ಮಂಗಳವಾರ, ಮೇ 17, 2022
25 °C
ಎಸ್.ಸಿ ಪ್ರಮಾಣಪತ್ರಕ್ಕೆ ಆಗ್ರಹಿಸಿ ನಡೆಯುತ್ತಿರುವ ಧರಣಿ 18ನೇ ದಿನಕ್ಕೆ

ಮೊಗೇರರ ಪ್ರತಿಭಟನೆ: ಆತ್ಮಹತ್ಯೆಗೆ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಟ್ಕಳ: ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡವಂತೆ ಆಗ್ರಹಿಸಿ ಮೊಗೇರ ಸಮುದಾಯದವರು ಪಟ್ಟಣದಲ್ಲಿ ಶನಿವಾರ ಅರೆಬೆತ್ತಲೆ ಮೆರವಣಿಗೆ ನಡೆಸುತ್ತಿದ್ದ ವೇಳೆ ಮುಂಡಳ್ಳಿ ನಿವಾಸಿ ಸೀತಾರಾಮ ಮೊಗೇರ ಎಂಬುವವರು ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೂ ಯತ್ನಿಸಿದರು.‌

ಸಮುದಾಯದ ಸದಸ್ಯರು ನಡೆಸುತ್ತಿರುವ ಪ್ರತಿಭಟನೆಯು ಶನಿವಾರ 18ನೇ ದಿನಕ್ಕೆ ಕಾಲಿಟ್ಟಿತು. ಅದರೂ ಸರ್ಕಾರ ಪ್ರತಿಭಟನೆಗೆ ಮಣಿದಿಲ್ಲ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಪಟ್ಟಣದ ಆನಂದ ಆಶ್ರಮ ಕಾನ್ವೆಂಟ್‌ನಿಂದ ತಾಲ್ಲೂಕು ಆಡಳಿತ ಸೌಧದ ತನಕ ಅರೆಬೆತ್ತಲೆ ಮೆರವಣಿಗೆ ಮಾಡಿದರು. ತಾಲ್ಲೂಕು ಆಡಳಿತ ಸೌಧದ ಆವರಣದಲ್ಲಿ ಕೆಲವರು ನೆಲದ ಮೇಲೆ ಉರುಳಾಡಿ ಆಕ್ರೋಶ ಹೊರಹಾಕಿದರು.

ಸಮುದಾಯದ ಅಧ್ಯಕ್ಷ ಅಣ್ಣಪ್ಪ ಮೊಗೇರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ, ಸೀತಾರಾಮ ಮೊಗೇರ ತಮ್ಮ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಕಡ್ಡಿ ಗೀರಿ ಆತ್ಮಹತ್ಯೆಗೆ ಯತ್ನಿಸಿದರು. ಅದನ್ನು ಗಮನಿಸಿದ ಅವರ ಹಿಂಬದಿಯಲ್ಲಿದ್ದವರು ತಡೆದರೂ ಪುನಃ ಅದೇ ಪ್ರಯತ್ನಕ್ಕೆ ಮುಂದಾದರು. ಇದರಿಂದ ಸ್ವಲ್ಪ ಹೊತ್ತು ಆತಂಕದ ಸನ್ನಿವೇಶ ಸ್ಥಳದಲ್ಲಿ ಉಂಟಾಯಿತು. ನಂತರ ಅವರನ್ನು ಕರೆದುಕೊಂಡು ಹೋಗಿ ಮೈಮೇಲೆ ನೀರು ಸುರಿದು, ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.

‘ನಮ್ಮ ಹಕ್ಕಿಗಾಗಿ ನಡೆಸುತ್ತಿರುವ ಪ್ರತಿಭಟನೆಯನ್ನು ಸರ್ಕಾರ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಸರ್ಕಾರದ ಮೇಲೆ ಭರವಸೆ ಇರಿಸಿ ಇಲ್ಲಿಯ ತನಕ ಶಾಂತ ರೀತಿಯಿಂದ ವರ್ತಿಸಿದೆವು. ಆದರೆ ಇನ್ನು ಮುಂದೆ ಹಾಗಾಗುವುದಿಲ್ಲ. ನಮ್ಮ ಹಕ್ಕಿಗಾಗಿ ನಾವು ಎಂತಹ ಹೋರಾಟಕ್ಕೂ ಸಿದ್ಧರಿದ್ದೇವೆ. ಸಣ್ಣ ಸಣ್ಣ ಮಕ್ಕಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿರುವುದೇ ಇದ್ದಕ್ಕೆ ಸಾಕ್ಷಿ. ನಮಗೊಂದು ಪರಿಹಾರ ಸೂಚಿಸಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ಪ್ರತಿಭಟನೆ ಯಾವ ಹಂತಕ್ಕೆ ಹೋಗುತ್ತದೆ ಎನ್ನುವುದು ಊಹಿಸಲು ಅಸಾಧ್ಯ’ ಎಂದು ಅಣ್ಣಪ್ಪ ಮೊಗೇರ ಎಚ್ಚರಿಕೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.