ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಣಬಿ ಬುಡಕಟ್ಟು ಜನಾಂಗದ ಮಹಾದೇವ ಬುದೋ ವೇಳಿಪಗೆ ರಾಜ್ಯೋತ್ಸವ ಪ್ರಶಸ್ತಿ

ಜೊಯಿಡಾಕ್ಕೆ ಅಪರೂಪಕ್ಕೆ ಒಲಿದ ಉನ್ನತ ಪ್ರಶಸ್ತಿ: ಸ್ಥಳೀಯರಲ್ಲಿ ಸಂತಸ
Last Updated 31 ಅಕ್ಟೋಬರ್ 2021, 13:10 IST
ಅಕ್ಷರ ಗಾತ್ರ

ಜೊಯಿಡಾ: ತಾಲ್ಲೂಕಿನ ನಾಗೋಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಟೋಳಿ ಗ್ರಾಮದ ಕುಣಬಿ ಬುಡಕಟ್ಟು ಜನಾಂಗದ ಮಹಾದೇವ ಬುದೋ ವೇಳಿಪ (92) ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.

‘ಪರಿಸರ’ ವಿಭಾಗದಲ್ಲಿ ಅವರನ್ನು ಗುರುತಿಸಲಾಗಿದ್ದು, ಅವರ ಕಾರ್ಯಗಳನ್ನು ಬಲ್ಲವರ ಸಂತಸಕ್ಕೆ ಕಾರಣವಾಗಿದೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ತಾಲ್ಲೂಕಿನವರು ಭಾಜನರಾಗಿದ್ದು ತಾಲ್ಲೂಕಿನ ಇತಿಹಾಸದಲ್ಲೇ ಮೊದಲು ಎಂಬುದೂ ಸ್ಥಳೀಯರನ್ನು ಪುಳಕಿತರನ್ನಾಗಿಸಿದೆ.

ಕೃಷಿ ಕುಟುಂಬದವರಾದ ಇವರು, ಹಲವು ವರ್ಷಗಳಿಂದ ಬುಡಕಟ್ಟು ಸಂಸ್ಕೃತಿ ಹಾಗೂ ಕಲೆಯನ್ನು ಬೆಳೆಸಿ ಉಳಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬುಡಕಟ್ಟು ಕುಣಬಿ ಸಂಸ್ಕೃತಿಯನ್ನು ಹಾಡುಗಳ ಮೂಲಕ ಸಮಾಜದಲ್ಲಿ ಅರಿವು ಬಿತ್ತರಿಸುತ್ತಿದ್ದಾರೆ.

ಜೇನು ನೊಣಗಳು ಮತ್ತು ಉಂಬಳ ರಕ್ಷಣೆ, ಕಾಡಿನಿಂದ ಒಣ ಎಲೆಗಳನ್ನು ತರಬಾರದು ಎಂದು ಅದರ ಮಹತ್ವವನ್ನು ಜನರಿಗೆ ತಿಳಿ ಹೇಳುತ್ತಿದ್ದಾರೆ. 38 ಜಾತಿಯ ಗೆಡ್ಡೆ, ಗೆಣಸುಗಳನ್ನು ಗುರುತಿಸುತ್ತಾರೆ. ಪಕ್ಷಿಗಳ ಕೂಗನ್ನು ಆಧರಿಸಿ ಸಮಯ ಹೇಳುವುದು ಇವರ ವಿಶೇಷವಾಗಿದೆ. ಕೃಷಿಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಪ್ರತಿ ಹಂತದಲ್ಲೂ ಇವರು ಸಾಂಪ್ರದಾಯಿಕ ಸಾಂಸ್ಕೃತಿಕ ಹಾಡುಗಳನ್ನು ಹಾಡಿ ಮುಂದಿನ ಕಾರ್ಯಗಳನ್ನು ಮಾಡುತ್ತಾರೆ.

ಇವರಿಗೆ ಮೂವರು ಗಂಡು ಮಕ್ಕಳು ಹಾಗೂ ನಾಲ್ವರು ಹೆಣ್ಣು ಮಕ್ಕಳು. ಕೆಲವು ವರ್ಷಗಳ ಹಿಂದೆ ಪತ್ನಿ ಹಾಗೂ ಹಿರಿಯ ಮಗ ನಿಧನರಾಗಿದ್ದಾರೆ. ಈಗ ಜೊಯಿಡಾದಿಂದ ಸುಮಾರು 22 ಕಿಲೋಮೀಟರ್ ದೂರದಲ್ಲಿರುವ ಕಾರ್ಟೊಳಿಯಲ್ಲಿ ತಮ್ಮ ಮಗ ದೇವಿದಾಸ ವೇಳಿಪ ಅವರೊಂದಿಗೆ ವಾಸಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT