಗಂಟಿಗಳು, ಪೊಟರೆಗಳಿರುವ ಪರಿಣಾಮ ಸರಿಸೃಪಗಳು ಅಂಗನವಾಡಿಯೊಳಗೆ ನುಗ್ಗುವ ಆತಂಕವಿದೆ. ಮಳೆಗಾಲದಲ್ಲಿ ಈ ಸಮಸ್ಯೆ ಹೆಚ್ಚುತ್ತದೆ. ಇದರಿಂದ ಮಕ್ಕಳ ಸುರಕ್ಷತೆಯ ಕುರಿತು ಭಯ ಮೂಡುತ್ತದೆ’ ಎಂದು ಪಾಲಕ ನಸ್ರುದ್ದೀನ್ ಶೇಖ್ ಹೇಳುತ್ತಾರೆ.

‘ಬಡ ಮತ್ತು ಕೂಲಿಕಾರ್ಮಿಕರ ಮಕ್ಕಳೆ ಈ ಅಂಗನವಾಡಿ ಕೇಂದ್ರವನ್ನು ಆಶ್ರಯಿಸಿಕೊಂಡಿದ್ದಾರೆ. ಪಾಲಕರು ಮಕ್ಕಳನ್ನು ಇಲ್ಲಿ ಬಿಟ್ಟು ಕೂಲಿ ಕೆಲಸಕ್ಕೆ ತೆರಳುವ ಪ್ರಸಂಗವೂ ಎದುರಾಗುತ್ತದೆ. ಕೋವಿಡ್ ಸ್ಥಿತಿ ಹೊರತುಪಡಿಸಿ ಉಳಿದ ದಿನಗಳಲ್ಲಿ ಇಡೀ ದಿನ ಮಕ್ಕಳು ಶೆಡ್ ಮಾದರಿಯ ಕಟ್ಟಡದಲ್ಲಿ ಕಳೆಯುವದು ಕಷ್ಟವಾಗುತ್ತಿತ್ತು’ ಎಂದು ಬಾಲವಿಕಾಸ ಸಮಿತಿಯ ಸದಸ್ಯರೊಬ್ಬರು ಹೇಳಿದರು.

ಪಾಲಕರ ವಂತಿಗೆಯಿಂದ ಶೆಡ್‌: ‘ಬಾಡಿಗೆ ಕಟ್ಟಡವೂ ಸಿಗದಿದ್ದಾಗ ಮಕ್ಕಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಹಲವು ಪಾಲಕರೇ ಹಣ ಸಂಗ್ರಹಿಸಿ ತಾತ್ಕಾಲಿಕ ಶೆಡ್‌ ನಿರ್ಮಿಸಿಕೊಟ್ಟರು. ಸುಮಾರು ₹35 ಸಾವಿರ ವೆಚ್ಚದಲ್ಲಿ ನಿರ್ಮಾಣವಾದ ಕಟ್ಟಡ ಸುರಕ್ಷಿತವಾಗಿ ಐದು ವರ್ಷಗಳಿಂದ ನಡೆಯುತ್ತಿದೆ’ ಎನ್ನುತ್ತಾರೆ ಬಾಲವಿಕಾಸ ಸಮಿತಿಯ ಸದಸ್ಯರು.

ಶೆಡ್‌ನಲ್ಲಿ ಸೌರವಿದ್ಯುತ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಒಳಾಂಗಣದಲ್ಲಿ ಮಕ್ಕಳಿಗೆ ಅಗತ್ಯ ಪಾಠೋಪಕರಣಗಳ ವ್ಯವಸ್ಥೆಯೂ ಇದೆ.

*
ಜಾಗದ ಕೊರತೆಯಿಂದ ತಾತ್ಕಾಲಿಕ ಕಟ್ಟಡದಲ್ಲಿ ಅಂಗನವಾಡಿ ನಡೆಯುತ್ತಿದೆ. ಸೂಕ್ತ ಜಾಗ ಒದಗಿಸಿಕೊಡುವಂತೆ ನಗರಸಭೆಗೂ ಮನವಿ ಮಾಡಿದ್ದೇವೆ.
-ದತ್ತಾತ್ರೇಯ ಭಟ್, ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರ

*
ಅಂಗನವಾಡಿ ಕೇಂದ್ರಕ್ಕೆ ಸೂಕ್ತ ಜಾಗ ಒದಗಿಸಲು ಪ್ರಯತ್ನಿಸಲಾಗುವುದು.
-ಗಣಪತಿ ನಾಯ್ಕ, ನಗರಸಭೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT