ಶನಿವಾರ, ಜುಲೈ 2, 2022
25 °C
ವಿನೂತನ ಮಾದರಿಯಲ್ಲಿ ಸಾವಯವ ಗೊಬ್ಬರ ತಯಾರಿಕೆ

ಶಿರಸಿ | ಎರೆಗೊಬ್ಬರ ಉತ್ಪಾದನೆ: ಪದವೀಧರೆ ಸಾಧನೆ

ಗಣಪತಿ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ‘ಬೇರೆಯವರ ಕೈ ಕೆಳಗೆ ಕೆಲಸ ಮಾಡಲು ಇಷ್ಟವಿಲ್ಲ. ಶಿಕ್ಷಣ ಜ್ಞಾನ ನೀಡಿದೆ. ಕೃಷಿ ಬದುಕು ನನಗೆ ನೆಮ್ಮದಿ ಜತೆಗೆ ಆದಾಯವನ್ನೂ ತಂದುಕೊಡುತ್ತಿದೆ’

ಹೀಗೆ ಮಾತಿಗೆ ಇಳಿದವರು ಅಂಕೋಲಾ ತಾಲ್ಲೂಕಿನ ನೇವಳಸೆಯ ಸುಷ್ಮಾ ಭಟ್. ಅವರಿಗೆ ಈಗ ಕೇವಲ 24 ವರ್ಷ. ಮನೆಯ ಆವರಣದಲ್ಲಿ ಎರೆಹುಳು ಗೊಬ್ಬರ ಘಟಕ ನಿರ್ಮಿಸಿ ಅದರಿಂದ ಲಕ್ಷಾಂತರ ಆದಾಯ ಗಳಿಸುತ್ತಿರುವ ಯುವತಿ ರಾಜ್ಯಶಾಸ್ತ್ರದಲ್ಲಿ ಸ್ನಾತಕ ಪದವೀಧರೆಯೂ ಹೌದು. ಅಲ್ಲದೆ ಪಿ.ಎಚ್.ಡಿ. ಪದವಿಯನ್ನೂ ಮುಡಿಗೇರಿಸಿಕೊಂಡವರು.

ಉನ್ನತ ಶಿಕ್ಷಣ ಪಡೆದವರು ಉದ್ಯೋಗ ಅರಸಿ ದೂರದ ನಗರ ಸೇರಿಕೊಳ್ಳಬೇಕು ಎಂಬ ಅಘೋಷಿತ ನಿಯಮ ಮುರಿದು ಹಳ್ಳಿಯ ಮನೆಯಲ್ಲೇ ನೆಲೆ ನಿಂತ ಯುವತಿ ಸುಷ್ಮಾ. ಕಳೆದ ನಾಲ್ಕೈದು ವರ್ಷದಿಂದ ‘ಸಂಜೀವಿನಿ ಬಯೋ ಆರ್ಗಾನಿಕ್ಸ್ ಮತ್ತು ನರ್ಸರಿ’ ಎಂಬ ಎರೆಗೊಬ್ಬರ ತಯಾರಿಕಾ ಸಂಸ್ಥೆ ಸ್ಥಾಪಿಸಿ, ಮುನ್ನಡೆಸುತ್ತಿದ್ದಾರೆ. ಜತೆಗೆ ಕುಟುಂಬದ ಕೃಷಿ ಚಟುವಟಿಕೆಗೂ ಬೆನ್ನೆಲುಬಾಗಿದ್ದಾರೆ.

‘ಎರೆಗೊಬ್ಬರ ತಯಾರಿಕೆಗೆ ತೊಟ್ಟಿಯೇ ಬೇಕು ಎಂಬ ಕಲ್ಪನೆ ಇದೆ. ಆದರೆ ತೊಟ್ಟಿ ಬಳಸದೆ ಕೇವಲ ನೆಲಹಾಸಿನ ಮೇಲೆಯೂ ಗೊಬ್ಬರ ಸಿದ್ಧಪಡಿಸಿಬಹುದು ಎಂಬುದನ್ನು ತೋರಿಸಿಕೊಟ್ಟಿದ್ದೇನೆ’ ಎಂದು ಹೇಳುವಾಗ ಸುಷ್ಮಾ ಧ್ವನಿಯಲ್ಲಿ ದೃಢ ಆತ್ಮವಿಶ್ವಾಸ ಕಾಣಿಸಿತು.

‘ಮನೆಯ ಅಂಗಳದಲ್ಲಿ ನೆಲಹಾಸಿನ ಮೇಲೆ ಕಾಂಕ್ರೀಟ್ ಅಳವಡಿಸಿಕೊಂಡಿದ್ದೇವೆ. ಅಲ್ಲಿಯೇ ಅಳ್ನಾವರ, ಹಳಿಯಾಳ ಭಾಗದಿಂದ ತರಿಸಲಾದ ಹಳೆ ಸಗಣಿ ಮಿಶ್ರಣ ಹರಡಲಾಗುತ್ತದೆ. ಅಲ್ಲಿ ಆಫ್ರಿಕನ್ ನೈಟ್ ಕ್ರಾಲರ್ ಜಾತಿಯ ಎರೆಹುಳುಗಳನ್ನು ಬೆಳೆಸುತ್ತೇವೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ಸರಾಸರಿ 25–30 ಟನ್ ಗೊಬ್ಬರ ಸಿದ್ಧಪಡಿಸುತ್ತೇವೆ. ವರ್ಷಕ್ಕೆ ನೂರು ಟನ್‍ಗೂ ಹೆಚ್ಚು ಎರೆಗೊಬ್ಬರ ಉತ್ಪಾದಿಸುತ್ತೇವೆ’ ಎಂದು ವಿವರಿಸಿದರು.

‘ಎರೆಗೊಬ್ಬರದ ಜತೆಗೆ ಸತ್ಯಾಮೃತ ಎಂಬ ಮಣ್ಣಿನ ಫಲವತ್ತತೆ ಹೆಚ್ಚಿಸುವ ಪುಡಿಯನ್ನೂ ಸಿದ್ಧಪಡಿಸಲಾಗುತ್ತಿದೆ. ಗೊಬ್ಬರ, ಪುಡಿಗಳು ಜಿಲ್ಲೆಯಲ್ಲಷ್ಟೆ ಅಲ್ಲದೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲೂ ಮಾರುಕಟ್ಟೆ ಕಂಡುಕೊಂಡಿವೆ’ ಎಂದರು.

ಅಪ್ಪನಿಂದ ಪಡೆದ ಸಾಲ ತೀರಿಸಿದ್ದೆ:

‘9ನೇ ತರಗತಿಯಲ್ಲಿರುವಾಗಲೇ ಎರೆಗೊಬ್ಬರ ತಯಾರಿಕೆಯ ಆಸಕ್ತಿ ಮೂಡಿತು. ಪ್ಲಾಸ್ಟಿಕ್ ತೊಟ್ಟಿಯಲ್ಲಿ ಗೊಬ್ಬರ ತಯಾರಿಸಲು ಮುಂದಾದಾಗ ಅಪ್ಪ ವಿಘ್ನೇಶ್ವರ ಭಟ್ಟ ₹25,000 ಹಣ ನೀಡಿದ್ದರು. ಇದನ್ನು ಸಾಲ ಎಂದೇ ಭಾವಿಸಿದ್ದ ನಾನು ವರ್ಷ ಕಳೆಯುವಷ್ಟರಲ್ಲಿ ಗೊಬ್ಬರ ಮಾರಿ ಬಂದ ಹಣದಲ್ಲಿ ಅಪ್ಪನಿಂದ ಪಡೆದ ಹಣ ಮರಳಿಸಿದೆ’ ಎಂದು ಸುಷ್ಮಾ ಉದ್ಯಮದ ಯಶಸ್ಸಿನ ಮುನ್ನುಡಿ ವಿವರಿಸಿದರು.

‘ಚಿಕ್ಕಂದಿನಲ್ಲೇ ಅಪ್ಪನಿಂದ ಪಡೆದ ಸಾಲ ತೀರಿಸಿದ್ದು ಆತ್ಮವಿಶ್ವಾಸ ಮೂಡಿಸಿತು. ಈಗ ಹತ್ತಾರು ಜನರಿಗೆ ಉದ್ಯೋಗ ನೀಡಿರುವ ತೃಪ್ತಿ ಇದೆ. ಗೊಬ್ಬರ ತಯಾರಿಕಾ ಘಟಕವನ್ನು ದೊಡ್ಡಮಟ್ಟಕ್ಕೆ ವಿಸ್ತರಿಸುವ ಯೋಜನೆಯೂ ಇದೆ’ ಎಂದರು.

* ಶಿಕ್ಷಣ ಪಡೆದ ಬಳಿಕ ಉದ್ಯೋಗಿಯಾಗುವ ಬದಲು ನಾಲ್ಕಾರು ಜನರಿಗೆ ಉದ್ಯೋಗ ನೀಡಬೇಕು ಎಂಬ ಬಾಲ್ಯದ ಕನಸು ಎರೆಗೊಬ್ಬರ ಘಟಕ ಸ್ಥಾಪನೆಗೆ ಪ್ರೇರಣೆಯಾಯಿತು.

-ಸುಷ್ಮಾ ಭಟ್ ನೇವಳಸೆ, ಸಂಜೀವಿನಿ ಬಯೋ ಆರ್ಗಾನಿಕ್ಸ್ ಮತ್ತು ನರ್ಸರಿ ಮುಖ್ಯಸ್ಥೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು