ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯ ಬಂದರು ರಸ್ತೆ ನಿರ್ಮಾಣಕ್ಕೆ ವಿರೋಧ

Last Updated 24 ಆಗಸ್ಟ್ 2021, 14:22 IST
ಅಕ್ಷರ ಗಾತ್ರ

ಹೊನ್ನಾವರ: ಕಾಸರಕೋಡ ಟೊಂಕ ಸಮೀಪ ನಿರ್ಮಿಸಲು ಉದ್ದೇಶಿಸಿರುವ ವಾಣಿಜ್ಯ ಬಂದರಿನ ಕೂಡು ರಸ್ತೆಯ ನಿರ್ಮಾಣ ಕಾಮಗಾರಿಯ ವಿರುದ್ಧ ಸ್ಥಳೀಯರು ಮಂಗಳವಾರ ಪ್ರತಿಭಟನೆ ನಡೆಸಿದರು. ಗುತ್ತಿಗೆದಾರ ಕಂಪನಿಯು ಕಾಮಗಾರಿ ನಡೆಸದಂತೆ ತಡೆಯುವಲ್ಲಿ ಯಶಸ್ವಿಯಾದರು.

ಕೆಲವು ದಿನಗಳ ಹಿಂದೆಯಷ್ಟೇ ಸ್ಥಳೀಯರ ವಿರೋಧದ ನಡುವೆಯೂ ಭಾರಿ ಪೊಲೀಸ್ ಭದ್ರತೆಯಲ್ಲಿ ರಸ್ತೆಗೆ ಅಗತ್ಯವಿರುವ ಜಾಗದ ತೆರವು ಕಾರ್ಯವನ್ನು ಗುತ್ತಿಗೆದಾರ ಕಂಪನಿ ನಡೆಸಿತ್ತು. ಆ ನಂತರ ಬಂದರು ನಿರ್ಮಾಣಕ್ಕೆ ಸಂಬಂಧಿಸಿದ ಕಾಮಗಾರಿ ಸ್ಥಗಿತಗೊಳಿಸಿತ್ತು. ಕಾಮಗಾರಿಗೆ ಸಂಬಂಧಿಸಿದಂತೆ ವಿವಿಧ ಮುಖಂಡರಿಂದ ಆರೋಪ ಮತ್ತು ಪ್ರತ್ಯಾರೋಪಗಳ ಸುರಿಮಳೆಯಾಗಿತ್ತು.

ಕಾಮಗಾರಿ ನಡೆಯುವ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸರ್ವೆ ಕಾರ್ಯ ನಡೆಸಲಾಗಿತ್ತು. ಇದರ ವರದಿಯನ್ನು ಆ.18ರಂದು ಜಿಲ್ಲಾಡಳಿತವು ಹೈಕೋರ್ಟ್‌ಗೆ ಸಲ್ಲಿಸಿತ್ತು. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಗುತ್ತಿಗೆದಾರ ಕಂಪನಿಯು ಮಂಗಳವಾರ ರಸ್ತೆಗೆ ಜಲ್ಲಿ ಹಾಕಿ ಪಕ್ಕಾ ರಸ್ತೆ ನಿರ್ಮಿಸಲು ಮುಂದಾಗಿದೆ. ಸ್ಥಳೀಯರ ವಿರೋಧದಿಂದ ಕಾಮಗಾರಿ ಮತ್ತೊಮ್ಮೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

‘ಕಾಮಗಾರಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಬಂದರು ನಿರ್ಮಾಣದಿಂದ ಪರಿಸರಕ್ಕೆ ಹಾನಿಯಾಗುವ ಜೊತೆಗೆ ಜನಜೀವನಕ್ಕೆ ಧಕ್ಕೆಯಾಗಲಿದೆ’ ಎಂದು ಪ್ರತಿಭಟನಾಕಾರರು ಕಾಮಗಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು, ಸ್ಥಳೀಯರ ವಿರೋಧದ ಕಾರಣ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಗುತ್ತಿಗೆದಾರ ಕಂಪನಿಗೆ ಸೂಚಿಸಿದರು.

ಬಂದರು ವಿರೋಧಿ ಹೋರಾಟ ಸಮಿತಿಯ ರಾಜೇಶ ತಾಂಡೇಲ, ಗಣಪತಿ ತಾಂಡೇಲ, ಜಗದೀಶ ತಾಂಡೇಲ ಪ್ರತಿಭಟನೆಯಲ್ಲಿ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT