ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಗಾನದ 'ರಸಋಷಿ' ಹೊಸ್ತೋಟ ಮಂಜುನಾಥ ಭಾಗವತ ಇನ್ನಿಲ್ಲ

Last Updated 7 ಜನವರಿ 2020, 10:59 IST
ಅಕ್ಷರ ಗಾತ್ರ
ADVERTISEMENT
""
""

ಶಿರಸಿ: ಯಕ್ಷಗಾನಕ್ಕಾಗಿ ಇಡೀ ಬದುಕನ್ನೇ ಸಮರ್ಪಿಸಿದ ತಪಸ್ವಿ ಹೊಸ್ತೋಟ ಮಂಜುನಾಥ ಭಾಗವತ (80) ಮಂಗಳವಾರ ನಿಧನರಾದರು.

ತಾಲ್ಲೂಕಿನ ವಾನಳ್ಳಿ ಸಮೀಪ ಮೋತಿಗುಡ್ಡದ ಕುಟೀರವೇ ಅವರ ನೆಲೆಯಾಗಿತ್ತು. ಅನಾರೋಗ್ಯಕ್ಕೆ ಒಳಗಾದ ಮೇಲೆ ಕೆಲಕಾಲ ಆಸ್ಪತ್ರೆಯಲ್ಲಿದ್ದರು. ನಂತರ ಆತ್ಮೀಯರ ಮನೆಯಲ್ಲಿ ತಂಗಿದ್ದ ಅವರಿಗೆ ಅಭಿಮಾನಿಗಳು ಆರೈಕೆ ಮಾಡುತ್ತಿದ್ದರು. 15 ದಿನಗಳಿಂದ ಸಂಪೂರ್ಣ ಹಾಸಿಗೆ ಹಿಡಿದಿದ್ದ ಅವರಿಗೆ, ವೇದನೆಯಲ್ಲೂ ಯಕ್ಷಗಾನವೇ ಸಮಾಧಾನ ಕೊಡುತ್ತಿತ್ತು.

ತಾಲ್ಲೂಕಿನ ಹನುಮಂತಿ ಗ್ರಾಮದ ಹೊಸ್ತೋಟದಲ್ಲಿ ಭಾಗವತರು 1940ರಲ್ಲಿ ಜನಿಸಿದವರು. ಚಿಕ್ಕಂದಿನಿಂದಲೇ ಯಕ್ಷಗಾನದಲ್ಲಿ ಅತೀವ ಆಸಕ್ತಿ ಹೊಂದಿದವರಾಗಿದ್ದರು. ಅವರ ಇಷ್ಟದ ಕಲಾವಿದರಾಗಿದ್ದ ಕೆರೆಮನೆ ಶಿವರಾಮ ಹೆಗಡೆ ಅವರ ಬಳಿ ಯಕ್ಷಗಾನದ ಸರ್ವಾಂಗೀಣ ಶಿಕ್ಷಣ ಪಡೆದ ನಂತರ, ಕೆರೆಮನೆ ಮೇಳದಲ್ಲಿ ಕಲಾವಿದರಾಗಿ ಪಾತ್ರ ನಿರ್ವಹಿಸಿದರು. ಬಾಳೆಹದ್ದ ಕೃಷ್ಣ ಭಾಗವತ ಹಾಗೂ ಕೆರಮನೆ ಮಹಾಬಲ ಹೆಗಡೆ ಶಿಷ್ಯನಾಗಿ ಯಕ್ಷಗಾನದ ಕಲಿಕೆಯ ಪಂಚಾಂಗವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡರು. ಯಕ್ಷಗಾನದ ಭಾಗವತಿಕೆ, ನೃತ್ಯ, ಚಂಡೆ, ಮದ್ದಲೆ ವಾದನ, ವೇಷಗಾರಿಕೆ, ಅರ್ಥಗಾರಿಕೆ ಹೀಗೆ ಎಲ್ಲ ವಿಭಾಗಗಳಲ್ಲೂ ತಜ್ಞತೆ ಹೊಂದಿದ್ದರು.

ಇದನ್ನೂ ಓದಿ:ಪರಿವ್ರಾಜಕನ ಪಯಣ

ಅಧ್ಯಾತ್ಮದ ಒಲವು ಹೊಂದಿದ್ದ ಅವರು, 1966ರಲ್ಲಿ ರಾಮಕೃಷ್ಣ ಆಶ್ರಮದಲ್ಲಿ ಪರಿವ್ರಾಜಕ ವ್ರತ ಸ್ವೀಕರಿಸಿದರು. ನಂತರ ಇಡೀ ಬದುಕನ್ನು ಯಕ್ಷಗಾನಕ್ಕೆ ಮುಡಿಪಾಗಿಟ್ಟರು.

ರಾಮ ನಿರ್ಯಾಣ, ಶ್ರೀರಾಮ ಮಹಿಮೆ (19 ಆಖ್ಯಾನಗಳು), ಶ್ರೀಕೃಷ್ಣ ಮಹಿಮೆ (21 ಆಖ್ಯಾನಗಳು), ಮಹಾಭಾರತ (50 ಆಖ್ಯಾನಗಳು), ಹನುಮಾಯಣ (28 ಆಖ್ಯಾನಗಳು), ಗೋಮಹಿಮೆ (33 ಆಖ್ಯಾನಗಳು), ರಾಮಕೃಷ್ಣ ಚರಿತೆ (27ಆಖ್ಯಾನಗಳು), ಭಾಸವತಿ, ಮೇಘದೂತ, ಉತ್ತರರಾಮ ಚರಿತೆ, ಪ್ರತಿಜ್ಞಾಯೌಗಂಧರಾಯಣ, ಚಂಡ ಮಹಾಸೇನ, ಸುಹಾಸಿನಿ ಪರಿಣಯ ಮೊದಲಾದ 300ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ ಮೇರು ವ್ಯಕ್ತಿತ್ವ ಅವರದು.

ಹಲವು ವರ್ಷಗಳ ಕಾಲ ಶಿರಸಿ ತಾಲ್ಲೂಕಿನ ಕೋಳಿಗಾರ ಲಕ್ಷ್ಮೀನರಸಿಂಹ ದೇವಾಲಯದಲ್ಲಿ ಹೊಸ್ತೋಟ ಭಾಗವತರ ಮಾರ್ಗದರ್ಶನದಲ್ಲಿ ಯಕ್ಷಗಾನ ಸಪ್ತಾಹ ನಡೆದಿದೆ. ಶ್ರೀ ಲಕ್ಷ್ಮೀನರಸಿಂಹ ಪ್ರಸಾದಿತ ಯಕ್ಷಗಾನ ಮಂಡಳಿ ಸೋಂದಾ, ಸಮಯ ಸಮೂಹ ಶಿರಸಿ, ವನಶ್ರೀ ಶಿಕ್ಷಣ ಸಂಸ್ಥೆ ಸಾಗರ, ಯಕ್ಷಕೂಟ ಮೈಸೂರು ಮೊದಲಾದ ಯಕ್ಷಗಾನ ಮಂಡಳಿಗಳಿಗೆ ನಿರ್ದೇಶನ ಮಾಡಿದ್ದಾರೆ. ಯಕ್ಷಗಾನ ಸಮ್ಮೇಳನಗಳ ಅಧ್ಯಕ್ಷತೆ, ವಿದ್ವತ್‌ಪೂರ್ಣ ಪ್ರಬಂಧ ಮಂಡನೆ ಮೂಲಕ ಸಭಿಕರಲ್ಲಿ ಯಕ್ಷಗಾನದ ಬಗ್ಗೆ ಹೊಸ ಹೊಳಹು ಮೂಡಿಸಲು ಭಾಗವತರು ಕಾರಣರಾದವರು. ಸಹಸ್ರಾರು ತಾಳಮದ್ದಲೆಗಳಲ್ಲಿ ಅರ್ಥಧಾರಿಯಾಗಿ ಪ್ರೇಕ್ಷಕರ ಮನದಲ್ಲಿ ಚಿರಸ್ಥಾಯಿಯಾದವರು ಭಾಗವತರು.

ಸುಮಾರು 75 ಸ್ಥಳಗಳಲ್ಲಿ ಯಕ್ಷಗಾನ ತರಬೇತಿ ಕೇಂದ್ರಗಳನ್ನು ನಡೆಸಿ, 1600ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. 1990ರಲ್ಲಿ ಶಿವಮೊಗ್ಗದ ಶ್ರೀ ಶಾರದಾದೇವಿ ಅಂಧರ ವಿಕಾಸ ಕೇಂದ್ರದ ಅಂಧ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಿ, ದಾಖಲೆ ಬರೆದವರು ಹೊಸ್ತೋಟ ಭಾಗವತರು. ಈ ಶಾಲೆಯ ಮಕ್ಕಳು ‘ಕಂಸವಧೆ’ ಪ್ರಸಂಗವನ್ನು 200ಕ್ಕೂ ಹೆಚ್ಚು ಕಡೆಗಳಲ್ಲಿ ಪ್ರದರ್ಶಿಸಿದ್ದರು.

ಪರಿಸರ ಪ್ರಜ್ಞೆಯನ್ನು ಜಾಗೃತಗೊಳಿಸಲು ‘ಗೋವರ್ಧನ ಗಿರಿ ಪೂಜೆ’, ‘ನಿಸರ್ಗ ಸಂಧಾನ’ ಹಾಗೂ ‘ಪ್ರಕೃತಿ ಸಂಧಾನ’ ಪ್ರಸಂಗಗಳನ್ನು ರಚಿಸಿದ್ದರು. ಈ ಆಖ್ಯಾನಗಳು ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ 200ಕ್ಕೂ ಹೆಚ್ಚು ಕಡೆ ಪ್ರದರ್ಶನಗೊಂಡಿವೆ. ವೀರಶೈವ ಸಿದ್ಧಾಂತ ಕುರಿತು ‘ಮಾಯಾ ಕೋಲಾಹಲ’, ‘ಪ್ರಭುಲಿಂಗ ಲೀಲೆ’ ಹಾಗೂ ‘ಬಸವೇಶ್ವರ ಚರಿತೆ’ ಇಂತಹ ವಿಭಿನ್ನ ಪ್ರಸಂಗಗಳನ್ನು ಅವರು ರಚಿಸಿದ್ದರು. ಇವು ಆಕಾಶವಾಣಿಯಲ್ಲಿ ಬಿತ್ತರಗೊಂಡಿವೆ.

ಸಾಕ್ಷರತೆಯ ಮಹತ್ವ ಸಾರಲು ರಚಿಸಿದ್ದ ‘ಅಕ್ಷರ ವಿಜಯ’ ಯಕ್ಷಗಾನ 50ಕ್ಕೂ ಹೆಚ್ಚುಕಡೆ ಪ್ರದರ್ಶನಗೊಂಡಿದೆ. ಭಾಗವತರು ದ್ವಿಪದಿಯಲ್ಲಿ ರಚಿಸಿದ ರಾಮಕೃಷ್ಣ ಚರಿತೆಯು ಅಕ್ಷಯಕುಮಾರ ಸೇನರು ಮೂಲ ಬಂಗಾಲಿಯಲ್ಲಿ ಬರೆದ ಕಾವ್ಯದ ಕನ್ನಡ ಅವತರಣಿಕೆಯಾಗಿದೆ. ಅವರು ಬರೆದ ‘ಯಕ್ಷಗಾನ ಶಿಕ್ಷಣ-ಲಕ್ಷಣ’ ಕೃತಿಯು ಇದೇ ಡಿಸೆಂಬರ್ 8ರಂದು ಯಕ್ಷಮಿತ್ರ ಕೂಟ, ಟೊರಾಂಟೊ ಅವರಿಂದ ಪ್ರಕಾಶನಗೊಂಡಿದೆ.

ಅವರ ಇತರ ಕೃತಿಗಳು

ಯಕ್ಷಗಾನ ತಾಳಸೂತ್ರ, ಯಕ್ಷಗಾನ ಮಟ್ಟುಗಳ ಸಂಗ್ರಹ, ಯಕ್ಷಗಾನ ಮದ್ದಲೆ ನುಡಿಗಟ್ಟುಗಳು, ಪವಾಡವಲ್ಲ ವಿಸ್ಮಯ, ಒಡಲಿನ ಮಡಿಲು-ಯಕ್ಷತಾರೆ, ಅನುಭವ ಕಥನಗಳು.

ಅವರಿಗೆ ಸಂದಿರುವ ಪ್ರಶಸ್ತಿಗಳು

* ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1987)

* ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪಾರ್ತಿಸುಬ್ಬ ಪ್ರಶಸ್ತಿ (2012)

* ಜಾನಪದ ಅಕಾಡೆಮಿಯ ವಿಶೇಷ ಪುರಸ್ಕಾರ (2012)

* ಅಗ್ನಿ ಸೇವಾ ಟ್ರಸ್ಟ್‌ನ ಪರಮದೇವ ಪ್ರಶಸ್ತಿ

* ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ (2014)

* ಹಾರಾಡಿ ರಾಮ ಗಾಣಿಗ ಮತ್ತು ವೀರಭದ್ರ ನಾಯಕ ಪ್ರಶಸ್ತಿ (2014)

* ಸೀತಾನದಿ ಗಣಪಯ್ಯ ಭಾಗವತ ಪುರಸ್ಕಾರ

* ಯಕ್ಷಗಾನ ಕಲಾರಂಗ ಉಡುಪಿ ನೀಡುವ ಉಪ್ಪೂರು ನಾರಾಯಣ ಭಾಗವತ ಪ್ರಶಸ್ತಿ (2015)

* ರಾಮವಿಠ್ಠಲ ಪುರಸ್ಕಾರ (2014)

* ಆಳ್ವಾಸ ನುಡಿಸಿರಿ ಪುರಸ್ಕಾರ

* ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (2016)

ಪ್ರಕಟಗೊಂಡಿರುವ ಅಭಿನಂದನಾ ಗ್ರಂಥಗಳು:

* ‘ಯಕ್ಷ ಋಷಿ’ - ಹೊಸ್ತೋಟ ಮಂಜುನಾಥ ಭಾಗವತರ ಅಭಿನಂದನಾ ಸಮಿತಿ, ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ

* ‘ಷಷ್ಠ್ಯಬ್ಧಿ’ - ಸಾಕೇತ ಟ್ರಸ್ಟ್ ಹೆಗ್ಗೋಡು

* ‘ಬಹುಮುಖ’ - ನಾರಾಯಣ ಜೋಶಿ ಚಾರಿಟಬಲ್ ಟ್ರಸ್ಟ್ ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT