ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ವಿದೇಶಿ ಕಾಳುಮೆಣಸಿಗೆ ದೇಸಿ ಬೆಳೆ ತತ್ತರ

ಲಾಕ್‌ಡೌನ್‌ನಲ್ಲೂ ಏರಿಕೆಯಾಗದ ದರ; ಮಾರುಕಟ್ಟೆಯಲ್ಲಿ ವಿಯಟ್ನಾಂ ಉತ್ಪನ್ನದ ಘಾಟು
Last Updated 1 ಜೂನ್ 2020, 4:08 IST
ಅಕ್ಷರ ಗಾತ್ರ

ಶಿರಸಿ: ವಿದೇಶಿ ಕಾಳುಮೆಣಸಿನ ಅವ್ಯಾಹತ ನುಸುಳುವಿಕೆಗೆ ದೇಶೀಯ ಬೆಳೆ ತತ್ತರಿಸಿದೆ. ಇದರೊಂದಿಗೆ ಲಾಕ್‌ಡೌನ್ ಕಾರಣಕ್ಕೆ ಸ್ಥಗಿತಗೊಂಡಿರುವ ಪ್ರವಾಸೋದ್ಯಮ, ಹೋಟೆಲ್ ಉದ್ಯಮದಿಂದ ಕಾಳುಮೆಣಸು ಮಾರುಕಟ್ಟೆಗೆ ಇನ್ನಷ್ಟು ಹೊಡೆತ ನೀಡಿದೆ.

ಅಡಿಕೆ ತೋಟದಿಂದ ಬೆಟ್ಟದವರೆಗೆ ಹಬ್ಬಿರುವ ಕಾಳುಮೆಣಸು ರೈತರ ಉಪ ಬೆಳೆ. ಬಹುಕಾಲ ಸಂಗ್ರಹಿಸಿಟ್ಟರೂ ಕೆಡದ ಈ ಬೆಳೆಯನ್ನು ರೈತರು ಆಪತ್ತಿನ ಕಾಲದ ನಿಧಿಯಾಗಿ ಬಳಸುತ್ತಾರೆ. ಮಾರುಕಟ್ಟೆಯಲ್ಲಿ ಉತ್ತಮ ದರವಿದ್ದಾಗ ಮಾರಾಟ ಮಾಡಲು, ಸಂಗ್ರಹಿಸಿಡುತ್ತಾರೆ. ಲಾಕ್‌ಡೌನ್‌ ಕಾರಣಕ್ಕೆ ವಿದೇಶಿ ವಸ್ತು ಆಮದು ಬಂದಾಗಿರುವುದರಿಂದ ಇಲ್ಲಿನ ಕಾಳುಮೆಣಸಿಗೆ ಒಳ್ಳೆಯ ದರ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ನಿರಾಸೆಯಾಗಿದೆ.

ಮೂರನೇ ಹಂತದ ಲಾಕ್‌ಡೌನ್‌ ಸಂದರ್ಭದಲ್ಲೇ ಅಡಿಕೆ ಮಾರುಕಟ್ಟೆಯಲ್ಲಿ ವಹಿವಾಟು ಆರಂಭವಾಗಿ, ಅಡಿಕೆ ದರ ಏರಿಕೆಯಾದರೂ, ಕಾಳುಮೆಣಸಿನ ದರದಲ್ಲಿ ಚೇತರಿಕೆ ಕಂಡಿಲ್ಲ. ‘ಲಾಕ್‌ಡೌನ್ ಪೂರ್ವದಲ್ಲಿ ವಿಯಟ್ನಾಂನಿಂದ ಬಂದಿರುವ ಕಾಳುಮೆಣಸು ಇನ್ನೂ ದೇಸಿ ಮಾರುಕಟ್ಟೆಯಲ್ಲಿ ಇದೆ. ಅಲ್ಲದೇ, ಕಾಳುಮೆಣಸು ಅತಿ ಹೆಚ್ಚು ಬಳಕೆ ಮಾಡುವ ಮಹಾರಾಷ್ಟ್ರ, ಗುಜರಾತ್‌ ರಾಜ್ಯಗಳಲ್ಲಿ ಈಗ ಬೇಡಿಕೆ ತಗ್ಗಿದೆ. ಪ್ರವಾಸೋದ್ಯಮ ಬಂದಾಗಿದೆ. ಹೋಟೆಲ್‌ಗಳಲ್ಲಿ ವ್ಯಾಪಾರ ಗಣನೀಯವಾಗಿ ತಗ್ಗಿದೆ. ಹೀಗಾಗಿ, ಕಾಳುಮೆಣಸಿಗೆ ದರ ಏರಿಕೆಯಾಗುತ್ತಿಲ್ಲ’ ಎನ್ನುತ್ತಾರೆ ವ್ಯಾಪಾರಸ್ಥರೊಬ್ಬರು.

‘ದೇಶದಲ್ಲಿ ವಾರ್ಷಿಕ 40ಸಾವಿರ ಟನ್‌ನಷ್ಟು ಕಾಳುಮೆಣಸು ಉತ್ಪಾದನೆಯಾಗುತ್ತದೆ. ಆದರೆ, ದೇಶೀಯವಾಗಿ 75ಸಾವಿರ ಟನ್‌ನಷ್ಟು ಬೇಡಿಕೆಯಿದೆ. ದೇಶೀಯ ಬೇಡಿಕೆ ಪೂರೈಸಲು ಮುಕ್ತ ವ್ಯಾಪಾರ ಒಪ್ಪಂದದ ಅಡಿಯಲ್ಲಿ ವಿಯಟ್ನಾಂನಿಂದ ಕಾಳುಮೆಣಸು ಆಮದಾಗುತ್ತದೆ. ಆಮದಿನ ವೇಳೆ ಅಗತ್ಯಕ್ಕಿಂತ ಅಧಿಕ ಪ್ರಮಾಣದಲ್ಲಿ ಅಕ್ರಮವಾಗಿ ನುಸುಳಿ ಬರುತ್ತದೆ. ಫೆಬ್ರುವರಿ ಅಂತ್ಯದಲ್ಲಿ 20ಸಾವಿರ ಟನ್‌ನಷ್ಟು ಕಾಳುಮೆಣಸು ಭಾರತಕ್ಕೆ ಬಂದಿದೆ. ಇದೇ ಶಿಲ್ಕು ಇನ್ನೂ ಉಳಿದಿದೆ’ ಎನ್ನುತ್ತಾರೆ ಅವರು.

ಕೆಲ ವರ್ಷಗಳ ಹಿಂದೆ ಕ್ವಿಂಟಲ್‌ವೊಂದಕ್ಕೆ ₹ 70ಸಾವಿರದವರೆಗೆ ಹೋಗಿದ್ದ ಕಾಳುಮೆಣಸಿನ ಬೆಲೆ ಈಗ ಒಂದೆರಡು ವರ್ಷಗಳಿಂದ ಪ್ರತಿ ಕ್ವಿಂಟಲ್‌ಗೆ ಸರಾಸರಿ ₹ 30ಸಾವಿರ ದೊರೆಯುತ್ತಿದೆ. ಬೆಳೆಸಾಲ ಪಾವತಿ, ತೋಟದ ಅಭಿವೃದ್ಧಿ ಕಾರ್ಯಕ್ಕೆ ಕೆಲವು ರೈತರು ಉತ್ಪನ್ನ ಮಾರಾಟ ಮಾಡಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ 1000 ಕ್ವಿಂಟಲ್‌ನಷ್ಟು ಮಾರಾಟವಾಗಿದೆ. ಇನ್ನೂ ಸುಮಾರು 800 ಕ್ವಿಂಟಲ್‌ನಷ್ಟು ಶಿಲ್ಕು ರೈತರ ಬಳಿ ಇದ್ದಿರುವ ಸಾಧ್ಯತೆಯಿದೆ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

***

ಲಾಕ್‌ಡೌನ್ ಪೂರ್ವದಲ್ಲೇ ಕಳ್ಳಮಾರ್ಗದಲ್ಲಿ ಬಂದಿರುವ ವಿಯೆಟ್ನಾಂ ಕಾಳುಮೆಣಸು ಇನ್ನೂ ಮಾರುಕಟ್ಟೆಯಲ್ಲಿದೆ. ಇದು ಖಾಲಿಯಾದರೆ, ಸ್ಥಳೀಯ ಮಾರುಕಟ್ಟೆಯಲ್ಲಿ ದರ ಏರಿಕೆಯಾಗಬಹುದು

–ರವೀಶ ಹೆಗಡೆ,ಟಿಎಎಸ್‌ಎಸ್‌ ಪ್ರಧಾನ ವ್ಯವಸ್ಥಾಪಕ

ಕಾಳುಮೆಣಸು (ಕ್ವಿಂಟಲ್‌ಗೆ)

ಕನಿಷ್ಠ ದರ ₹28400

ಗರಿಷ್ಠ ದರ ₹32900

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT