ಶುಕ್ರವಾರ, ಆಗಸ್ಟ್ 12, 2022
21 °C
ತಳದಲ್ಲಿ ಕೊರೆದು ಮಣ್ಣು ಕುಸಿಯುವಂತೆ ಮಾಡುವ ಹುನ್ನಾರ: ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ

ಹೊನ್ನಾವರ: ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಗುಡ್ಡಕ್ಕೆ ಕನ್ನ!

ಎಂ.ಜಿ.ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಹೊನ್ನಾವರ: ಹೆದ್ದಾರಿ ಪಕ್ಕದ ಗುಡ್ಡ ನೆಲಸಮವಾಗುತ್ತಿರುವುದು ಗಿಡ, ಮರ ಸೇರಿದಂತೆ ಅಲ್ಲಿನ ಜೀವ ವೈವಿಧ್ಯಗಳಿಗೆ ಕುತ್ತಾಗಿ ಪರಿಣಮಿಸಿದೆ. ಜೊತೆಗೇ ಈ ಜಾಗವು ಖಾಸಗಿ ಸ್ವತ್ತಾಗಿ ಪರಿವರ್ತನೆಯಾಗುತ್ತಿರುವುದು ಹೇಗೆ ಎಂದು ಸಾರ್ವಜನಿಕರಲ್ಲಿ ಪ್ರಶ್ನೆ ಮೂಡಿಸಿದೆ.

ತಾಲ್ಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ 66 ಹಾಗೂ 206 ಹಾದು ಹೋಗಿವೆ. ಚತುಷ್ಪಥ ರಸ್ತೆ ಕಾಮಗಾರಿಯ ಕಾರಣ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದ ಗುಡ್ಡವನ್ನು ಅಧಿಕೃತವಾಗಿ ಕತ್ತರಿಸಲಾಗಿದೆ. ಆದರೆ, ರಾಷ್ಟ್ರೀಯ ಹೆದ್ದಾರಿ 66ರ ಸಮೀಪ ಇರುವ ಗುಡ್ಡವನ್ನು ಅನಧಿಕೃತವಾಗಿ, ಅಷ್ಟೇ ರಾಜಾರೋಷವಾಗಿ ಜೆ.ಸಿ.ಬಿ ಬಳಸಿ ನೆಲಸಮ ಮಾಡಲಾಗುತ್ತಿದೆ.

ಗುಡ್ಡದ ತಳದಲ್ಲಿ ರಂಧ್ರ ಕೊರೆದು ಒಳನುಗ್ಗಿ ಮುಂದಿನ ಜಾಗವನ್ನು ವಿಸ್ತರಣೆ ಮಾಡಿಕೊಳ್ಳುತ್ತ ತಮ್ಮ ಕೈವಶ ಮಾಡಿಕೊಳ್ಳುವ ಹುನ್ನಾರ ಒಂದೆಡೆಯಾಗಿದೆ. ಮತ್ತೊಂದೆಡೆ, ಗುಡ್ಡ ನೆಲಸಮ ಮಾಡಿದ ಜಾಗದಲ್ಲಿ ಕಟ್ಟಡಗಳ ಸಂಕೀರ್ಣ ತಲೆಯೆತ್ತುತ್ತಿದೆ.

‘ಗುಡ್ಡವನ್ನು ಹೀಗೆ ಬೇಕಾಬಿಟ್ಟಿ ಅಗೆದರೆ ಕೊಡಗು ಮತ್ತಿತರ ಭಾಗಗಳಲ್ಲಿ ಆದಂತೆ ಭೂಕುಸಿತ ಉಂಟಾಗಬಹುದೆಂಬ ಭಯ ಕಾಡುತ್ತಿದೆ. ಕಾನೂನು ಹಾಗೂ ಪರಿಸರ ನಿಯಮ ಉಲ್ಲಂಘನೆಯ ಇಂಥ ಕೃತ್ಯದ ವಿರುದ್ಧ ಸೊಲ್ಲೆತ್ತಿದರೆ ನಮ್ಮನ್ನು ಅಭಿವೃದ್ಧಿ ಹಾಗೂ ಜನವಿರೋಧಿಗಳು ಎಂದು ದೂಷಿಸಿ ಅಪಾಯ ತಂದೊಡ್ಡುವ ಹುನ್ನಾರ ನಡೆಯುತ್ತದೆ. ಎಲ್ಲದರ ಹಿಂದೆ ಭೂ ಮಾಫಿಯಾ ಕೈವಾಡವಿದೆ’ ಎನ್ನುವುದು ಹಡಿನಬಾಳದ ಮಾರುತಿ ನಾಯ್ಕ, ಮುಗ್ವಾದ ಜಗದೀಶ ಹೆಬ್ಬಾರ, ಆರೋಳ್ಳಿಯ ತುಳುಸು ಗೌಡ ಅವರ ಆತಂಕವಾಗಿದೆ.

ರಾಜ್ಯ ಅಥವಾ ರಾಷ್ಟ್ರೀಯ ಹೆದ್ದಾರಿಯ ಮಧ್ಯ ಭಾಗದಿಂದ ಎರಡೂ ಬದಿಗಳ 40 ಮೀಟರ್ ಅಂತರದಲ್ಲಿ ಯಾವುದೇ ಕಟ್ಟಡ ನಿರ್ಮಾಣಕ್ಕೆ ನಿಯಮದಲ್ಲಿ ಅವಕಾಶವಿಲ್ಲ. ಆದರೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ನಿಯಮದ ಉಲ್ಲಂಘನೆ ಅಪರಾಧವಾಗಿ ಕಾಣುತ್ತಿಲ್ಲ ಅಥವಾ ಅದನ್ನು ನಿಯಂತ್ರಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ ಎನ್ನುವುದು ಕೆಲವರ ಆರೋಪವಾಗಿದೆ.

‘ಒತ್ತುವರಿ ಆಗಿರುವುದು ನಿಜ’: ‘ರಾಷ್ಟ್ರೀಯ ಹೆದ್ದಾರಿ 206ರನ್ನು ಚತುಷ್ಪಥವಾಗಿಸಲು ಹೊನ್ನಾವರದಿಂದ ಸಾಗರದವರೆಗೆ ಸರ್ವೇಕ್ಷಣಾ ಕಾರ್ಯ ಮುಗಿದಿದೆ. ಹೆದ್ದಾರಿಯಂಚಿನ ಹೆಚ್ಚಿನ ಜಾಗವನ್ನು ಇಲಾಖೆ 1967ರಲ್ಲಿಯೇ ತನ್ನ ವಶಕ್ಕೆ ಪಡೆದಿದೆ. ಆದರೂ ಈ ಜಾಗ ಅತಿಕ್ರಮಣಕ್ಕೆ ಒಳಗಾಗಿರುವುದು ನಿಜ’ ಎನ್ನುತ್ತಾರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್ ಮಹೇಶ ನಾಯ್ಕ.

‘ಅರಣ್ಯ ಇಲಾಖೆಯವರು ನಾವು ರಸ್ತೆ ಕಾಮಗಾರಿ ನಡೆಸಿದರೆ ಅದನ್ನು ನಿಲ್ಲಿಸಲು ಬರುತ್ತಾರೆ. ಗುಡ್ಡವನ್ನು ಅಗೆಯುವ ಕೃತ್ಯವನ್ನು ನಿಲ್ಲಿಸಲು ಮುಂದಾಗುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ 206ರ ಪಕ್ಕದ ಕೆಲವೆಡೆ ಇನ್ನೂ ಅರಣ್ಯ ಇಲಾಖೆಯ ವಶದಲ್ಲಿದೆ. ಆದ್ದರಿಂದ ನಾವು ನಿಯಮ ಉಲ್ಲಂಘನೆಯಾದರೂ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

‘ಹೆದ್ದಾರಿ ಪಕ್ಕದ ಜಾಗ ರಾಷ್ಟ್ರೀಯ ಹೆದ್ದಾರಿಗೆ ಸೇರಿದೆ. ಗುಡ್ಡ ಅಗೆದಿರುವ ಕೆಲವು ಜಾಗ ಪಹಣಿಯಲ್ಲಿ ‘ಬೆಟ್ಟ ಭೂಮಿ’ ಎಂದಿದೆ. ಇಲ್ಲಿ ಕಂದಾಯ ಇಲಾಖೆ ಕ್ರಮ ಕೈಗೊಳ್ಳಬೇಕು. ಮರ ಕಡಿದರೆ ಮಾತ್ರ ನಾವು ದಂಡ ವಿಧಿಸುತ್ತೇವೆ’ ಎನ್ನುತ್ತಾರೆ ವಲಯ ಅರಣ್ಯಾಧಿಕಾರಿ ಶರತ್ ಶೆಟ್ಟಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು