ಸೋಮವಾರ, ಆಗಸ್ಟ್ 15, 2022
28 °C
ಮುಂಡಗೋಡ ತಾಲ್ಲೂಕಿನ ಕೃಷಿಕರಿಗೆ ದುಡ್ಡು ಕೊಟ್ಟರೂ ಸಿಗದ ಯೂರಿಯಾ

ಮುಂಡಗೋಡ: ರಸಗೊಬ್ಬರಕ್ಕೆ ರೈತರ ಊರೂರು ಅಲೆದಾಟ

ಶಾಂತೇಶ ಬೆನಕನಕೊಪ್ಪ Updated:

ಅಕ್ಷರ ಗಾತ್ರ : | |

Prajavani

ಮುಂಡಗೋಡ: ಬಿಸಿಲು, ಮಳೆ ಹೊಯ್ದಾಟದ ಆತಂಕ ಒಂದೆಡೆಯಾದರೆ, ರಸಗೊಬ್ಬರಕ್ಕಾಗಿ ಊರೂರು ಅಲೆಯುವ ಸ್ಥಿತಿ ಇನ್ನೊಂದೆಡೆ. ಇದರಿಂದ ರೈತರು ಹೈರಾಣಾಗಿದ್ದಾರೆ.

ಹೆಚ್ಚು ಕಡಿಮೆ ಒಂದು ತಿಂಗಳ ಅವಧಿಯ ಭತ್ತ ಹಾಗೂ ಗೋವಿನಜೋಳದ ಬೆಳೆಗಳು ಗೇಣುದ್ದ ಬೆಳೆದು ನಿಂತಿವೆ. ಬೆಳೆಯ ಕಸುವನ್ನು ಹೆಚ್ಚಿಸಲು, ಸಾಂಪ್ರದಾಯಿಕ ಪದ್ಧತಿಯಂತೆ ರಸಗೊಬ್ಬರ ನೀಡಲು ರೈತರು ಮುಂದಾಗಿದ್ದಾರೆ. ಆದರೆ, ತಾಲ್ಲೂಕಿನ ಬಹುತೇಕ ವ್ಯವಸಾಯ ಸೇವಾ ಸಹಕಾರ ಸಂಘಗಳಲ್ಲಿ ಗೊಬ್ಬರದ ಅಭಾವ ಎದುರಾಗಿದೆ. ತಾಲ್ಲೂಕು ಹುಟ್ಟುವಳಿ ಮಾರಾಟ ಸಹಕಾರ ಸಂಘದಲ್ಲಿಯೂ ರಸಗೊಬ್ಬರ ಸಿಗುತ್ತಿಲ್ಲ ಎಂದು ರೈತರು ದೂರುತ್ತಿದ್ದಾರೆ.

ಕಳೆದ ವರ್ಷವೂ ಯೂರಿಯಾ ಗೊಬ್ಬರಕ್ಕಾಗಿ ಪ್ರತಿಭಟನೆ ನಡೆದಿತ್ತು. ರಸಗೊಬ್ಬರ ಅಂಗಡಿಗಳಿಗೆ ರೈತರು ಮುತ್ತಿಗೆ ಹಾಕಿದ್ದರು. ಬಳಿಕ ಪಕ್ಕದ ತಾಲ್ಲೂಕಿಗೆ ಅಲೆದಾಡಿ ಗೊಬ್ಬರ ಖರೀದಿಸಿದ್ದರು. ಈ ವರ್ಷವೂ ರೈತರು ಅಂಥದ್ದೇ ಸಮಸ್ಯೆ ಎದುರಿಸುತ್ತಿದ್ದಾರೆ.

ಈಚೆಗೆ ನಡೆದ ತಾಲ್ಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಶಿವರಾಮ ಹೆಬ್ಬಾರ್‌ ಅವರ ಬಳಿಯೂ ರೈತರು ಗೊಬ್ಬರದ ಸಮಸ್ಯೆಯನ್ನು ಹೇಳಿಕೊಂಡಿದ್ದರು.

‘ಪಕ್ಕದ ತಾಲ್ಲೂಕಿನಲ್ಲಿ ಗೊಬ್ಬರ ಸಿಗುತ್ತದೆ. ಆದರೆ, ಈ ತಾಲ್ಲೂಕಿನಲ್ಲಿ ಯೂರಿಯಾ ಸಿಗುತ್ತಿಲ್ಲ. ಹೆಚ್ಚಿನ ಹಣ ನೀಡಿದರೆ ಖಾಸಗಿ ರಸಗೊಬ್ಬರ ಅಂಗಡಿಗಳಲ್ಲಿ ಸಿಗುತ್ತದೆ. ಸೊಸೈಟಿಗಳಲ್ಲಿಯೇ ರಸಗೊಬ್ಬರ ಸಿಗುವಂತೆ ವ್ಯವಸ್ಥೆ ಮಾಡಬೇಕು’ ಎಂದು ರೈತರು ಸಭೆಯಲ್ಲಿ ಆಗ್ರಹಿಸಿದ್ದರು.

‘ಮುಂಗಡ ಹಣ ನೀಡಿದರೂ ಗೊಬ್ಬರ ಪೂರೈಕೆಯಾಗುತ್ತಿಲ್ಲ. ರೈತರಿಗೆ ಈ ಸಮಯದಲ್ಲಿ ಯೂರಿಯಾ ಗೊಬ್ಬರದ ಅವಶ್ಯಕತೆಯಿರುತ್ತದೆ. ದುಡ್ಡು ಕೊಟ್ಟರೂ ಗೊಬ್ಬರ ಸಿಗುತ್ತಿಲ್ಲ. ಕಂಪನಿಗಳಿಂದಲೇ ರಸಗೊಬ್ಬರ ಪೂರೈಕೆ ಕಡಿಮೆಯಾಗಿದೆ’ ಎಂದು ಚವಡಳ್ಳಿ ಮಲವಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಪರುಶುರಾಮ ತಹಶೀಲ್ದಾರ್‌ ಹೇಳಿದರು.

‘ಖಾಸಗಿ ಅಂಗಡಿಯವರು ಲಿಂಕೇಜ್‌ ಗೊಬ್ಬರವನ್ನೂ ಖರೀದಿಸುವುದರಿಂದ, ಯೂರಿಯಾ ಅವರಲ್ಲಿ ದಾಸ್ತಾನು ಇದೆ. ಸೊಸೈಟಿಯವರು ಲಿಂಕೇಜ್‌ ಗೊಬ್ಬರ ತಂದರೂ ಮಾರಾಟವಾಗುವುದಿಲ್ಲ. ಹಾನಗಲ್‌ ತಾಲ್ಲೂಕಿನ ಕೆಲವೆಡೆ ರೈತರು ಯೂರಿಯಾ ಹೆಚ್ಚು ಬಳಸುವುದಿಲ್ಲ. ಅಂತಹ ಕಡೆಗಳಿಂದ ಇಲ್ಲಿನ ರೈತರು ಯೂರಿಯಾ ಗೊಬ್ಬರ ಖರೀದಿಸುತ್ತಿದ್ದಾರೆ’ ಎಂದರು.

‘ರೈತರಿಗೆ ಅಗತ್ಯವಿದ್ದಾಗ ಯೂರಿಯಾ ಸಿಗಬೇಕು. ಬೇಡವಾದ ಸಮಯದಲ್ಲಿ ಯೂರಿಯಾ ನೀಡಿದರೆ ಉಪಯೋಗವಿಲ್ಲ. ರೈತರಿಗೆ ಪ್ರತಿ ವರ್ಷ ಇಷ್ಟು ಗೊಬ್ಬರ ಬೇಕೆಂದು ಅಂದಾಜು ಇಟ್ಟುಕೊಂಡು ತರಿಸುವ ವ್ಯವಸ್ಥೆ ಮಾಡಬೇಕಿತ್ತು. ಮಳೆ ಕೈಕೊಡುತ್ತಿದೆ ಎಂದು ಸ್ಪ್ರಿಂಕ್ಲರ್‌ ಜೆಟ್‌ ಬಳಸಿ ಬೆಳೆಗೆ ನೀರುಣಿಸಿದ್ದೇವೆ. ಈಗ ಸಣ್ಣಗೆ ಮಳೆಯಾಗುತ್ತಿದೆ. ಆದರೆ, ಗೊಬ್ಬರ ಸಿಗುತ್ತಿಲ್ಲ’ ಎಂದು ರೈತರಾದ ರಾಜು ವಡಗಟ್ಟಾ, ಲಕ್ಷ್ಮಣ ಭಜಂತ್ರಿ, ಮಂಜುನಾಥ ಪಾಟೀಲ ದೂರಿದರು.

‘ಸಾವಯಯ ಗೊಬ್ಬರಕ್ಕೆ ಉತ್ತೇಜನ’
‘ಯೂರಿಯಾ, ಡಿ.ಎ.ಪಿ ಸಹಿತ ರಸಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಬೇಕೆಂದು ರಸಗೊಬ್ಬರಗಳ ಉತ್ಪಾದನೆ ಹಾಗೂ ಪೂರೈಕೆಯನ್ನು ಹಂತ–ಹಂತವಾಗಿ ಕಡಿಮೆ ಮಾಡಲಾಗುತ್ತಿದೆ. ಇದರ ಪರಿಣಾಮವಾಗಿ ಬೇಡಿಕೆಯಷ್ಟು ರಸಗೊಬ್ಬರ ಪೂರೈಕೆಯಾಗುವುದು ಅನುಮಾನ’ ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್‌.ಕುಲಕರ್ಣಿ ಹೇಳಿದರು.

‘ಯೂರಿಯಾ ಜೊತೆ ಲಿಂಕೇಜ್‌ ಗೊಬ್ಬರವನ್ನು ಖರೀದಿಸಿ ಬಳಸಬೇಕೆಂದೂ ಸರ್ಕಾರದ ಮಾರ್ಗಸೂಚಿಯಿದೆ. ಸಾವಯವ ಗೊಬ್ಬರ ಬಳಕೆಗೆ ರೈತರು ಒಲವು ತೋರಿಸುವ ಅಗತ್ಯವೂ ಮುಂದಿನ ದಿನಗಳಲ್ಲಿ ಕಾಣಬಹುದಾಗಿದೆ’ ಎಂದು ತಿಳಿಸಿದರು.

‘ತಾಲ್ಲೂಕಿನ ವಿವಿಧ ಸೊಸೈಟಿ ಹಾಗೂ ಖಾಸಗಿ ರಸಗೊಬ್ಬರ ಅಂಗಡಿಗಳಿಗೆ ಹಂತ–ಹಂತವಾಗಿ ರಸಗೊಬ್ಬರ ಪೂರೈಕೆಯಾಗುತ್ತಿದೆ. ಇಲ್ಲಿನ ಟಿ.ಎಸ್‌.ಎಸ್‌.ಗೆ ಶನಿವಾರ 100 ಮೆಟ್ರಿಕ್‌ ಟನ್‌ ಯೂರಿಯಾ ಬಂದಿದೆ. ಇನ್ನೂ 200 ಮೆಟ್ರಿಕ್‌ ಟನ್‌ ಗೊಬ್ಬರ ಬರಲಿದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು