ಶನಿವಾರ, ಸೆಪ್ಟೆಂಬರ್ 18, 2021
24 °C
‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ

ಕಾರವಾರ: ಅಂಜುದೀವ್‌ ದ್ವೀಪದಲ್ಲಿ ಬಾನೆತ್ತರ ಹಾರಿದ ತಿರಂಗಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ದೇಶದ 75ನೇ ಸ್ವಾತಂತ್ರ್ಯ ಮಹೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆಗಳು ನಡೆದಿದ್ದು, ವಿವಿಧ ಕಾರ್ಯಕ್ರಮಗಳ ಸರಣಿ ಆರಂಭವಾಗಿದೆ. ಇದರ ಭಾಗವಾಗಿ, ಇಲ್ಲಿನ ಸೀಬರ್ಡ್ ನೌಕಾನೆಲೆಯ ವ್ಯಾಪ್ತಿಯಲ್ಲಿರುವ ಅಂಜುದೀವ್ ದ್ವೀಪದಲ್ಲಿ ಶುಕ್ರವಾರ ನೌಕಾದಳದಿಂದ ರಾಷ್ಟ್ರಧ್ವಜಾರೋಹಣ ನೆರವೇರಿಸಲಾಯಿತು.

ಆ.13ರಿಂದ 15ರವರೆಗೆ ದೇಶದ 75 ದ್ವೀಪಗಳಲ್ಲಿ ನೌಕಾದಳದಿಂದ ಧ್ವಜಾರೋಹಣ ನಡೆಯಲಿದೆ. ಅದರ ಮೊದಲ ಕಾರ್ಯಕ್ರಮವನ್ನು ಅಂಜುದೀವ್   ಹಮ್ಮಿಕೊಳ್ಳಲಾಯಿತು.

‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ವಿವಿಧ ಕಾರ್ಯಕ್ರಮಗಳಿಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ದೆಹಲಿಯಲ್ಲಿ ಶುಕ್ರವಾರ ಚಾಲನೆ ನೀಡಿದರು. ಬಳಿಕ ಅಂಜುದೀವ್ ದ್ವೀಪದಲ್ಲೂ ನೌಕಾದಳದ ಅಧಿಕಾರಿಗಳು, ಸಿಬ್ಬಂದಿ, ಮಾಜಿ ಸೈನಿಕರು, ಶಾಲಾ ಮಕ್ಕಳ ಉಪಸ್ಥಿತಿಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ನೌಕಾದಳದ ಬ್ಯಾಂಡ್‌ ಸಿಬ್ಬಂದಿ ರಾಷ್ಟ್ರಗೀತೆ ನುಡಿಸಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕರ್ನಾಟಕ ನೌಕಾ ವಲಯದ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ರಿಯರ್ ಅಡ್ಮಿರಲ್ ಮಹೇಶ ಸಿಂಗ್, ‘ದೇಶದ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದ ಭಾಗವಾಗಿ ವಿವಿಧ ಕಾರ್ಯಕ್ರಮಗಳಿಗೆ ಈ ಮೂಲಕ ಚಾಲನೆ ನೀಡಲಾಗಿದೆ. ಅಂಜುದೀವ್ ದ್ವೀಪವನ್ನು ಪೋರ್ಚುಗೀಸ್ ಆಡಳಿತದಿಂದ ನಮ್ಮ ಸೈನಿಕರು ವಶಪಡಿಸಿಕೊಂಡರು. ಆ ಮೂಲಕ ದೇಶದಲ್ಲಿ ವಿದೇಶಿ ಆಡಳಿತವು ಸಂಪೂರ್ಣವಾಗಿ ಕೊನೆಯಾಯಿತು. ಹಾಗಾಗಿ ಈ ಭೂ ಭಾಗವು ಅತ್ಯಂತ ಹೆಚ್ಚಿನ ಮಹತ್ವ ಹೊಂದಿದೆ’ ಎಂದು ಹೇಳಿದರು.

ಅಂಜುದೀವ್ ದ್ವೀಪದ ಮಹತ್ವ:

ಭಾರತದ ಇತಿಹಾಸದಲ್ಲಿ ಅಂಜುದೀವ್ ದ್ವೀಪವು ಕುತೂಹಲಕಾರಿ ಹಿನ್ನೆಲೆ ಹೊಂದಿದೆ. ಪೋರ್ಚುಗಲ್ ದೇಶದ ನಾವಿಕ ವಾಸ್ಕೊ ಡ ಗಾಮನು ಈ ದ್ವೀಪಕ್ಕೆ 1408ರಲ್ಲಿ ಭೇಟಿ ನೀಡಿದ್ದ. ಬಳಿಕ, 1502ರಲ್ಲಿ ಕಲ್ಲಿಕೋಟೆಯಿಂದ ಪೋರ್ಚುಗಲ್ ದೇಶಕ್ಕೆ ಸಮುದ್ರ ಮಾರ್ಗವಾಗಿ ಪ್ರಯಾಣಿಸುತ್ತಿದ್ದಾಗ ನೌಕೆಯ ದುರಸ್ತಿ ಮತ್ತು ನೀರು ಸಂಗ್ರಹಿಸಿಕೊಳ್ಳಲೆಂದು ಎರಡನೇ ಬಾರಿಗೆ ಬಂದಿದ್ದ.

1505ರಲ್ಲಿ ಡಾಮ್ ಫ್ರಾನ್ಸಿಸ್ಕೊ ಡಿ ಅಲ್ಮೇಡಾ ಎಂಬಾತ ಇಲ್ಲೊಂದು ಚರ್ಚ್ ನಿರ್ಮಿಸಿದ. 1510ರಲ್ಲಿ ಈ ದ್ವೀಪವು ಪೋರ್ಚುಗೀಸ್ ಆಡಳಿತದ ಭದ್ರ ಬುನಾದಿಯಾಯಿತು. ವೈಸರಾಯ್ ಆಲ್ಫನ್ಸೊ ಡಿ ಆಲ್ಬುಕರ್ಕ್ ನೇತೃತ್ವದಲ್ಲಿ ಗೋವಾವನ್ನು ಮೊದಲ ಬಾರಿಗೆ ವಶ ಪಡಿಸಿಕೊಳ್ಳಲು ಮುಂದಾದಾಗ ಹಿಮ್ಮೆಟ್ಟಲಾಯಿತು. ಆಗ ಆತ ಈ ದ್ವೀಪದಲ್ಲಿ ಆಶ್ರಯ ಪಡೆದಿದ್ದ. ಬಳಿಕ ಗೋವಾವನ್ನು ವಶ ಪಡಿಸಿಕೊಂಡ ಪೋರ್ಚುಗೀಸರು, 1961ರವರೆಗೂ ತಮ್ಮ ವಶದಲ್ಲಿ ಇಟ್ಟುಕೊಂಡಿದ್ದರು.

1961ರ ನ.27ರಂದು ಅಂದಿನ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಪೋರ್ಚುಗೀಸರು ತಮ್ಮದೇ  ನೌಕೆಗಳತ್ತ ಅಂಜುದೀವ್ ದ್ವೀಪದಿಂದ ಗುಂಡಿನ ದಾಳಿ ಮಾಡುತ್ತಿರುವ ಬಗ್ಗೆ ಸಂಸತ್ತಿನಲ್ಲಿ ಮಾಹಿತಿ ನೀಡಿದ್ದರು. ಬಳಿಕ ಈ ಭೂಪ್ರದೇಶವನ್ನು ವಿದೇಶಿಗರ ಹಿಡಿತದಿಂದ ವಾಪಸ್ ಪಡೆಯಲು 1961 ಡಿ.10ರಂದು ‘ಐ.ಎನ್.ಎಸ್ ತ್ರಿಶೂಲ್’ ಹಾಗೂ ‘ಐ.ಎನ್.ಎಸ್ ಮಗರ್’‌ ನೌಕೆಗಳ ಮೂಲಕ ಭಾರತೀಯ ನೌಕಾದಳ ಕಾರ್ಯಾಚರಣೆ ಆರಂಭಿಸಿತು.

ಆಗ ನಡೆದ ಯುದ್ಧದಲ್ಲಿ ಭಾರತದ ಏಳು ಯೋಧರು ಹುತಾತ್ಮರಾಗಿ, 19 ಯೋಧರು ಗಾಯಗೊಂಡರು. ಭಾರತೀಯ ಯೋಧರ ಶೌರ್ಯದ ಮುಂದೆ ಪೋರ್ಚುಗೀಸರು ಸೋಲೊಪ್ಪಿಕೊಂಡು, ಅಂಜುದೀವ್ ದ್ವೀಪವನ್ನು ಹಸ್ತಾಂತರಿಸಿದರು. ಅಂದು ತ್ಯಾಗ, ಬಲಿದಾನ ಮಾಡಿದ ಸೈನಿಕರ ನೆನಪಿನಲ್ಲಿ ಇಲ್ಲಿ ಸ್ಥಾಪಿಸಲಾಗಿರುವ ಸ್ಮಾರಕದಲ್ಲಿ ಈ ಬಗ್ಗೆ ಉಲ್ಲೇಖವಿದೆ. ಈಗ ನೌಕಾನೆಲೆಯ ವ್ಯಾಪ್ತಿಯಲ್ಲಿದ್ದು, ಅತ್ಯಂತ ಆಯಕಟ್ಟಿನ ಪ್ರದೇಶವಾಗಿ ಗುರುತಿಸಿಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು