ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರಿಗೆ ಅನ್ಯಾಯವಾಗದಂತೆ ಗಮನ ಹರಿಸಿ: ಅಧಿಕಾರಿಗಳಿಗೆ ಶಾಸಕಿ ರೂಪಾಲಿ ಸೂಚನೆ

Last Updated 26 ಜುಲೈ 2021, 16:03 IST
ಅಕ್ಷರ ಗಾತ್ರ

ಕಾರವಾರ: ‘ನೆರೆ ಸಂತ್ರಸ್ತರಿಗೆ ಸರ್ಕಾರದಿಂದ ನೀಡುವ ಪರಿಹಾರದಲ್ಲಿ ಯಾವುದೇ ಅನ್ಯಾಯವಾಗಬಾರದು. ಫಲಾನುಭವಿಗಳಿಗೆ ಪರಿಹಾರ ತಲುಪುವಂತೆ ನೋಡಿಕೊಳ್ಳಬೇಕು’ ಎಂದು ಶಾಸಕಿ ರೂಪಾಲಿ ಎಸ್.ನಾಯ್ಕ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕಿನ ಕದ್ರಾ, ಕದ್ರಾ ಪುನರ್ವಸತಿ ಕೇಂದ್ರ, ಮಲ್ಲಾಪುರ ಗ್ರಾಮ ಪಂಚಾಯಿತಿ ಕಚೇರಿ ಹಾಗೂ ಕೆರವಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಳಜಿ ಕೇಂದ್ರಗಳಿಗೆ ಸೋಮವಾರ ಭೇಟಿ ನೀಡಿ ಅವರು ಮಾತನಾಡಿದರು.

‘ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಮನೆ ಕಳೆದುಕೊಂಡವರಿಗೆ ಸ್ವಂತ ಜಾಗ ಇಲ್ಲದಿದ್ದರೆ, ಅಂತಹವರಿಗೆ ಸರ್ಕಾರದಿಂದ ಜಾಗ ನೀಡಲಾಗುವುದು. ₹ 5 ಲಕ್ಷದಲ್ಲಿ ವಸತಿ ಸೌಲಭ್ಯ ನೀಡಲಾಗುವುದು. ಇದಕ್ಕೆ ಒಪ್ಪುವುದಾದರೆ ಮುಂದಿನ ಪ್ರಕ್ರಿಯೆ ಮಾಡಲಾಗುವುದು’ ಎಂದು ಆಶ್ವಾಸನೆ ನೀಡಿದರು.

‘ಪುನರ್ವಸತಿಗಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎತ್ತರದ ಪ್ರದೇಶದಲ್ಲಿರುವ ಜಾಗಗಳನ್ನು ಗುರುತಿಸಿ ಮಾಹಿತಿ ನೀಡಬೇಕು. ಒಂದು ವೇಳೆ ಜನರು ಬರಲು ಇಚ್ಛಿಸಿದರೆ ಅವರ ಮಾಹಿತಿ ಪಡೆದುಕೊಳ್ಳಬೇಕು’ ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಕದ್ರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಬು ನಾಯ್ಕ, ಸದಸ್ಯರು, ಡಿ.ವೈ.ಎಸ್‌.ಪಿ ಅರವಿಂದ ಕಲಗುಜ್ಜಿ, ತಹಶೀಲ್ದಾರ್ ನಿಶ್ಚಲ್ ನರೋನಾ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿ ಆನಂದಕುಮಾರ್ ಇದ್ದರು.

ಕದ್ರಾ ಕಾಳಜಿ ಕೇಂದ್ರದಲ್ಲಿ ರೂಪಾಲಿ ಅವರು ಸಂತ್ರಸ್ತ ಮಹಿಳೆಯರಿಗೆ ಸೀರೆ, ಹೊದಿಕೆ, ಮುಖಗವಸು, ಸಾಬೂನು, ಟೂತ್‌ಪೇಸ್ಟ್‌ಗಳನ್ನು ವಿತರಿಸಿದರು.

ಕೆ.ಪಿ.ಸಿ ಅಧಿಕಾರಿಗಳಿಗೆ ಎಚ್ಚರಿಕೆ:

‘ಪ್ರವಾಹ ಸಂಭವಿಸಿದ ಕ್ಷಣದಿಂದ ಈವರೆಗೆ ಕೆ.ಪಿ.ಸಿ ಅಧಿಕಾರಿಗಳು ಯಾವುದೇ ರೀತಿಯ ಸಹಕಾರ ನೀಡಿಲ್ಲ. ಕೆ.ಪಿ.ಸಿ ವಸತಿ ಸಮುಚ್ಛಯಗಳು ಬಳಕೆಯಾಗದೇ ಖಾಲಿ ಉಳಿದಿವೆ. ಅವುಗಳಲ್ಲಿ ನಿರಾಶ್ರಿತರಿಗೆ ಉಳಿಯಲು ಅವಕಾಶ ಮಾಡಿಕೊಡಲು ಕೇಳಿದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ’ ಎಂದು ಸಂತ್ರಸ್ತರು ಅಳಲು ತೋಡಿಕೊಂಡರು.

‘ಪ್ರವಾಹ ಬಂದಾಗಲೆಲ್ಲ ಇಲ್ಲಿಯ ನಿವಾಸಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಾದರೂ ಅಧಿಕಾರಿಗಳು ಬರಬೇಕಿತ್ತು. ಇಂತಹ ವರ್ತನೆ ಮಾಡಬಾರದು. ಖಾಲಿ ಇರುವ ವಸತಿಗೃಹಗಳನ್ನು ಸಂತ್ರಸ್ತರಿಗೆ ಕೂಡಲೇ ನೀಡಬೇಕು. ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕಿ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT