ಭಾನುವಾರ, ಆಗಸ್ಟ್ 1, 2021
23 °C
ಖರೀದಿಗೆ ಬರಲು, ಯಂತ್ರಗಳ ದುರಸ್ತಿಗೆ ಹಲವು ತೊಡಕು: ಕೂಲಿಯಾಳುಗಳ ಸಮಸ್ಯೆ

ರೈತರ ಕೃಷಿ ಖುಷಿ ಕಸಿದ ಲಾಕ್‌ಡೌನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಮುಂಗಾರು ದಿನೇ ದಿನೇ ಹತ್ತಿರವಾಗುತ್ತಿದೆ. ರೈತರು ಹೊಲ ಹದಗೊಳಿಸಲು ಕಾತರರಾಗಿದ್ದಾರೆ. ಅಷ್ಟರಲ್ಲೇ ಜಾರಿಯಾದ ಲಾಕ್‌ಡೌನ್, ರೈತಾಪಿ ವರ್ಗಕ್ಕೆ ಹತ್ತು ಹಲವು ಸವಾಲುಗಳನ್ನು ತಂದೊಡ್ಡಿದೆ.

‘ವಿಶೇಷ ನಿರ್ಬಂಧಿತ ವಲಯ’ಗಳಲ್ಲಿ ರಸ್ತೆಗಳನ್ನು ಮುಚ್ಚಲಾಗಿದೆ. ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಹೀಗಾಗಿ ರೈತರಿಗೆ ಕೃಷಿ ಪರಿಕರಗಳು, ಬಿತ್ತನೆ ಬೀಜ, ರಸಗೊಬ್ಬರ ಖರೀದಿಗೆ ಬರಲು ಸಮಸ್ಯೆಯಾಗಿದೆ. ಕೃಷಿ ಚಟುವಟಿಕೆಗಳ ಸಂಬಂಧ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ಸರ್ಕಾರ ತಿಳಿಸಿದರೂ ದ್ವಿಚಕ್ರ ವಾಹನಗಳಲ್ಲಿ ಬಂದವರ ವಿರುದ್ಧ ಪ್ರಕರಣಗಳು ದಾಖಲಾಗುತ್ತಿವೆ. ಇದು ರೈತರ ಧೃತಿಗೆಡಿಸಿದೆ.

ಜಿಲ್ಲೆಯಲ್ಲಿ ಈವರೆಗೆ ಬೆಳಿಗ್ಗೆ 6ರಿಂದ 10ರವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಆದರೆ, ಈ ಅವಧಿಯಲ್ಲಿ ಕೃಷಿ ಸಂಬಂಧಿತ ಅಂಗಡಿಗಳು ತೆರೆದಿರುವುದಿಲ್ಲ. ನಂತರ ಅಂಗಡಿ ತೆರೆದರೆ ಅಥವಾ ರೈತರು ಬಂದರೆ ಕಾನೂನು ಕ್ರಮ ಎದುರಿಸುವ ಆತಂಕ ಕಾಡುತ್ತಿತ್ತು. ಲಾಕ್‌ಡೌನ್‌ ನಿಯಮಗಳು ಶುಕ್ರವಾರದಿಂದ ಬದಲಾಗಿದ್ದು, ರೈತರಿಗೆ  ಅನುಕೂಲವಾಗುವ ನಿರೀಕ್ಷೆಯಿದೆ.

ಶಿರಸಿ: ಕೋವಿಡ್ ಕಾರಣದಿಂದ ಬನವಾಸಿ ಸೇರಿದಂತೆ ಹತ್ತಾರು ಗ್ರಾಮ ಪಂಚಾಯ್ತಿ ಪ್ರದೇಶವನ್ನು ನಿರ್ಬಂಧಿತ ವಲಯವಾಗಿ ಘೋಷಿಸಲಾಗಿದೆ. ಇದರಿಂದ ರಸ್ತೆಗಳನ್ನು ಮುಚ್ಚಿದ್ದು, ಕೃಷಿ ಚಟುವಟಿಕೆಗೆ ತೆರಳುವುದೂ ಕಷ್ಟವಾಗುತ್ತಿದೆ.

‘ಭತ್ತದ ಕಣಜ’ ಎಂಬ ಖ್ಯಾತಿ ಹೊಂದಿರುವ ಬನವಾಸಿ, ಭಾಶಿ, ಅಂಡಗಿ ವ್ಯಾಪ್ತಿಯಲ್ಲಿ ಮುಂಗಾರು ಸಮೀಪಿಸಿದ್ದರೂ ಕೃಷಿ ಚಟುವಟಿಕೆ ಚುರುಕು ಪಡೆದಿಲ್ಲ. ಬಿತ್ತನೆ ಬೀಜ, ರಸಗೊಬ್ಬರ ಖರೀದಿಗೆ ಹಿಂದೇಟು ಹಾಕುತ್ತಿರುವ ಉದಾಹರಣೆ ಸಾಕಷ್ಟಿವೆ.

‘ತಿಂಗಳಿನಿಂದ ಕೆಟ್ಟು ನಿಂತ ಟಿಲ್ಲರ್ ಸರಿಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದುರಸ್ತಿಗೆ ಬೇಕಿದ್ದ ಉಪಕರಣ ಸಿಗದೇ ಗದ್ದೆ ಉಳಲು ಕಷ್ಟವಾಗಿದೆ. ಲಾಕ್‍ಡೌನ್ ಮಾಡಿರುವ ಕಾರಣ ದೂರದ ಊರುಗಳಿಂದ ಕಾರ್ಮಿಕರು ಕೆಲಸಕ್ಕೆ ಬರದೆ ಬಿತ್ತನೆ ಕಾರ್ಯಕ್ಕೂ ತೊಡಕಾಗಿದೆ’ ಎನ್ನುತ್ತಾರೆ ಕಲಕರಡಿ ಗ್ರಾಮದ ಸಂತೋಷ ನಾಯ್ಕ.

‘ಬೇಸಿಗೆ ಮುಗಿಯುವ ಹೊತ್ತಿಗೆ ಶುಂಠಿ ಬಿತ್ತನೆ, ಭತ್ತದ ಬೀಜ ಬಿತ್ತನೆ ಕೆಲಸ ಜೋರಾಗಿ ನಡೆಯುತ್ತಿತ್ತು. ಆದರೆ, ಗ್ರಾಮದಲ್ಲಿ ಸೋಂಕು ಕಾಣಿಸಿಕೊಂಡ ನಂತರ ಹಲವರು ಮನೆಯಿಂದ ಹೊರಗೆ ಬೀಳುತ್ತಿಲ್ಲ. ಕೋವಿಡ್ ಕಾರನದಿಂದ ಹೊರ ಊರಿನ ಕಾರ್ಮಿಕರು ಲಭ್ಯವಿಲ್ಲ. ಹೀಗಾದರೆ ಈ ಬಾರಿ ಗದ್ದೆ ಖಾಲಿ ಬಿಡಬೇಕಾಗುತ್ತದೆ’ ಎನ್ನುತ್ತಾರೆ ಬಸವರಾಜ ಆರೇರ.

ಮುಂಡಗೋಡ: ಕೃಷಿ ಚಟುವಟಿಕೆ ಗರಿಗೆದರುವ ಸಮಯದಲ್ಲಿಯೇ ಲಾಕ್‌ಡೌನ್ ಮಾಡಿರುವುದು ಹೊಲಗದ್ದೆಗಳ ಕೆಲಸ ಕುಂಠಿತವಾಗುವಂತೆ ಮಾಡಿದೆ. ಯಂತ್ರೋಪಕರಣಗಳಿಂದ ಕೃಷಿ ಚಟುವಟಿಕೆ ನಡೆಯುತ್ತಿದ್ದು, ಟ್ರ್ಯಾಕ್ಟರ್‌ಗಳ ಬಳಕೆ ಅವಲಂಬಿತವಾಗಿದೆ.

ಲಾಕ್‌ಡೌನ್‌ನಿಂದ ಗ್ಯಾರೇಜುಗಳು ಮುಚ್ಚಿವೆ. ಗದ್ದೆಯಲ್ಲಿ ಕೆಲಸ ಮಾಡುತ್ತಿರುವಾಗ ವಾಹನ ಅಥವಾ ಉಪಕರಣಗಳು ಹಾಳಾದಾಗ ದುರಸ್ತಿ ಮಾಡಿಸಲಾಗುತ್ತಿಲ್ಲ. ಅರ್ಧಕ್ಕೆ ಕೆಲಸ ನಿಲ್ಲಿಸಬೇಕಾದ ಪರಿಸ್ಥಿತಿಯನ್ನು ಹಲವು ರೈತರು ಎದುರಿಸಿದ್ದಾರೆ. ಇನ್ನೊಂದೆಡೆ ಬೈಕ್ ತೆಗೆದುಕೊಂಡು ಗೊಬ್ಬರ, ಬಿತ್ತನೆ ಬೀಜ ಒಯ್ಯಲು ಪಟ್ಟಣಕ್ಕೆ ಬಂದಾಗ ಪೊಲೀಸರ ತಪಾಸಣೆ ವೇಳೆ, ಕೃಷಿ ಸಂಬಂಧಿ ಕಾರಣಕ್ಕೆ ಬರುವುದನ್ನು ಸಾಬೀತುಪಡಿಸಲಾಗದೇ ಕೆಲವು ರೈತರು ದಂಡ ಪಾವತಿಸಿದ್ದಾರೆ.

‘ಬೆಳಿಗ್ಗೆ 10 ಗಂಟೆಯ ನಂತರ ಪಟ್ಟಣಕ್ಕೆ ಹೋಗಲು ಆಗುವುದಿಲ್ಲ. ಒಮ್ಮೊಮ್ಮೆ ಹೊಲದಲ್ಲಿ ಕೆಲಸ ಮಾಡುತ್ತಿರುವಾಗಲೇ ಟ್ರ್ಯಾಕ್ಟರ್ ಡೀಸೆಲ್ ಖಾಲಿ ಆಗುತ್ತದೆ. ಕ್ಯಾನ್‌ನಲ್ಲಿ ತರಲು ಬೈಕ್‌ನಲ್ಲಿ ಹೋದರೂ ಪೊಲೀಸರು ಹಿಡಿಯುತ್ತಾರೆ. ಇದರಿಂದ ಹೆದರಿ, ಮರುದಿನಕ್ಕೆ ಕೆಲಸವನ್ನು ಮುಂದೂಡಿದ ಘಟನೆಗಳಿವೆ’ ಎನ್ನುತ್ತಾರೆ ರೈತರು.

‘ಹದ ಬಿದ್ದಾಗ ಯಾವೊಬ್ಬ ರೈತನೂ ಹೊಲ ಬಿಟ್ಟು ಪಟ್ಟಣಕ್ಕೆ ತಿರುಗಾಡಲು ಹೋಗಲ್ಲ. ಡೀಸೆಲ್ ತರಲು, ಬೀಜಗೊಬ್ಬರ ತರಲು ಹೋಗಬೇಕಾಗುತ್ತದೆ. ಅದಕ್ಕಾದರೂ ವಿನಾಯಿತಿ ನೀಡಬೇಕು’ ಎನ್ನುತ್ತಾರೆ ರೈತ ನಿಂಗಪ್ಪ ಬಾಚಣಕಿ.

ಹೊನ್ನಾವರ: ಕೃಷಿ ಕಾರ್ಯಕ್ಕೆ ಲಾಕ್‌ಡೌನ್ ನಿಯಮಗಳು ಅನ್ವಯಿಸದಿದ್ದರೂ ಲಾಕ್‌ಡೌನ್ ಕಾರಣದಿಂದ ಕೂಲಿಕಾರರ ಸಂಚಾರಕ್ಕೆ ಹಾಗೂ ಕೃಷಿಗೆ ಅಗತ್ಯ ಸಾಮಗ್ರಿ ಸಾಗಣೆಗೆ ತೊಂದರೆಯಾಗಿದೆ.

ಬೇರೆ ಊರುಗಳಲ್ಲಿ ಕೆಲಸದಲ್ಲಿದ್ದ ಅನೇಕರು ಊರಿಗೆ ಮರಳಿದ್ದರಿಂದ ಕೆಲವು ಕಡೆಗಳಲ್ಲಿ ಕೃಷಿಗೆ ಕೂಲಿಯಾಳುಗಳು ಸಿಗುತ್ತಿದ್ದಾರೆ.  ಅಂಥ ಊರುಗಳಲ್ಲಿ ಈ ಬಾರಿ ಮಳೆಗಾಲ ಪೂರ್ವದ ಕೆಲಸಗಳನ್ನು ಬೇಗ ಮುಗಿಸಿಕೊಳ್ಳಲು ಅನುಕೂಲವಾಗಿದೆ. ಆದರೆ, ಕತ್ತಿ,
ಕುಟಾರೆ, ಪಿಕಾಸಿಯಂಥ ಆಯುಧಗಳನ್ನು ಅಂಗಡಿಯಿಂದ ತರುವುದು ಹರಸಾಹಸವಾಗಿ ಪರಿಣಮಿಸಿದೆ.

‘ರಾಶಿ, ಗೌರಿ, 1,001 ಜಾತಿಯ ಭತ್ತ ನಾಟಿ ಮಾಡುತ್ತೇವೆ. ಊರಿನಲ್ಲಿ ಕೋವಿಡ್, ಡೆಂಗಿ ಮುಂತಾದ ಜ್ವರದಿಂದ ಜನರು ಬಾಧಿತರಾಗಿದ್ದಾರೆ. ಇದರಿಂದ ಕೂಲಿಯಾಳುಗಳ ಕೊರತೆ ಉಂಟಾಗಿದೆ’ ಎಂದು ಕಡ್ನೀರಿನ ಕೃಷಿಕ ಸುಧೀರ ನಾಯ್ಕ ಹೇಳಿದರು.

ಕೃಷಿ ಸಂಬಂಧಿ ಇಲಾಖೆಗಳ ಅನೇಕ ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿದೆ. ಈ ಕಾರಣದಿಂದ ಹೊನ್ನಾವರ ಕೃಷಿ ಇಲಾಖೆ ಹೆಚ್ಚು ಕಡಿಮೆ ಬಾಗಿಲು ಮುಚ್ಚಿದ ಸ್ಥಿತಿಯಲ್ಲಿದೆ. ತಾಲ್ಲೂಕಿನ ಪ್ರಮುಖ ಬೆಳೆ ಅಡಿಕೆ ಸೇರಿದಂತೆ ತೋಟಗಾರಿಕಾ ಬೆಳೆಗಳನ್ನು ಮಾರಾಟ ಮಾಡಲು ಮಾರುಕಟ್ಟೆ ಸಮಸ್ಯೆಯಾಗಿದೆ.

‘ಅಡಿಕೆ ವಹಿವಾಟು ಸ್ಥಗಿತಗೊಳಿಸಿರುವ ಕೃಷಿ ಮಾರುಕಟ್ಟೆ ಪ್ರಾಂಗಣದ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಅವರು ಕೋವಿಡ್ ಸೋಂಕಿನ ಭೀತಿ ವ್ಯಕ್ತ ಪಡಿಸುತ್ತಿದ್ದಾರೆ. ಬೆಳೆಗಾರರಿಗೆ ತೊಂದರೆಯಾಗದಂತೆ ಅವರು ಕ್ರಮ ತೆಗೆದುಕೊಳ್ಳಬೇಕು’ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಸೂರ್ಯಕಾಂತ ತಿಳಿಸಿದರು.

ಸಿದ್ದಾಪುರ: ತಾಲ್ಲೂಕಿನಲ್ಲಿ ಮುಂಗಾರು ಪೂರ್ವ ಕೃಷಿ ಕೆಲಸದ ವೇಗ ಕೋವಿಡ್‌-19 ಮತ್ತು ಲಾಕ್‌ಡೌನ್‌ ಕಾರಣದಿಂದ ಮಂದವಾಗಿದೆ.

ತಾಲ್ಲೂಕಿನ ರೈತರು ಅಡಿಕೆಗೆ ಬೋರ್ಡೋ ಮಿಶ್ರಣ, ಬಯೋಫೈಟ್‌ ಮತ್ತಿತರ ಶಿಲೀಂಧ್ರ ನಾಶಕ ಸಿಂಪರಣೆ ಮಾಡುವ ಸಮಯ ಇದಾಗಿದೆ. ಪ್ರಸ್ತುತ ಪರಿಸ್ಥಿತಿಯ ಕಾರಣದಿಂದ ಕೆಲಸಗಾರರು ಸಿಗುವುದು ಕಷ್ಟವಾಗಿದ್ದರೆ, ಕೃಷಿ ಕೆಲಸಕ್ಕೂ ಕೋವಿಡ್‌ ಭಯ ಕೂಡ ಇದೆ.

ಬೋರ್ಡೋ ಮಿಶ್ರಣಕ್ಕೆ ಬೇಕಾದ ಮೈಲಿ ತುತ್ತ, ಸುಣ್ಣ ಮತ್ತಿತರ ವಸ್ತುಗಳನ್ನು ಅಥವಾ ಶಿಲೀಂಧ್ರ ನಾಶಕಗಳನ್ನು ಪೇಟೆಯಿಂದ ತರುವುದು ಕಷ್ಟವಾಗಿದೆ. ಇನ್ನು ಭತ್ತದ ಕೃಷಿಗೆ ಸಂಬಂಧಿಸಿದಂತೆ ಗೊಬ್ಬರ, ಬೀಜ ಸಂಗ್ರಹದ ಕೆಲಸ ಸರಾಗವಾಗಿ ನಡೆಯುತ್ತಿಲ್ಲ.

‘ರೈತರಿಗೆ ಅಗತ್ಯವಾದ ಭತ್ತದ ಬೀಜ ನಮ್ಮ ರೈತ ಸಂಪರ್ಕ ಕೇಂದ್ರದಲ್ಲಿ ಇದೆ. ಗೊಬ್ಬರ ಇತ್ಯಾದಿ ವಸ್ತುಗಳು ಪಟ್ಟಣದ ಕೃಷಿ ಅಂಗಡಿಗಳಲ್ಲಿ ದೊರೆಯುತ್ತಿವೆ. ಸದ್ಯ ಮಂಗಳವಾರ ಹಾಗೂ ಶುಕ್ರವಾರ ಮಾತ್ರ ಬೆಳಿಗ್ಗೆ 6ರಿಂದ 10ರವರೆಗೆ ಈ ಅಂಗಡಿಗಳು ತೆರೆದಿರುತ್ತವೆ. ಮುಂದಿನ ದಿನಗಳಲ್ಲಿ ಈ ನಿಯಮಾವಳಿಗಳು ಸಡಿಲವಾಗಬಹುದು’ ಎಂದು ಕೃಷಿ ಅಧಿಕಾರಿ ಪ್ರಶಾಂತ ಜಿ.ಎಸ್‌. ವಿವರ ನೀಡಿದರು.

ಔಷಧ ಸಿಂಪಡಣೆಗೆ ಕಷ್ಟ:

ಕುಮಟಾ: ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ತೋಟ ಇದೆ. ಆದ್ದರಿಂದ ಮಳೆ ಆರಂಭಕ್ಕೆ ಮುನ್ನ ಅಡಿಕೆಯ ಎಳೆಗೊನೆಗಳಿಗೆ ಔಷಧಿ ಸಿಂಪಡಿಸಿ ರೋಗ ತಡೆದು ಅದನ್ನು ಉಳಿಸಿಕೊಳ್ಳುವುದು ಬೆಳೆಗಾರರಿಗೆ ಸವಾಲಾಗಿದೆ. ಅಡಿಕೆಗೆ ಉತ್ತಮ ಬೆಲೆ ಬಂದಿದ್ದರಿಂದ ಸಹಜವಾಗಿ ಅಡಿಕೆ ಬೆಳೆ ರಕ್ಷಣೆಗೆ ಹೆಚ್ಚಿನ ಕಾಳಜಿ ತೋರುತ್ತಿದ್ದಾರೆ.

ಹೆಚ್ಚಿನವರು ಜೂನ್ ಮೊದಲ ವಾರದಿಂದ ಸುಣ್ಣ, ಮೈಲುತುತ್ತ ಮಿಶ್ರಣದ ಔಷಧಿ ಸಿಂಪಡಿಸಿದರೆ ಇನ್ನು ಕೆಲವರು ಮಳೆ ಬೀಳುವ ಮುನ್ನ ಹೊಸ ಮಾದರಿಯ ಔಷಧಿ ಸಿಂಪಡಣೆ ಆರಂಭಿಸಿದ್ದಾರೆ. ಆದರೆ, ಈ ಕಾರ್ಯಕ್ಕೆ ಕೂಲಿಗಳನ್ನು ಬೇರೆ ಊರಿನಿಂದ ಕರೆತರಲು ಲಾಕ್‌ಡೌನ್ ಅಕ್ಷರಶಃ ಅಡ್ಡಿಯಾಗಿದೆ.

‘ಅಡಿಕೆಗೆ ಸಿಂಪಡಣೆ ಮಾಡುವ ಔಷಧ ತರಲು ಮಾರುಕಟ್ಟೆ ಹೋಗಬೇಕಾದರೆ ಪೊಲೀಸರು ತಡೆಯುತ್ತಾರೆ. ಅವರಿಗೆ ಹೇಗೆ ತಿಳಿ ಹೇಳಬೇಕು ಎನ್ನವುದು ರೈತರಿಗೆ ತೋಚುತ್ತಿಲ್ಲ. ಸರ್ಕಾರ ಯಾವುದೇ ಪಾಸ್ ಅಥವಾ ದಾಖಲೆ ನೀಡುತ್ತಿಲ್ಲ. ಔಷಧಿ ಸಿಂಪಡಣೆ ಮಾಡುವ ಕೂಲಿಗಳು ಬೇರೆ ತಾಲ್ಲೂಕಿನಿಂದ ನಮ್ಮ ತೋಟಕ್ಕೆ ಬರಲು ಅಂಜುತ್ತಾರೆ’ ಎನ್ನುತ್ತಾರೆ ತಾಲ್ಲೂಕಿನ ಕೃಷಿಕ ಪ್ರಶಾಂತ ನಾಯ್ಕ.

ಪ್ರಜಾವಾಣಿ ತಂಡ: ಸದಾಶಿವ ಎಂ.ಎಸ್, ಗಣಪತಿ ಹೆಗಡೆ, ಶಾಂತೇಶ ಬೆನಕನಕೊಪ್ಪ, ಎಂ.ಜಿ.ಹೆಗಡೆ, ರವೀಂದ್ರ ಭಟ್ ಬಳಗುಳಿ, ಎಂ.ಜಿ.ನಾಯ್ಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು