ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣಕ್ಕೆ ಜಮೀನು ಬಿಡುವುದಿಲ್ಲ: ಸುಕ್ರಿ ಬೊಮ್ಮುಗೌಡ

ವಿಮಾನ ನಿಲ್ದಾಣ ವಿರೋಧಿ ಹೋರಾಟ ಸಮಿತಿಗೆ ನಾಲ್ವರ ರಾಜೀನಾಮೆ
Last Updated 15 ಸೆಪ್ಟೆಂಬರ್ 2020, 15:12 IST
ಅಕ್ಷರ ಗಾತ್ರ

ಕಾರವಾರ: ‘ಅಲಗೇರಿಯಲ್ಲಿ ನಾಗರಿಕ ವಿಮಾನ ನಿಲ್ದಾಣಕ್ಕಾಗಿ ನಾವು ಜಮೀನು ಬಿಟ್ಟುಕೊಡುವುದಿಲ್ಲ. ಈಗ ಗುರುತಿಸಿರುವ ಜಾಗದ ಬದಲು ಸಮೀಪದ ನೆಲ್ಲೂರು, ಕುಂಚಿನಬೈಲು, ಬೆರಡೆ ಭಾಗದ ಜಮೀನನ್ನು ಪರಿಶೀಲಿಸಲಿ’ ಎಂದು ಜಾನಪದ ಗಾಯಕಿ ಸುಕ್ರಿ ಬೊಮ್ಮುಗೌಡ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾವು ವಿವಿಧ ಯೋಜನೆಗಳಿಗಾಗಿ ಈಗಾಗಲೇ ಮೂರು ಸಲ ಜಮೀನು ಕಳೆದುಕೊಂಡಿದ್ದೇವೆ. ಈಗ ವಿಮಾನ ನಿಲ್ದಾಣಕ್ಕಾಗಿ ಮತ್ತೆ ಹೊಲದ ಜಮೀನು ಕಳೆದುಕೊಳ್ಳಬೇಕಾಗಿದೆ. ಆದ್ದರಿಂದ ನಾವು ಜಮೀನು ಬಿಡುವುದಿಲ್ಲ’ ಎಂದರು.

ಸಂಘಕ್ಕೆ ರಾಜೀನಾಮೆ:ಈ ನಡುವೆ ಅಲಗೇರಿಯ ಸಣ್ಣಮ್ಮದೇವಿ ನಾಗರಿಕ ವಿಮಾನ ನಿಲ್ದಾಣ ವಿರೋಧಿ ಹೋರಾಟ ಸಮಿತಿಯ ಪದಾಧಿಕಾರಿಗಳ ನಡುವೆ ಅಸಮಾಧಾನ ಮೂಡಿದೆ. ಸಮಿತಿಯ ಇತರ ಪದಾಧಿಕಾರಿಗಳು ಸರ್ಕಾರವು ತಮ್ಮ ವಿವಿಧ ಷರತ್ತುಗಳನ್ನು ಈಡೇರಿಸಿದರೆ ವಿಮಾನ ನಿಲ್ದಾಣಕ್ಕೆ ಜಮೀನು ನೀಡಲು ಸಿದ್ಧ ಎಂದು ಹೇಳಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಜಿಲ್ಲಾ ಸಂಘಗಳ ನೋಂದಣಾಧಿಕಾರಿ ಮತ್ತು ಉಪ ನಿಬಂಧಕರರನ್ನು ಮಂಗಳವಾರ ಭೇಟಿ ಮಾಡಿದ ನಾಲ್ವರು ಪದಾಧಿಕಾರಿಗಳು, ಸಮಿತಿಗೆ ರಾಜೀನಾಮೆ ನೀಡಿದ್ದಾಗಿ ಲಿಖಿತವಾಗಿ ತಿಳಿಸಿದ್ದಾರೆ. ಕಾರ್ಯದರ್ಶಿ ಮಹೇಶ ಎನ್.ಗೌಡ, ಕಾರ್ಯಕಾರಿ ಸದಸ್ಯರಾದ ಸುಕ್ರಿ ಬೊಮ್ಮು ಗೌಡ, ವೆಂಕಟೇಶ ಗಣಪತಿ ಗೌಡ, ನಾಗೇಶ ಈರಾ ಅಗೇರ ಸಮಿತಿಯಲ್ಲಿ ಮುಂದುವರಿಯಲು ಇಚ್ಛೆಯಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹೇಶ ಎನ್.ಗೌಡ, ‘ಸಮಿತಿಯ ಇತರ ಪದಾಧಿಕಾರಿಗಳು ನಮ್ಮ ಗಮನಕ್ಕೆ ತಾರದೇ ಷರತ್ತುಗಳನ್ನು ವಿಧಿಸಿ ವಿಮಾನ ನಿಲ್ದಾಣಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಸಮಿತಿಯು ಧ್ಯೇಯೋದ್ದೇಶಗಳಿಗೆ ವಿರುದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ. ಆದ್ದರಿಂದ ಸಮಿತಿಯ ಮೇಲೆ ಅವಿಶ್ವಾಸ ವ್ಯಕ್ತಪಡಿಸುತ್ತಿದ್ದು, ರಾಜೀನಾಮೆ ನೀಡಿದ್ದೇವೆ’ ಎಂದು ಹೇಳಿದರು.

‘ಮುಂದಿನ ನಡೆಯನ್ನು ನಿರ್ಧರಿಸುವ ಮೊದಲು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ ಮಾಡುತ್ತೇವೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT