ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾವರ: ಮಂಕಿಗೆ ಪಟ್ಟಣ ಪಂಚಾಯಿತಿಯ ಬಡ್ತಿ

ರಾಜ್ಯದ ಅತಿ ದೊಡ್ಡ ಗ್ರಾಮಗಳಲ್ಲಿ ಒಂದಾಗಿದ್ದ ಪ್ರದೇಶ: ಜನಸಂಖ್ಯೆ ಆಧರಿಸಿ ಮೇಲ್ದರ್ಜೆಗೆ
Last Updated 27 ನವೆಂಬರ್ 2020, 13:33 IST
ಅಕ್ಷರ ಗಾತ್ರ

ಹೊನ್ನಾವರ: ತಾಲ್ಲೂಕಿನ ಮಂಕಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರವು ಶುಕ್ರವಾರ ಒಪ್ಪಿಗೆ ನೀಡಿದೆ. ಆಡಳಿತ ವಲಯದಲ್ಲಿ ಹಲವು ವರ್ಷಗಳಿಂದ ನಡೆಯುತ್ತಿದ್ದ ಪ್ರಯತ್ನಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ.

ಮಂಕಿ ಗ್ರಾಮ ಪಂಚಾಯಿತಿಯು ರಾಜ್ಯದಲ್ಲೇ ದೊಡ್ಡ ಗ್ರಾಮ ಪಂಚಾಯಿತಿಗಳಲ್ಲಿ ಒಂದು. 2015ರಲ್ಲಿ ಮಂಕಿ ಗುಳದಕೇರಿ, ಮಂಕಿ ಎ ಹಳೇಮಠ, ಮಂಕಿ ಬಿ ಅನಂತವಾಡಿ ಹಾಗೂ ಮಂಕಿ ಸಿ ಚಿತ್ತಾರ ಎಂದು ನಾಲ್ಕು ಗ್ರಾಮ ಪಂಚಾಯಿತಿಗಳನ್ನಾಗಿ ವಿಭಾಗ ಮಾಡಲಾಗಿತ್ತು. ಈ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಕಟ್ಟಡ ಸೇರಿದಂತೆ ವಿವಿಧ ಮೂಲ ಸೌಕರ್ಯಗಳು ಇನ್ನೂ ದೂರದ ಮಾತಾಗಿವೆ. ಇದರ ನಡುವೆಯೇ ಇಲ್ಲಿನ ನಾಗರಿಕರಿಗೆ ಪಟ್ಟಣ ಪಂಚಾಯಿತಿಯ ‘ಬಹುಮಾನ’ ಸಿಕ್ಕಿದೆ.

ಮಂಕಿ ಗ್ರಾಮವನ್ನು ಪಟ್ಟಣ ಪಂಚಾಯಿತಿ ಮಾಡುವುದಕ್ಕೆ ಸಂಬಂಧಿಸಿದಂತೆ ಪರ ಹಾಗೂ ವಿರೋಧದ ಮಾತುಗಳು ಕೇಳಿ ಬಂದಿದ್ದವು. ಹಳೇಮಠ, ಗುಳದಕೇರಿ ಹಾಗೂ ಸಮುದ್ರ ತೀರದ ಭಾಗಗಳಲ್ಲಿ ವಿಶೇಷವಾಗಿ ವಿರೋಧದ ಕೂಗು ಹೆಚ್ಚಾಗಿತ್ತು. ಪಟ್ಟಣ ಪಂಚಾಯಿತಿಯಾದರೆ ಮನೆ, ವಿದ್ಯುತ್ ಮೊದಲಾದವುಗಳ ಶುಲ್ಕ ಜಾಸ್ತಿಯಾಗುವ ಜೊತೆಗೆ ವಿದ್ಯಾರ್ಥಿಗಳಿಗೆ ಗ್ರಾಮೀಣ ಭಾಗದವರೆಂದು ಸಿಗುವ ಸವಲತ್ತು ಸಿಗುವುದಿಲ್ಲ ಎನ್ನುವ ವಿರೋಧ ವ್ಯಕ್ತವಾಗಿತ್ತು.

ಪಟ್ಟಣ ಪಂಚಾಯಿತಿಯಾದರೆ ರಸ್ತೆ, ನೀರು ಮೊದಲಾದ ಮೂಲಸೌಕರ್ಯ ಒಲಿದುಬರುತ್ತದೆ ಎನ್ನುವುದು ಪರವಾಗಿ ವಾದಿಸುವವರ ಅಭಿಮತವಾಗಿತ್ತು. ಅಲ್ಲದೇ ಗ್ರಾಮ ಪಂಚಾಯಿತಿಯಲ್ಲಿ ಇರುವ ಏಕಸ್ವಾಮ್ಯ ಹೋಗುತ್ತದೆ ಎನ್ನುವ ಕೆಲವು ಸಮುದಾಯಗಳ ಮುಖಂಡರ ಆತಂಕ ಕೂಡ ವಿರೋಧದ ಹಿನ್ನೆಲೆಯ ರಾಜಕೀಯದಲ್ಲಿತ್ತು.

ತಾಲ್ಲೂಕಿಗೆ ಹೋರಾಟವಾಗಿತ್ತು:

ಮಂಕಿಯನ್ನು ತಾಲ್ಲೂಕು ಮಾಡಬೇಕು ಎನ್ನುವ ಹೋರಾಟವೂ ನಡೆದಿತ್ತು. ಗ್ರಾಮದಲ್ಲಿ 2020– 21ರಲ್ಲಿ ಅಂದಾಜು 21,228 ಜನಸಂಖ್ಯೆಯಿ ಇರಲಿದೆ. ಇದನ್ನು ಪರಿಗಣಿಸಿ ಪಟ್ಟಣ ಪಂಚಾಯಿತಿಯ ಬಡ್ತಿ ಸಿಕ್ಕಿದೆ.

ಪಟ್ಟಣದ ವ್ಯಾಪ್ತಿ:

ಮಂಕಿ ಗುಳದಕೇರಿ ಮತ್ತು ಮಂಕಿ ಹಳೇಮಠ ‘ಎ’ ಗ್ರಾಮ ಪಂಚಾಯಿತಿಗಳ ಪೂರ್ತಿ ಪ್ರದೇಶಗಳು ಹಾಗೂ ಚಿತ್ತಾರ ಕಂದಾಯ ಗ್ರಾಮ ವ್ಯಾಪ್ತಿಯ ಉಪ್ಲೆ, ನೀಲಗಿರಿ, ವಡಗೇರಿ, ಶಶಿಕೊಡ್ಲ, ಮುಂಡಾರ, ಹಳೆಸಂಪಾಲ ಅರ್ಲೆ, ಕಂಚಿಕೊಡ್ಲ, ಗಂಜಿಗೇರಿ, ಚಿತ್ತಾರ ಮಜರೆಗಳು.

ಅನಂತವಾಡಿ ಕಂದಾಯ ಗ್ರಾಮದ ಕಾಸಗೇರಿ, ಅನಂತವಾಡಿ, ಕೊಪ್ಪದಮಕ್ಕಿ, ಬೆದರಕೇರಿ, ಮಾವಿನಸಾಗ, ಅನ್ನೆಬೀಳು, ಭೂತನಜೆಡಿ, ಎಳ್ಳಿಮಕ್ಕಿ ಜೆಡ್ಡಿ, ಮಾವಿನಕುಳಿ, ನಗರಮನೆ, ಹಾಜಿಮನೆ, ಶೇಡಿಮನೆ ಮತ್ತು ಮುಳಗೋಡ ಮಜರೆಗಳು ಕೂಡ ಹೊಸ ಪಟ್ಟಣ ಪಂಚಾಯಿತಿಗೆ ವ್ಯಾಪ್ತಿಗೆ ಸೇರಲಿವೆ.

* ಮಂಕಿಯನ್ನು ಪಟ್ಟಣ ಪಂಚಾಯಿತಿ ಮಾಡಬೇಕು ಎಂದು ನಾವು ನ್ಯಾಯಾಲಯದ ಮೊರೆ ಹೋಗಿದ್ದೆವು. ಒಳ್ಳೆಯ ರಸ್ತೆ ಸೇರಿದಂತೆ ಇತರ ಮೂಲ ಸೌಕರ್ಯದ ನಿರೀಕ್ಷಿಯಿದೆ.

– ರಾಜು ನಾಯ್ಕ, ಮಾಜಿ ಸದಸ್ಯ, ಹೊನ್ನಾವರ ತಾ.ಪಂ.

* ಪಟ್ಟಣ ಪಂಚಾಯಿತಿಯಲ್ಲಿ ಹೆಚ್ಚಿನ ಸೌಕರ್ಯ ನಿರೀಕ್ಷಿಸಬಹುದು. ಮಂಕಿಯ ಸಮೀಪದ ಗ್ರಾಮಗಳನ್ನು ಸೇರಿಸಿ ಪ್ರತ್ಯೇಕ ತಾಲ್ಲೂಕು ಮಾಡಿದರೆ ಮತ್ತಷ್ಟು ಅನುಕೂಲವಾಗುತ್ತದೆ.

– ವೆಂಕಟೇಶ ಮೇಸ್ತ, ಪತ್ರಕರ್ತ

* ಮಂಕಿಯನ್ನು ಪಟ್ಟಣ ಪಂಚಾಯಿತಿ ಮಾಡಿದ ಸುದ್ದಿ ಗ್ರಾಮದ ಜನರಲ್ಲಿ ಸಂಚಲನ ಮೂಡಿಸಿದೆ. ಪ್ರಸ್ತುತ ಬದಲಾವಣೆ ಜನರಿಗೆ ಹೆಚ್ಚಿನ ಅನುಕೂಲ ಕಲ್ಪಿಸಬಹುದು.

– ರಕ್ಷಾ ನಾಯ್ಕ, ಉಪನ್ಯಾಸಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT