ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ–ಕುಮಟಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಎರಡು ವರ್ಷಗಳಲ್ಲಿ ಪೂರ್ಣ: ಗಡ್ಕರಿ

ಶಿರಸಿ–ಕುಮಟಾ ರಾಷ್ಟ್ರೀಯ ಹೆದ್ದಾರಿಗೆ ಭೂಮಿಪೂಜೆ ನೆರವೇರಿಸಿದ ಕೇಂದ್ರ ಸಚಿವ
Last Updated 19 ಡಿಸೆಂಬರ್ 2020, 12:03 IST
ಅಕ್ಷರ ಗಾತ್ರ

ಕಾರವಾರ: ‘ಶಿರಸಿ–ಕುಮಟಾ ನಡುವಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು 2022ರ ಡಿಸೆಂಬರ್ ಒಳಗೆ ಪೂರ್ಣಗೊಳ್ಳಲಿದೆ. ಇದೇರೀತಿ, ಕರಾವಳಿ ಭಾಗದ ಸುಮಾರು 280 ಕಿಲೋಮೀಟರ್ ರಸ್ತೆಗಳನ್ನು ಪುನರ್ ನಿರ್ಮಾಣ ಮಾಡಲಾಗುವುದು’ ಎಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ತಿಳಿಸಿದರು.

ಅವರು ನೂತನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಶನಿವಾರ ವರ್ಚುವಲ್ ವೇದಿಕೆಯಲ್ಲಿ ಭೂಮಿಪೂಜೆ ನೆರವೇರಿಸಿದರು. ಇದೇ ವೇಳೆ, ಗೋವಾ ಗಡಿಯಿಂದ ಕುಂದಾಪುರವರೆಗಿನ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥವನ್ನೂ ಉದ್ಘಾಟಿಸಿ ಮಾತನಾಡಿದರು.

‘ಹೊನ್ನಾವರ, ಬೇಲೆಕೇರಿ ಬಂದರುಗಳ ಸಂಪರ್ಕಕ್ಕೆ, ಕುಮಟಾ–ಶಿರಸಿ–ಎಕ್ಕಂಬಿ–ಹಾವೇರಿ ರಸ್ತೆ, ಹಾರವಾಡದಿಂದ ಬೇಲೆಕೇರಿಗೆ ನಾಲ್ಕು ಕಿಲೋಮೀಟರ್ ರಸ್ತೆ ಹಾಗೂ ರೈಲು ಮಾರ್ಗವನ್ನು ಅಭಿವೃದ್ಧಿ ಪಡಿಸಲಾಗುವುದು’ ಎಂದು ತಿಳಿಸಿದರು.

‘ಸಿಗಂದೂರಿಗೆ ಶರಾವತಿ ಹಿನ್ನೀರಿನಲ್ಲಿ 6.18 ಕಿಲೋಮೀಟರ್ ಉದ್ದದ, ₹ 423.15 ಕೋಟಿ ವೆಚ್ಚದ ಸೇತುವೆ ನಿರ್ಮಾಣ ನಡೆಯುತ್ತಿದೆ. ಕರ್ನಾಟಕ ಸರ್ಕಾರದ ಸಹಕಾರದಿಂದ ಎಲ್ಲ ಯೋಜನೆಗಳನ್ನು ಅನುಷ್ಠಾನ ಮಾಡಲು ಸಾಧ್ಯವಾಗುತ್ತಿದೆ. ಇವುಗಳಿಂದ ರಾಜ್ಯದಲ್ಲಿ ಮೂಲ ಸೌಕರ್ಯದ ಚಿತ್ರಣ ಬದಲಾಗಲಿದೆ’‌ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ‘ಐದು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಸುಮಾರು 2,000 ಕಿಲೋಮೀಟರ್‌ಗಳಷ್ಟು ಹೊಸ ರಾಷ್ಟ್ರೀಯ ಹೆದ್ದಾರಿಗಳನ್ನು ಸೇರಿಸಲಾಗಿದೆ. 2014ರಲ್ಲಿ ದಿನವೊಂದಕ್ಕೆ 12 ಕಿಲೋಮೀಟರ್‌ಗಳಷ್ಟು ಕಾಮಗಾರಿ ನಡೆಯುತ್ತಿತ್ತು. ಈಗ 29.7 ಕಿಲೋಮೀಟರ್‌ಗಳಷ್ಟು ಆಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳಿಗೆ ಅಗತ್ಯವಿರುವಲ್ಲಿ ಬೈಪಾಸ್ ನಿರ್ಮಾಣ ಮಾಡಲು ಅಗತ್ಯವಿರುವ ಜಮೀನನ್ನು ರಾಜ್ಯ ಸರ್ಕಾರ ಒದಗಿಸಬೇಕು. ಹಾಗಿದ್ದರೆ ಇನ್ನೂ ಎರಡು–ಮೂರು ಸಾವಿರ ಕಿಲೋಮೀಟರ್‌ಗಳಷ್ಟು ರಸ್ತೆ ಅಭಿವೃದ್ಧಿ ಸಾಧ್ಯವಿದೆ’ ಎಂದು ಹೇಳಿದರು.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಸದಾನಂದ ಗೌಡ ಮಾತನಾಡಿ, ‘ಕರ್ನಾಟಕದಲ್ಲಿ ಗೋವಾ ಗಡಿಯಿಂದ ಕೇರಳದ ಗಡಿಯವರೆಗೂ ರಸ್ತೆಯನ್ನು ಅತ್ಯಂತ ವ್ಯವಸ್ಥಿತವಾಗಿ ಅಭಿವೃದ್ಧಿ ಮಾಡಲಾಗಿದೆ. ಇದರಿಂದ ಬಂದರುಗಳ ನಡುವೆ ಸಂಪರ್ಕ ಹೊಂದಲು ಬಹಳ ಸಹಕಾರಿಯಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

‘ಐತಿಹಾಸಿಕ ದಿನ’:ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯದ ಪಾಲಿಗೆ ಇದೊಂದು ಐತಿಹಾಸಿಕ ದಿನ ಎಂದು ಬಣ್ಣಿಸಿದರು.

‌‘ರಾಜ್ಯದ ಹೆದ್ದಾರಿ ಯೋಜನೆಗಳಿಗೆ ತಾಂತ್ರಿಕ ಹಾಗೂ ಹಣಕಾಸು ಸಹಕಾರ ನೀಡುತ್ತಿರುವುದಕ್ಕೆ ಧನ್ಯವಾದಗಳು. ರಾಜ್ಯದ ಅಭಿವೃದ್ಧಿಯನ್ನು ಇವು ಹೊಸ ದಿಶೆಯಲ್ಲಿ ತೆಗೆದುಕೊಂಡು ಹೋಗಲಿವೆ‌’ ಎಂದು ನಿತಿನ್ ಗಡ್ಕರಿ ಅವರನ್ನು ಶ್ಲಾಘಿಸಿದರು.

ಭೂ ಸಾರಿಗೆ ಮತ್ತು ಹೆದ್ದಾರಿ ಖಾತೆ ರಾಜ್ಯ ಸಚಿವ ಜನರಲ್ ವಿ.ಕೆ.ಸಿಂಗ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ರಾಜ್ಯಸಭೆ ಕಾಂಗ್ರೆಸ್ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿದರು.

ವರ್ಚುವಲ್ ಕಾರ್ಯಕ್ರಮದಲ್ಲಿ ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ, ಉಪ ವಿಭಾಗಾಧಿಕಾರಿ ವಿದ್ಯಾಶ್ರೀ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಜರಿದ್ದರು.

ಹೆದ್ದಾರಿ ಯೋಜನೆಗಳು: ಅಂಕಿ–ಅಂಶ
58.92 ಕಿ.ಮೀ:
ಕುಮಟಾ– ಶಿರಸಿ ರಾಷ್ಟ್ರೀಯ ಹೆದ್ದಾರಿ
₹ 440.16 ಕೋಟಿ:ವೆಚ್ಚದಲ್ಲಿ ನಡೆಯಲಿರುವ ಕಾಮಗಾರಿ

187.24 ಕಿ.ಮೀ:ಮಾಜಾಳಿಯಿಂದ ಕುಂದಾಪುರ ಚತುಷ್ಪಥ ಹೆದ್ದಾರಿ
₹ 2,639 ಕೋಟಿ:ವೆಚ್ಚದಲ್ಲಿ ನಿರ್ಮಾಣವಾದ ಹೆದ್ದಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT