ಸೋಮವಾರ, ಜುಲೈ 4, 2022
20 °C

ಭಟ್ಕಳ: ಏಕಕಾಲಕ್ಕೆ ಮೊಗೇರ, ದಲಿತರ ಪ್ರತಿಭಟನೆ: ಸ್ವಲ್ಪ ಹೊತ್ತು ಬಿಗುವಿನ ವಾತಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಟ್ಕಳ: ಪರಿಶಿಷ್ಟ ಜಾತಿ ಸೌಲಭ್ಯಕ್ಕೆ ಸಂಬಂಧಿಸಿದಂತೆ ಮೊಗೇರ ಹಾಗೂ ದಲಿತ ಸಮುದಾಯವರು ಗುರುವಾರ ಏಕಕಾಲದಲ್ಲಿ ನಡೆಸಿದ ಪ್ರತಿಭಟನೆ, ಸ್ಥಳದಲ್ಲಿ ಸ್ವಲ್ಪ ಹೊತ್ತು ಬಿಗುವಿನ ವಾತಾವರಣಕ್ಕೆ ಕಾರಣವಾಯಿತು. ಪರಿಸ್ಥಿತಿ ಕೈಮೀರದಂತೆ ನೋಡಿಕೊಳ್ಳಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಪರಿಶಿಷ್ಟ ಜಾತಿ ಸೌಲಭ್ಯಕ್ಕೆ ಆಗ್ರಹಿಸಿ ಮೊಗೇರ ಸಮುದಾಯವರು ತಾಲ್ಲೂಕು ಆಡಳಿತ ಸೌಧದ ಪಕ್ಕದಲ್ಲಿ ಒಂಬತ್ತನೇ ದಿನದ ಪ್ರತಿಭಟನೆ ನಡೆಸುತ್ತಿದ್ದರು. ಆ ಸಮಯದಲ್ಲೇ ಉತ್ತರ ಕನ್ನಡ ಜಿಲ್ಲಾ ನೈಜ ಪರಿಶಿಷ್ಟ ಜಾತಿ ಪಂಗಡಗಳ ಸಾಂವಿಧಾನಿಕ ಹಕ್ಕುಗಳ ರಕ್ಷಣಾ ಒಕ್ಕೂಟ ಮೆರವಣಿಗೆ ನಡೆಸಿತು. ಮೊಗೇರ ಸಮುದಾಯವರಿಗೆ ಎಸ್.ಸಿ ಪ್ರಮಾಣ ಪತ್ರ ನೀಡದಂತೆ ಮನವಿ ಸಲ್ಲಿಸಲು ತಾಲ್ಲೂಕು ಆಡಳಿತ ಸೌಧಕ್ಕೆ ಮುಖಂಡರು ತಲುಪಿದರು. ತಮಟೆ ಬಾರಿಸುತ್ತ ಸಿಳ್ಳೆ ಹೊಡೆಯುತ್ತ ಕುಣಿಯುತ್ತಾ ಬಂದರು.

ಇದರಿಂದ ಕುಪಿತರಾದ ಮೊಗೇರ ಸಮುದಾಯವರು, ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ‘ಒಂದು ಸಮುದಾಯ ಪ್ರತಿಭಟನೆ ನಡೆಸುತ್ತಿರುವಾಗ ಇನ್ನೊಂದು ಸಮುದಾಯಕ್ಕೆ ನಮ್ಮ ವಿರುದ್ಧ ಮನವಿ ನೀಡಲು ಏಕೆ ಅವಕಾಶ ನೀಡಿದ್ದೀರಿ? ಅವರು ಪ್ರತಿಭಟನೆ ನಿಲ್ಲಿಸಬೇಕು, ಅದಾಗದಿದ್ದರೆ ನಮಗೂ ತಾಲ್ಲೂಕು ಕಚೇರಿ ಒಳಗೆ ಪ್ರವೇಶಿಸಲು ಅವಕಾಶ ಕೊಡಬೇಕು’ ಎಂದು ಆಗ್ರಹಿಸಿದರು.

ಪೊಲೀಸರು ಸಮಾಧಾನಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಮುಂಜಾಗ್ರತಾ ಕ್ರಮವಾಗಿ, ಪ್ರತಿಭಟನೆ ನಡೆಯುತ್ತಿದ್ದ ಸ್ಥಳದ ಗೇಟ್ ಬಂದ್ ಮಾಡಿದರು. ದಲಿತರ ಮೆರವಣಿಗೆ ತಾಲ್ಲೂಕು ಕಚೇರಿ ಪ್ರವೇಶಿಸುತ್ತಿದ್ದಂತೆಯೇ ಮೊಗೇರ ಸಮುದಾಯದವರು ಗೇಟ್ ಒಳಗೆ ಪ್ರವೇಶಿಸಲು ಯತ್ನಿಸಿದರು. ಆದರೆ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ.

‘ಮೀಸಲಾತಿಯ ಹಗಲು ದರೋಡೆ’: ಉತ್ತರ ಕನ್ನಡ ಜಿಲ್ಲಾ ನೈಜ ಪರಿಶಿಷ್ಟ ಜಾತಿ ಪಂಗಡಗಳ ಸಾಂವಿಧಾನಿಕ ಹಕ್ಕುಗಳ ರಕ್ಷಣಾ ಒಕ್ಕೂಟದಿಂದ ಉಪವಿಭಾಗಾಧಿಕಾರಿ ಮಮತಾ ದೇವಿ ಅವರಿಗೆ ಮನವಿ ನೀಡಲಾಯಿತು.

ಮುಖಂಡ ತುಳಿಸಿದಾಸ ಪಾವಸ್ಕರ್ ಮಾತನಾಡಿ, ‘1976ರ ಪ್ರಾದೇಶಿಕ ನಿರ್ಬಂಧ ತೆಗೆದ ನಂತರ ಪರಿಶಿಷ್ಟ ಜಾತಿ ಪಟ್ಟಿಗೆ ಹೊಸ ಜಾತಿಯ ಸೇರ್ಪಡೆಯಾಗಿಲ್ಲ. ಇದರ ದುರ್ಲಾಭ ಪಡೆದ ಕೆಲವು ಸಮಾನ ಜಾತಿ ಸೂಚಕ ಹೆಸರಿನ ಸಮುದಾಯದವರು, ರಾಜಕೀಯ ಮತ್ತು ಹಣಬಲದಿಂದ ಸಕ್ಷಮ ಪ್ರಾಧಿಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ’ ಎಂದು ದೂರಿದರು.

‘ನಕಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು, ಸಂವಿಧಾನದ ಪರಿಚ್ಛೇದ 341ರ ಅಡಿಯಲ್ಲಿ ನೈಜ ಪರಿಶಿಷ್ಟರಿಗೆ ಸಿಗಬೇಕಾದ ಮೀಸಲಾತಿಯ ಹಗಲು ದರೋಡೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ರಾಜ್ಯ ಹೈಕೋರ್ಟ್ ಪರಿಶಿಷ್ಟ ಜಾತಿ ಕ್ರಮ ಸಂಖ್ಯೆ 78ರಲ್ಲಿ ಬರುವ ಮೊಗೇರರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಆದೇಶಿಸಿದೆ. ಆದರೆ, ಭಟ್ಕಳ ಮೊಗೇರರು ಬೆಸ್ತರಾಗಿದ್ದು ಆ ವರ್ಗದಲ್ಲಿ ಬರುವುದಿಲ್ಲ. ಒಂದೊಮ್ಮೆ ನ್ಯಾಯಾಂಗ ನಿಂದನೆ ಮಾಡಿ ಅಧಿಕಾರಿಗಳು ಪ್ರಮಾಣ ಪತ್ರ ನೀಡದೇ ಇದ್ದರೆ  ನ್ಯಾಯಾಲಯದಲ್ಲಿ ಏಕೆ ದಾವೆ ಹೂಡುತ್ತಿಲ್ಲ’ ಎಂದು ಪ್ರಶ್ನಿಸಿದರು.

ಮುಖಂಡರಾದ ನಾರಾಯಣ ಶಿರೂರು, ಕಿರಣ ಶಿರೂರು, ರವೀಂದ್ರ ಮಂಗಳಾ, ಮಾರುತಿ ಪಾವಸ್ಕರ್, ಉಮೇಶ ಹಳ್ಳೇರ ಇದ್ದರು.

ಭಟ್ಕಳ ಡಿ.ವೈ.ಎಸ್ಪಿ ಬೆಳ್ಳಿಯಪ್ಪ, ಸಿ.ಪಿ.ಐ ದಿವಾಕರ, ಪಿ.ಎಸ್.ಐ.ಗಳಾದ ಸುಮಾ, ಹನುಮಂತಪ್ಪ ಕುಡುಗುಂಟಿ ಸ್ಥಳದಲ್ಲಿದ್ದು ಬಂದೊಬಸ್ತ್ ನೋಡಿಕೊಂಡರು. ತಹಶೀಲ್ದಾರ್ ಬಿ.ಸುಮಂತ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು