ಶುಕ್ರವಾರ, ಮೇ 29, 2020
27 °C
ಕ್ವಾರಂಟೈನ್‌ನಲ್ಲಿ ತಾಯಿ

ಮುಂಡಗೋಡ | ಅಮ್ಮನೇ ಬೇಕು: ಕಣ್ಣು ಮಂಜಾಗಿಸಿದ ಕೊರೊನಾ ಸೋಂಕಿತ ಬಾಲಕನ ಅಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡಗೋಡ: ಅಲ್ಲಿ ಹೆತ್ತ ಕರುಳಿನ ಕೂಗು ಕರೆಯುತ್ತಿತ್ತು. ತನಗೆ ಅಮ್ಮನೇ ಬೇಕು, ಅವಳನ್ನು ಬಿಟ್ಟು ಹೋಗಲಾರೆ ಎಂದು ಬಾಲಕ ಗೋಗರೆಯುತ್ತಿದ್ದ. ಎಷ್ಟೇ ಪ್ರಯತ್ನಿಸಿದರೂ ಮಗು ಹೆತ್ತವರನ್ನು ಬಿಟ್ಟು ಹೋಗಲು ಒಪ್ಪುತ್ತಿರಲಿಲ್ಲ. ಎರಡು ಗಂಟೆಗಳ ನಂತರ ಹೆತ್ತವರೇ ಬಾಲಕನನ್ನು ಸಮಾಧಾನ ಪಡಿಸುವಲ್ಲಿ ಯಶಸ್ವಿಯಾದರು.  

ಕೋವಿಡ್ 19ನಿಂದ ಮುಕ್ತನಾಗಿ ಬರಲು, ಅಳುತ್ತಲೇ ಎಂಟರ ಬಾಲಕ ಆಂಬುಲೆನ್ಸ್ ಹತ್ತಿದ. ಅಲ್ಲಿ ಸೇರಿದ್ದ ಅಧಿಕಾರಿಗಳ ಕಣ್ಣಂಚಿನಲ್ಲಿ ಹನಿ ಜಿನುಗಿತು.

ಬಾಲಕನನ್ನು ಇಲ್ಲಿನ ತಾಲ್ಲೂಕು ಆಸ್ಪತ್ರೆಯಿಂದ ಕಾರವಾರದ ಜಿಲ್ಲಾ ಆಸ್ಪತ್ರೆಗೆ ಕಳಿಸಬೇಕಾಗಿತ್ತು. ಬಾಲಕ ಮಾತ್ರ ತಾನು ತಾಯಿಯನ್ನು ಬಿಟ್ಟು ಹೋಗಲಾರೆ ಎಂದು ಅಳುತ್ತಿರುವ ದೃಶ್ಯ ನೆರೆದವರ ಮನಕಲಕುವಂತಿತ್ತು.

ಬಾಲಕನ ತಾಯಿ, ತಂದೆ, ಅಕ್ಕ ಎಲ್ಲರೂ ಇಲ್ಲಿಯೇ ಕ್ವಾರಂಟೈನ್‌ನಲ್ಲಿದ್ದಾರೆ. ಆದರೆ, ಏನೂ ಅರಿಯದ ಬಾಲಕ ಮಾತ್ರ ಸೋಂಕಿತನಾಗಿ, ಕುಟುಂಬದವರನ್ನು ಬಿಟ್ಟು ಕಾರವಾರಕ್ಕೆ ಹೋಗಬೇಕಾಗಿತ್ತು. ಬಾಲಕನ ಮನವೊಲಿಸಲು ಮುಂದಾದ ಎಲ್ಲರದ್ದು ಕಣ್ಣೀರಿನ ಮಾತುಗಳೇ ಆಗುತ್ತಿದ್ದವು.

ವಸತಿನಿಲಯದಲ್ಲಿ ಕ್ವಾರಂಟೈನ್ ಆಗಿದ್ದ ಕುಟುಂಬ ಸದಸ್ಯರು ಬಾಲಕನನ್ನು ಮನವೊಲಿಸಲು ಮುಂದಾದರು. ಒಂದು ಕಡೆ ತಾಯಿಗೆ ಕ್ವಾರಂಟೈನ್‌ನಲ್ಲಿ ಇರಬೇಕಾದ ಅನಿವಾರ್ಯತೆ. ಮತ್ತೊಂದೆಡೆ ಮಗನನ್ನು ಒಬ್ಬಂಟಿಯಾಗಿ ಆಸ್ಪತ್ರೆಗೆ ಕಳಿಸಬೇಕಾದ ಸಂದರ್ಭ. ಇಂತಹ ಸನ್ನಿವೇಶವನ್ನು ನೋಡಿ ಹಲವರು ಮರುಗಿದರು. 

ಕೊನೆಯಲ್ಲಿ ಎರಡು ಗಂಟೆಗಳ ಕಾಲ ಕುಟುಂಬ ಸದಸ್ಯರು, ವೈದ್ಯರು, ಆರೋಗ್ಯ ಸಿಬ್ಬಂದಿ ಎಲ್ಲರೂ ಮಗುವಿಗೆ ಸಮಾಧಾನ ಮಾಡುತ್ತ ಕಾರವಾರಕ್ಕೆ ಭಾರವಾದ ಹೃದಯದಿಂದ ಕಳಿಸಿಕೊಟ್ಟರು. ಇತ್ತ ದುಃಖ ತಡೆಯಲಾಗದೇ ಅಳುತ್ತಿದ್ದ ಕುಟುಂಬದವರಿಗೂ ಅಧಿಕಾರಿಗಳು ಧೈರ್ಯ ತುಂಬಿದರು. ತಾಲ್ಲೂಕಿನ ಮೊದಲ ಕೋವಿಡ್ 19 ಪ್ರಕರಣ ಹಲವರನ್ನು ಮೂಕವಿಸ್ಮಿತರನ್ನಾಗಿ ಮಾಡಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು