ಬುಧವಾರ, ಆಗಸ್ಟ್ 17, 2022
27 °C
ರಾತ್ರಿ ಕರ್ಫ್ಯೂ ಬಗ್ಗೆ ಎರಡು ದಿನಗಳಲ್ಲಿ ಮುಖ್ಯಮಂತ್ರಿಯಿಂದ ತೀರ್ಮಾನ

ಬಲವಂತದ ಬಂದ್ ಮಾಡಿಸಿದವರ‌ ವಿರುದ್ಧ ಕ್ರಮ: ಸಚಿವ ಬೊಮ್ಮಾಯಿ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಮರಾಠ ಅಭಿವೃದ್ಧಿ ನಿಗಮದ ಸ್ಥಾಪನೆ ವಿರೋಧಿಸಿ ವಿವಿಧ ಸಂಘಟನೆಗಳು ಡಿ. 5ರಂದು ಬಲವಂತದ ಬಂದ್‌ಗೆ ಮುಂದಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಪ್ರತಿಭಟನೆಗೆ ಬೇರೆ ಹಲವು ರೀತಿಯಲ್ಲಿ ಅವಕಾಶಗಳಿವೆ. ಆದರೆ, ಜನಜೀವನಕ್ಕೆ ತೊಂದರೆ ಕೊಡುವುದು ಸರಿಯಲ್ಲ. ಬಂದ್ ಮಾಡದಂತೆ ಸಂಘಟನೆಗಳಿಗೆ ಮನವಿ ಮಾಡುತ್ತೇನೆ’ ಎಂದು ಹೇಳಿದರು.

‘ಬಂದ್‌ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳಿಗೆ ಯಾವುದೇ ರೀತಿಯ ನಿರ್ಬಂಧಗಳಿಲ್ಲ. ಅವು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.  ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದಾದ್ಯಂತ ಪೊಲೀಸ್ ಬಂದೊಬಸ್ತ್ ಹೆಚ್ಚಿಸಲಾಗಿದೆ’ ಎಂದು ತಿಳಿಸಿದರು.

ರಾತ್ರಿ ಕರ್ಫ್ಯೂ ಬಗ್ಗೆ ಎರಡು ದಿನಗಳಲ್ಲಿ ತೀರ್ಮಾನ

‘ಕೋವಿಡ್ ಎರಡನೇ ಅಲೆಯನ್ನು ನಿಯಂತ್ರಿಸಲು ರಾತ್ರಿ ಕರ್ಫ್ಯೂ ಜಾರಿ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಎರಡು ದಿನಗಳಲ್ಲಿ ನಿರ್ಧರಿಸಲಿದ್ದಾರೆ. ನಿರ್ಬಂಧವನ್ನು ಬೆಂಗಳೂರಿಗೆ ಸೀಮಿತಗೊಳಿಸಬೇಕೇ ಅಥವಾ ಇಡೀ ರಾಜ್ಯಕ್ಕೇ ಅನ್ವಿಯಸಬೇಕೇ ಎಂದು ಸಭೆಯಲ್ಲಿ ಚರ್ಚಿಸಲಿದ್ದಾರೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

‘ರಾಜ್ಯದಲ್ಲಿ ಗೋಹತ್ಯೆ ನಿಷೇಧ ಸಂಬಂಧ ಕಾನೂನು ಜಾರಿ ಮಾಡಲಾಗಿದೆ. ಅದನ್ನು ರಾಜ್ಯಪಾಲರು ತಿರಸ್ಕರಿಸಿದ್ದರು. ಈಗ ಮತ್ತಷ್ಟು ಬಿಗಿ ಕ್ರಮಗಳನ್ನು ಸೇರಿಸಿ ಕಾಯ್ದೆ ರೂಪಿಸಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಪಶು ಸಂಗೋಪನೆ ಇಲಾಖೆಯು ಸಿದ್ಧತೆ ಮಾಡುತ್ತಿದೆ’ ಎಂದು ಮಾಹಿತಿ ನೀಡಿದರು.

‘ಅಕ್ರಮವಾಗಿ ಗೋ ಸಾಗಣೆ ನಿಯಂತ್ರಣಕ್ಕೆ ಸುಪ್ರೀಂಕೋರ್ಟ್ ಆದೇಶದಂತೆ ಪ್ರಮುಖ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಸಮಿತಿಗಳನ್ನು ರಚಿಸಲಾಗಿದೆ. ಅವುಗಳನ್ನು ಪುನರ್ ರಚನೆ ಮಾಡಲಾಗುವುದು’ ಎಂದೂ ಹೇಳಿದರು.

ಮತಾಂತರ ನಿಷೇಧ ಕಾಯ್ದೆ ಬಗ್ಗೆ ಮಾತನಾಡಿದ ಅವರು, ‘ಮಕ್ಕಳ ಮತಾಂತರದ ಬಗ್ಗೆ ಹಲವು ಪಾಲಕರು ದೂರು ಕೊಟ್ಟಿದ್ದಾರೆ. ಹಾಗಾಗಿ ಅದನ್ನು ನಿಯಂತ್ರಿಸಲು ಉತ್ತರ ಪ್ರದೇಶದ ಮಾದರಿಯಲ್ಲಿ ಕಾನೂನು ರೂಪಿಸಲಾಗುತ್ತಿದೆ. ಇದನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ನಾವು ರೂಪಿಸಿದ ಕಾಯ್ದೆಯು ನ್ಯಾಯಾಲಯದಲ್ಲಿ ಮಾನ್ಯವಾಗುವಂತೆ ಅಧ್ಯಯನ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

‘ಔರಾದಕರ ವರದಿ ಜಾರಿ’

‘ಔರಾದಕರ್ ವರದಿಯನ್ನು ಆಧರಿಸಿ ಪೊಲೀಸ್ ಹೆಡ್‌ಕಾನ್‌ಸ್ಟೆಬಲ್‌ಗಳ ಮೂಲ ವೇತನ ಪರಿಷ್ಕರಣೆ ಮಾಡಲಾಗಿದೆ. ಆದರೆ, ಇದು ಹೊಸಬರಿಗೆ ಮಾತ್ರ ಹೆಚ್ಚು ಅನುಕೂಲಕರವಾಗಿದೆ ಎಂಬ ಆಕ್ಷೇಪವಿದೆ. ಈ ವ್ಯತ್ಯಾಸವನ್ನು ಈಗಾಗಲೇ ಬಡ್ತಿ ಪಡೆದವರಿಗೆ ಮುಂದಿನ ವೇತನ ಶ್ರೇಣಿ ಬದಲಾದಾಗ ಸರಿಪಡಿಸಲಾಗುವುದು’ ಎಂದು ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕಿ ರೂಪಾಲಿ ನಾಯ್ಕ, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಪಶ್ಚಿಮ ವಲಯ ಐ.ಜಿ.ಪಿ ದೇವಜ್ಯೋತಿ ರಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್, ಪೊಲೀಸ್ ಅಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು