ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈತಖೋಲ್ ಮೀನುಗಾರಿಕಾ ಬಂದರಿನ ಹಿಂಭಾಗದಲ್ಲಿ ನೌಕಾನೆಲೆಯಿಂದ ಕಾಮಗಾರಿ

Last Updated 18 ಅಕ್ಟೋಬರ್ 2021, 15:33 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿನ ಐ.ಎನ್.ಎಸ್ ಕದಂಬ ನೌಕಾನೆಲೆಯಿಂದ ಬೈತಖೋಲ್ ಮೀನುಗಾರಿಕಾ ಬಂದರಿನ ಹಿಂಭಾಗದಲ್ಲಿ ಗುಡ್ಡ ಅಗೆದು ರಸ್ತೆ ನಿರ್ಮಾಣ ಮಾಡಲು ಉದ್ದೇಶಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಕ್ರಮಕ್ಕೆ ಸ್ಥಳೀಯ ಮೀನುಗಾರರು ಆಕ್ಷೇಪ ವ್ಯಕ್ತಪಡಿಸಿದ್ದು, ಜಿಲ್ಲಾಧಿಕಾರಿ ಜೊತೆ ಚರ್ಚಿಸಲು ಮುಂದಾಗಿದ್ದಾರೆ.

ಮೀನುಗಾರಿಕಾ ಬಂದರಿನ ಹಿಂಭಾಗದಲ್ಲಿರುವ ಅರಣ್ಯದ ಎತ್ತರ ಪ್ರದೇಶದಲ್ಲಿ ನೌಕಾನೆಲೆಯ ಸುರಕ್ಷತೆಗಾಗಿ ವೀಕ್ಷಣಾ ಗೋಪುರವಿದೆ. ಅಲ್ಲಿ ಸಿಬ್ಬಂದಿ ಕಾವಲು ಕಾಯುತ್ತಿರುತ್ತಾರೆ. ಅಲ್ಲಿಗೆ ತೆರಳಲು ಇಷ್ಟು ದಿನ ಕಚ್ಚಾ ರಸ್ತೆಯಿತ್ತು. ಅದನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಮಾಡಲಾಗುತ್ತಿದೆ. ಇದಕ್ಕಾಗಿ ಗುಡ್ಡದಲ್ಲಿ ಯಂತ್ರಗಳನ್ನು ಬಳಸಿ ಹೊಂಡ ತೆಗೆಯಬೇಕಾಗುತ್ತದೆ. ಈ ರೀತಿ ಮಾಡಿದರೆ, ಮಳೆಗಾಲ ಗುಡ್ಡ ಕುಸಿಯುವ ಸಾಧ್ಯತೆಯಿದೆ. ಕೆಳಭಾಗದಲ್ಲಿರುವ ನೂರಾರು ಮನೆಗಳಿಗೆ ಅಪಾಯ ಆಗಬಹುದು ಎಂಬುದು ಮೀನುಗಾರರ ಆತಂಕವಾಗಿದೆ.

ರಸ್ತೆ ಕಾಮಗಾರಿಯ ಗುತ್ತಿಗೆ ಪಡೆದವರು ಕೆಲವು ದಿನಗಳ ಹಿಂದೆ ಮಧ್ಯರಾತ್ರಿ ಹಿಟಾಚಿ ಯಂತ್ರಗಳನ್ನು ತೆಗೆದುಕೊಂಡು ಬಂದರು ಪ್ರದೇಶಕ್ಕೆ ಬಂದಿದ್ದರು. ಅದನ್ನು ಗಮನಿಸಿದ ಸ್ಥಳೀಯರು ವಿಚಾರಿಸಿದಾಗ ರಸ್ತೆ ನಿರ್ಮಾಣದ ವಿಚಾರ ಗಮನಕ್ಕೆ ಬಂದು ಆಕ್ಷೇಪ ವ್ಯಕ್ತಪಡಿಸಿದರು. ಕೊನೆಗೆ ಗುತ್ತಿಗೆದಾರರು ಅಲ್ಲಿಂದ ತೆರಳಿದ್ದರು.

ಈ ಬಗ್ಗೆ ನೌಕಾನೆಲೆಯ ಲೆಫ್ಟಿನೆಂಟ್ ಕಮಾಂಡರ್ ರವಿ ಕೆ.ಪಾಲ್ ನೇತೃತ್ವದ ತಂಡವು ಸೋಮವಾರ ಬೈತಖೋಲ್ ಬಂದರು ಪ್ರದೇಶಕ್ಕೆ ಬಂದಿತ್ತು. ಹಮ್ಮಿಕೊಳ್ಳಲು ಉದ್ದೇಶಿಸಿರುವ ಕಾಮಗಾರಿಯ ಬಗ್ಗೆ ಮೀನುಗಾರರೊಂದಿಗೆ ಚರ್ಚಿಸಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಥಳೀಯ ನಿವಾಸಿಗಳಾದ ವಿಕಾಸ್ ತಾಂಡೇಲ, ವಿಲ್ಸನ್ ಫರ್ನಾಂಡಿಸ್, ರಾಜೇಶ, ವಿನಾಯಕ ಹರಿಕಂತ್ರ ಮುಂತಾದವರು, ‘ವೀಕ್ಷಣಾ ಗೋಪುರಕ್ಕೆ ಕಾಂಕ್ರೀಟ್ ರಸ್ತೆ ಮತ್ತು ಆ ಪ್ರದೇಶಕ್ಕೆ ಬೇಲಿ ನಿರ್ಮಿಸಲು ಸರ್ವೆ ಮಾಡಲು ಬಂದಿದ್ದಾಗಿ ನೌಕಾನೆಲೆಯವರು ಹೇಳಿದ್ದಾರೆ. ಆದರೆ, ಬೇಲಿ ಯಾವ ಮಾದರಿಯದ್ದು ಅಥವಾ ಆವರಣ ಗೋಡೆ ನಿರ್ಮಾಣವೇ ಎಂಬ ಮಾಹಿತಿಯಿಲ್ಲ. ಎಲ್ಲಿಂದ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಎಂದು ಮಾಹಿತಿ ಕೊಡಬೇಕು ಎಂದು ತಿಳಿಸಿದ್ದೇವೆ’ ಎಂದರು.

‘ನೌಕಾನೆಲೆಯ ಕಾಮಗಾರಿಯ ಬಗ್ಗೆ ಜಿಲ್ಲಾಧಿಕಾರಿ ಮೂಲಕ ಮಾಹಿತಿ ಒದಗಿಸಬೇಕು. ಬಂದರಿನ ಹಿಂಭಾಗದ ಪ್ರದೇಶವು ಅರಣ್ಯ ಇಲಾಖೆಗೆ ಸೇರಿದ್ದು, ನೌಕಾನೆಲೆಗೆ ಹಸ್ತಾಂತರವಾಗಿದೆ ಎಂಬ ಮಾಹಿತಿಯಿದೆ. ಆದರೆ, ಪಹಣಿಯಲ್ಲಿ ನೌಕಾನೆಲೆಯ ಹೆಸರು ನಮೂದಾಗಿಲ್ಲ’ ಎಂದೂ ಆರೋಪಿಸಿದರು.

21ರಂದು ಮತ್ತೊಮ್ಮೆ ಚರ್ಚೆ:

‘1962ರಿಂದಲೂ ಬೈತಖೋಲ್ ನಾಗರಿಕರು ವಿವಿಧ ಕಾರಣಗಳಿಂದ ಕಠಿಣ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. 2010ರ ಸುಮಾರಿಗೆ ಇಲ್ಲಿ ಗುಡ್ಡ ಕುಸಿದ ನಾಲ್ಕೈದು ಮನೆಗಳಿಗೆ ತೊಂದರೆಯಾಗಿತ್ತು. ಈಗ ರಸ್ತೆ ನಿರ್ಮಾಣದಿಂದ ಸಮಸ್ಯೆಯಾಗಬಹುದು. ಹಾಗಾಗಿ ಕಾಮಗಾರಿಯಿಂದ ಸ್ಥಳೀಯರಿಗೆ ಆಗಬಹುದಾದ ತೊಂದರೆಗಳ ಬಗ್ಗೆ ಅ.21ರಂದು ಮತ್ತೊಮ್ಮೆ ಚರ್ಚಿಸಲಾಗುವುದು’ ಎಂದು ಸ್ಥಳೀಯ ನಿವಾಸಿ ರಾಜೇಶ ತಿಳಿಸಿದರು.

ನಗರಸಭೆ ಸದಸ್ಯೆ ಸ್ನೇಹಲ್ ಹರಿಕಂತ್ರ, ಪ್ರಮುಖರಾದ ಶ್ಯಾಮ್ ಕಿಂದಳಕರ್, ಸದಾನಂದ ಹರಿಕಂತ್ರ, ರತ್ನಾಕರ ಗೌಡ, ತುಕಾರಾಮ್ ಉಳ್ವೇಕರ, ನಟರಾಜ ದುರ್ಗೇಕರ್ ಸೇರಿದಂತೆ ಹಲವು ಮಂದಿ ಸ್ಥಳೀಯರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT