ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ, ಐತಿಹಾಸಿಕ ಪ್ರಮಾದ’

Last Updated 15 ಜೂನ್ 2020, 13:37 IST
ಅಕ್ಷರ ಗಾತ್ರ

ಸಿದ್ದಾಪುರ: ರಾಜ್ಯ ಸರ್ಕಾರ ತರಲು ಉದ್ದೇಶಿಸಿರುವ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಜಾರಿಗೆ ಬಂದರೆ ಅದೊಂದು ಐತಿಹಾಸಿಕ ಪ್ರಮಾದವಾಗಲಿದೆ ಎಂದು ಜೆಡಿಎಸ್ ಮುಖಂಡ ಶಶಿಭೂಷಣ ಹೆಗಡೆ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಲಪಂಥೀಯ ಪಕ್ಷ ಯಾವತ್ತೂ ರೈತವಿರೋಧಿ ಹಾಗೂ ಬಂಡವಾಳಶಾಹಿ ಪರ ಎಂಬುದನ್ನು ಬಿಜೆಪಿ ಈ ಮೂಲಕ ತೋರಿಸಲು ಹೊರಟಿರುವಂತೆ ಕಾಣುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಭೂಸುಧಾರಣೆ ಕಾಯ್ದೆಯ 63–ಎ, 79–ಎ ಮತ್ತು 79–ಬಿ ಕಲಂಗಳನ್ನು ತಿದ್ದುಪಡಿ ಮಾಡಲು ರಾಜ್ಯ ಸಚಿವ ಸಂಪುಟ ಮಾಡಿರುವ ತೀರ್ಮಾನದಿಂದ ಭೂಮಿ ಹೊಂದುವ ಮಿತಿ ಹೋಗುವುದರೊಂದಿಗೆ, ಕೃಷಿ ಜಮೀನನ್ನು ಕೃಷಿಯೇತರ ವ್ಯಕ್ತಿಗಳೂ ಹೊಂದುವ ಅವಕಾಶ ಲಭ್ಯವಾಗುತ್ತದೆ. ಆಗ ರೈತನ ಪರಿಸ್ಥಿತಿ ಏನಾಗಬಹುದು? ಸಣ್ಣ ರೈತರು ಒಮ್ಮೆ ಕೃಷಿ ಭೂಮಿ ಕಳೆದುಕೊಂಡರೆ ಪುನಃ ಖರೀದಿ ಮಾಡಲು ಸಾಧ್ಯವಾಗುತ್ತದೆಯೇ? ಇದರಿಂದ ಸಾಂಪ್ರದಾಯಿಕ ಕೃಷಿ ಹೋಗಲಿದೆ.

ಕೃಷಿ ಜಮೀನು ಕಳೆದುಕೊಳ್ಳುವ ರೈತನಿಗೆ ಬೇರೆ ಉದ್ಯೋಗ ಇಲ್ಲದೇ, ನಿರುದ್ಯೋಗ ಹೆಚ್ಚಾಗಲಿದೆ. ಕೃಷಿ ಭೂಮಿಯನ್ನು ಕೊಳ್ಳುವ ಕೃಷಿಯೇತರ ವ್ಯಕ್ತಿ ಅಥವಾ ಉದ್ಯಮಿ ಅದನ್ನು ಲಾಭದಾಯಕವಾಗಿ ಉಪಯೋಗಿಸಿಕೊಳ್ಳಲು ಮುಂದಾಗುವುದರಿಂದ ಆಹಾರ ಬೆಳೆಯುವ ಜಮೀನು ನಾಶವಾಗುತ್ತದೆ. ಇದರಿಂದ ಸಹಕಾರಿ ಸಂಸ್ಥೆಗಳಿಗೆ ಅಪಾಯ ಬರಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಜಾರಿಗೆ ಬಂದಿರುವ ಪಂಚಾಯ್ತಿ ರಾಜ್ ಕಾಯ್ದೆ ಮತ್ತು ಭೂಸುಧಾರಣೆ ಕಾಯ್ದೆ, ಐತಿಹಾಸಿಕವಾದ ಹಾಗೂ ಜನಸ್ನೇಹಿಯಾದ ಕಾನೂನುಗಳು. ಸಂಪತ್ತಿನ ಕ್ರೋಡೀಕರಣ ಒಂದೇ ಕಡೆ ಆಗಬಾರದು ಎಂಬ ದೃಷ್ಟಿಯಿಂದ ‘ಉಳುವವನೆ ಹೊಲದೊಡೆಯ’ ಎಂಬ ಕಾಯ್ದೆಯನ್ನು ದೇವರಾಜ ಅರಸು ಮಾಡಿದರು. ಈ ಕಾಯ್ದೆಯ ಕಾರಣದಿಂದ ರಾಜ್ಯದ ಕೃಷಿ ಸಮುದಾಯ ಸಮಾಧಾನದಲ್ಲಿರಲು ಸಾಧ್ಯವಾಯಿತು’ ಎಂದರು.

‘ಯಾರನ್ನು ಮೆಚ್ಚಿಸಲು ಈ ಕಾಯ್ದೆ ತರಲಾಗುತ್ತಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು.ಈ ಕಾಯ್ದೆಯ ತಿದ್ದುಪಡಿಯಿಂದ ಉಂಟಾಗುವ ಅಪಾಯದ ಬಗ್ಗೆ ಸಾಮಾನ್ಯ ಜನತೆ, ಸಹಕಾರಿ ಧುರೀಣರು, ರಾಜಕೀಯ ನೇತಾರರು ಯೋಚಿಸಬೇಕು. ಬಿಜೆಪಿಯಲ್ಲಿರುವವರೂ ತಮ್ಮ ಅಂತರಾತ್ಮವನ್ನು ಕೇಳಿಕೊಳ್ಳಬೇಕು’ ಎಂದರು.

**

ರಾಜ್ಯ ಸರ್ಕಾರ ತರಲಿರುವ ಭೂಸುಧಾರಣೆ ಕಾಯ್ದೆಯ ತಿದ್ದುಪಡಿಯಿಂದ ಆಗಲಿರುವ ಗಂಡಾಂತರದ ಬಗ್ಗೆ ಸಿದ್ಧಾಂತ, ಪಕ್ಷ, ವ್ಯಕ್ತಿಗಳನ್ನು ಮೀರಿ ನೋಡಬೇಕಾದ ಅಗತ್ಯವಿದೆ.
-ಶಶಿಭೂಷಣ ಹೆಗಡೆ, ಜೆಡಿಎಸ್ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT