ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ | ನೆಟ್‌ವರ್ಕ್ ತೊಡಕು: ಕೆಲಸ ಮೊಟಕು

ಕೈಕೊಡುವ ವಿದ್ಯುತ್ : ಮನೆಗೆಲಸ ಉದ್ಯೋಗಿಗಳು, ವಿದ್ಯಾರ್ಥಿಗಳಿಗೆ ಸಮಸ್ಯೆ
Last Updated 7 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಶಿರಸಿ: ಕಳೆದ ಮೂರ್ನಾಲ್ಕು ದಿನಗಳಿಂದ ಮಲೆನಾಡಿನಲ್ಲಿ ಆರ್ಭಟಿಸಿದ ಮಳೆ–ಗಾಳಿಗೆ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಕಣ್ಣುಮುಚ್ಚಾಲೆ ಆಟ ನಡೆಯುತ್ತಿದೆ. ಇದರಿಂದಾಗಿ ಮಕ್ಕಳು ಆನ್‌ಲೈನ್‌ ಪಾಠ ಕೇಳಲಾಗದೇ ಚಡಪಡಿಸುತ್ತಿದ್ದರೆ, ವರ್ಕ್ ಫ್ರಾಮ್‌ ಹೋಂ ಉದ್ಯೋಗಿಗಳು ಆತಂಕಕ್ಕೆ ಒಳಗಾಗಿದ್ದಾರೆ.

ಅರಣ್ಯ ಪ್ರದೇಶ ಸುತ್ತುವರಿದಿರುವ ಮಲೆನಾಡಿನ ಹಳ್ಳಿಗಳಿಗೆ ಕಾಡಿನ ಜಾಡನ್ನು ದಾಟಿಯೇ ವಿದ್ಯುತ್ ಮಾರ್ಗಗಳು ಹೋಗುತ್ತವೆ. ಇತ್ತೀಚೆಗೆ ಸುರಿದ ಧಾರಕಾರ ಮಳೆ ಹಾಗೂ ರಭಸದ ಗಾಳಿಗೆ ವಿದ್ಯುತ್ ಮಾರ್ಗಗಳ ಮೇಲೆ ಮರಗಳು, ಬಿದಿರು ಹಿಂಡು ಬಿದ್ದಿವೆ. ವಿದ್ಯುತ್ ಕಂಬಗಳು ನೆಲಕ್ಕುರುಳಿವೆ, ಅನೇಕ ಕಡೆಗಳಲ್ಲಿ ವಿದ್ಯುತ್ ಪರಿವರ್ತಕಗಳು ಹಾಳಾಗಿವೆ. ವಿದ್ಯುತ್ ಸ್ಥಗಿತಗೊಂಡ ಕಾರಣ ಮೊಬೈಲ್ ಟವರ್‌ಗಳು ಸ್ತಬ್ಧವಾಗಿವೆ.

ಲಾಕ್‌ಡೌನ್ ವೇಳೆ ಊರಿಗೆ ಬಂದಿದ್ದ ಅರ್ಧದಷ್ಟು ಉದ್ಯೋಗಿಗಳು ನಗರಗಳಿಗೆ ವಾಪಸಾಗಿದ್ದಾರೆ. ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲ್ಲೂಕುಗಳಿಂದ ಸುಮಾರು 300ಕ್ಕೂ ಹೆಚ್ಚು ಜನರು ಈಗಲೂ ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ 800ಕ್ಕೂ ಹೆಚ್ಚು ಉದ್ಯೋಗಿಗಳು ಇದೇ ಮಾದರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲರಿಗೂ ವಿದ್ಯುತ್ ಹಾಗೂ ನೆಟ್‌ವರ್ಕ್ ಉದ್ಯೋಗಿಗಳ ಸಮಸ್ಯೆಯನ್ನು ಇಮ್ಮಡಿಸಿದೆ ಎನ್ನುತ್ತಾರೆ ಎಂಜಿನಿಯರ್ ಚಿನ್ಮಯ ಹೆಗಡೆ.

‘ನಮ್ಮ ಊರಿನಲ್ಲಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಮಾತ್ರ ಇದೆ. ಸಾಮಾನ್ಯ ದಿನಗಳಲ್ಲಿ 2ಜಿ ಮಾತ್ರ ಸಿಗುತ್ತದೆ. ಒಂದು ತಾಸಿನಲ್ಲಿ ಮಾಡುವ ಕೆಲಸಕ್ಕೆ ಎರಡೂವರೆ ತಾಸು ಸಮಯ ಬೇಕಾಗುತ್ತದೆ. ಮಳೆ–ಗಾಳಿ ಇದ್ದರೆ ಕರೆಂಟ್‌ ಇಲ್ಲದೇ, ಟವರ್ ಜೀವ ಕಳೆದುಕೊಳ್ಳುತ್ತದೆ. ವಿದ್ಯುತ್ ಇದ್ದಾಗ ಕೆಲಸ ಮಾಡುವ ಕ್ರಮವನ್ನು ರೂಢಿಸಿಕೊಂಡಿದ್ದೇವೆ’ ಎನ್ನುತ್ತಾರೆ ಹೊನ್ನಾವರ ವಂದೂರು ಜಡ್ಡಿಗದ್ದೆಯ ಕುಮಾರ ನಾರಾಯಣ.

‘ನಡುರಾತ್ರಿ ಕಳೆದರೂ ಕೆಲಸ ಪೂರ್ಣಗೊಳ್ಳುವುದಿಲ್ಲ. ತೀರಾ ದುರ್ಬಲ ನೆಟ್‌ವರ್ಕ್‌ ನಮ್ಮ ಜೀವನಕ್ರಮವನ್ನೇ ಬದಲಾಯಿಸಿದೆ. ಮನೆಯಲ್ಲೇ ಇದ್ದರೂ ಸಮಯಕ್ಕೆ ಊಟ–ತಿಂಡಿ ಮಾಡಲಾಗುತ್ತಿಲ್ಲ. ನೆಟ್‌ವರ್ಕ್ ಕಾರಣಕ್ಕೆ ವರ್ಕ್ ಫ್ರಾಮ್ ಹೋಂ, ನೆಮ್ಮದಿಗಿಂತ ಕಿರಿಕಿರಿಯೇ ಹೆಚ್ಚಾಗಿ ಹೋಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಉದ್ಯೋಗದ ಕಾರಣಕ್ಕಾಗಿ ದೇವನಳ್ಳಿಯಲ್ಲಿ ಬಾಡಿಗೆ ರೂಮಿನಲ್ಲಿದ್ದೇನೆ. ವಿದ್ಯುತ್ ಇಲ್ಲದಿದ್ದರೆ ಮೊಬೈಲ್ ಟವರ್‌ಗಳು ನಿಶ್ಚಲವಾಗುತ್ತವೆ. ಅನಿವಾರ್ಯವಾಗಿ ಕೆಲಸಕ್ಕೆ ರಜೆ ಮಾಡಬೇಕಾಗುತ್ತದೆ ಎಂದು ಎಂಜಿನಿಯರ್ ಶುಭಾ ಮತ್ತಿಘಟ್ಟ ಹೇಳಿದರು.

‘ಶಿಕ್ಷಕರು ಪಾಠವನ್ನು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದರೂ ಅದನ್ನು ನೋಡಲು ಆಗುತ್ತಿಲ್ಲ. ಪ್ರತಿದಿನ ಹಾಕುವ ಪಾಠಗಳು ಬಾಕಿಯಾಗುತ್ತಿವೆ. ವಿದ್ಯುತ್ ಇಲ್ಲದೇ ಮೊಬೈಲ್ ಸತ್ತುಹೋಗಿದೆ’ ಎಂದು ವಿದ್ಯಾರ್ಥಿನಿ ಸುಷ್ಮಾ ಬೇಸರಿಸಿಕೊಂಡಳು.

***

ವಿಪರೀತ ಗಾಳಿಗೆ ವಿದ್ಯುತ್ ಮಾರ್ಗಗಳ ಮೇಲೆ ಮರಗಳು ಬಿದ್ದಿದ್ದವು. ಮಳೆಯ ನಡುವೆಯೇ ಕೆಲಸಗಾರರು ದುರಸ್ತಿ ಕೆಲಸ ಮಾಡುತ್ತಿದ್ದಾರೆ. ಜನರ ದೂರುಗಳಿಗೆ ಸ್ಪಂದಿಸಿದ್ದೇವೆ

– ದೀಪಕ ಕಾಮತ, ಹೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಶಿರಸಿ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT