ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ ಚುನಾವಣೆ: ಎರಡನೇ ಹಂತದಲ್ಲೂ ಭಾರಿ ಪೈಪೋಟಿ

ನಾಮಪತ್ರಗಳ ಅಂಕಿ ಸಂಖ್ಯೆಯ ಸ್ಪಷ್ಟ ಚಿತ್ರಣ ಇಂದು ಸಿಗುವ ಸಾಧ್ಯತೆ
Last Updated 16 ಡಿಸೆಂಬರ್ 2020, 15:38 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯ 126 ಗ್ರಾಮ ಪಂಚಾಯಿತಿಗಳಿಗೆ ಡಿ.27ರಂದು ನಡೆಯಲಿರುವ ಎರಡನೇ ಹಂತದ ಚುನಾವಣೆಗೆ ಭಾರಿ ಸಂಖ್ಯೆಯಲ್ಲಿ ನಾಮಪತ್ರಗಳು ಸಲ್ಲಿಕೆಯಾಗಿವೆ. ಮಂಗಳವಾರ ಒಂದೇ ದಿನ 1,533 ಉಮೇದುವಾರಿಕೆಗಳು ಬಂದಿವೆ. ಈ ಮೂಲಕ ಎರಡೂ ಹಂತಗಳ ಚುನಾವಣೆಗಳಲ್ಲಿ ಭಾರಿ ಪೈಪೋಟಿ ಇರುವ ಲಕ್ಷಣಗಳಿವೆ.

ಎರಡನೇ ಹಂತದಲ್ಲಿ ಶಿರಸಿ, ಸಿದ್ದಾಪುರ, ಮುಂಡಗೋಡ, ಹಳಿಯಾಳ, ದಾಂಡೇಲಿ, ಜೊಯಿಡಾ ಮತ್ತು ಯಲ್ಲಾಪುರ ತಾಲ್ಲೂಕುಗಳಲ್ಲಿ ಚುನಾವಣೆ ನಡೆಯಲಿದೆ. ಇಲ್ಲಿ ಒಟ್ಟು 1,282 ಕ್ಷೇತ್ರಗಳಿವೆ. ಈ ಪೈಕಿ 271 ಕ್ಷೇತ್ರಗಳಿಗೆ ಮಂಗಳವಾರ ಮಧ್ಯಾಹ್ನ 3ರವರೆಗೆ ಒಂದೂ ಉಮೇದುವಾರಿಕೆ ಇರಲಿಲ್ಲ.

ಶಿರಸಿ ತಾಲ್ಲೂಕಿನಲ್ಲಿ ಅತಿಹೆಚ್ಚು, 371, ಜೊಯಿಡಾದಲ್ಲಿ 254, ಸಿದ್ದಾಪುರದಲ್ಲಿ 252, ಮುಂಡಗೋಡದಲ್ಲಿ 217, ಯಲ್ಲಾಪುರದಲ್ಲಿ 207, ಹಳಿಯಾಳದಲ್ಲಿ 191 ಹಾಗೂ ದಾಂಡೇಲಿಯಲ್ಲಿ 41 ಉಮೇದುವಾರಿಕೆಗಳು ಸಲ್ಲಿಕೆಯಾದವು.

ಚುನಾವಣೆಯಲ್ಲಿ ಸ್ಪರ್ಧಿಸಲು ಹೆಚ್ಚಿನ ನಾಮಪತ್ರಗಳು ಸಲ್ಲಿಕೆಯಾಗಿರುವ ಕಾರಣ ಅವುಗಳನ್ನು ಅಪ್‌ಲೋಡ್ ಮಾಡಲು ಚುನಾವಣಾ ಕರ್ತವ್ಯದ ಸಿಬ್ಬಂದಿಗೆ ಹೆಚ್ಚಿನ ಸಮಯ ಹಿಡಿಯುತ್ತಿದೆ. ಹಾಗಾಗಿ, ನಾಮಪತ್ರ ಸಲ್ಲಿಕೆಗೆ ಬುಧವಾರ ಕೊನೆಯ ದಿನವಾದರೂ ಅಂತಿಮ ಮಾಹಿತಿಯು ಗುರುವಾರ ಲಭಿಸುವ ಸಾಧ್ಯತೆಯಿದೆ.

ಜಿಲ್ಲೆಯ ಕರಾವಳಿಯಲ್ಲಿ ನಡೆಯುವ ಮೊದಲ ಹಂತದ ಚುನಾವಣೆಯಲ್ಲೂ ಹಿಂದೆಂದಿಗಿಂತಲೂ ಅಧಿಕ ಸಂಖ್ಯೆಯ ನಾಮಪತ್ರಗಳು ಸಲ್ಲಿಕೆಯಾಗಿವೆ. ಎರಡನೇ ಹಂತದ ಚುನಾವಣೆಯಲ್ಲೂ ಇದೇ ರೀತಿಯಾಗುತ್ತಿದೆ.

ಈ ನಡುವೆ, ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಬೆಂಬಲಿತರನ್ನು ಭೇಟಿ ಮಾಡುತ್ತಿದ್ದಾರೆ. ಕಾರವಾರ ತಾಲ್ಲೂಕಿನಲ್ಲಿ ಶಾಸಕಿ ರೂಪಾಲಿ ನಾಯ್ಕ ಹಾಗೂ ಇತರ ಮುಖಂಡರು ಸಭೆಗಳನ್ನು ಹಮ್ಮಿಕೊಂಡು ಸಂಘಟನೆ ಮಾಡುವುದರಲ್ಲಿ ನಿರತರಾಗಿದ್ದಾರೆ. ದಿನವೂ ಗ್ರಾಮಗಳಲ್ಲಿ ಸಂಚರಿಸಿ ಮತದಾನದಲ್ಲಿ ಭಾಗವಹಿಸುವಂತೆ ಗ್ರಾಮಸ್ಥರಿಗೆ ತಿಳಿಸುತ್ತಿದ್ದಾರೆ.

ಗ್ರಾಮ ಪಂಚಾಯಿತಿ ಚುನಾವಣೆಯು ಕಾಂಗ್ರೆಸ್‌ನಲ್ಲಿ ಕೂಡ ಲವಲವಿಕೆ ತಂದಿದೆ. ಸತೀಶ ಸೈಲ್ ನೇತೃತ‌್ವದಲ್ಲಿ ಸಭೆಗಳನ್ನು ಆಯೋಜಿಸಲಾಗುತ್ತಿದೆ. ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಗ್ರಾಮಸ್ಥರ ಮನವೊಲಿಕೆಗೆ ಯತ್ನಿಸುತ್ತಿದ್ದಾರೆ. ಆದರೆ, ಜೆ.ಡಿ.ಎಸ್ ಮುಖಂಡರು ಮಾತ್ರ ಕೇವಲ ಸುದ್ದಿಗೋಷ್ಠಿಗಳನ್ನು ನಡೆಸಿ ಸುಮ್ಮನಾಗುತ್ತಿದ್ದಾರೆ. ಬೆಂಬಲಿತ ಅಭ್ಯರ್ಥಿಗಳ ಬಗ್ಗೆ ಹಾಗೂ ಸಂಘಟನೆಯಲ್ಲಿ ತೊಡಗಿಕೊಳ್ಳುವಂಥ ಕಾರ್ಯಗಳಲ್ಲಿ ಕಾಣಿಸುತ್ತಿಲ್ಲ.

ಪ್ರಚಾರ ಬಹಳ ಕಷ್ಟ:

ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಪ್ರಚಾರ ಮಾಡುವುದು ಬಹಳ ಸವಾಲಿನ ಕೆಲಸವಾಗಿದೆ. ಕೆಲವೆಡೆಗಳಲ್ಲಿ ಒಂದು ಕಿಲೋಮೀಟರ್‌ಗೆ ಒಂದರಂತೆ ಮನೆಗಳಿವೆ. ಅಲ್ಲಿಗೆ ಹೋಗುವ ದಾರಿಯೂ ಬಹಳ ಕಷ್ಟದಾಯಕವಾಗಿರುತ್ತದೆ. ಆದರೂ, ಆ ಮನೆಗಳ ನಿವಾಸಿಗಳನ್ನು ಭೇಟಿ ಮಾಡಿ ಮತಯಾಚನೆ ಮಾಡುವ ಕಾರ್ಯಗಳನ್ನು ಆಯಾ ಗ್ರಾಮಗಳ ಸ್ಪರ್ಧಿಗಳು ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT