ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಾರಿಕೆಯ ಮೊದಲ ದಿನವೇ ಭಾರಿ ನಿರಾಸೆ

ಆಳಸಮುದ್ರದಲ್ಲಿ ಮೀನು ಸಿಗದೇ ಖಾಲಿ ಕೈಯಲ್ಲಿ ಮರಳಿದ ಕಡಲ ಮಕ್ಕಳು
Last Updated 1 ಆಗಸ್ಟ್ 2020, 13:20 IST
ಅಕ್ಷರ ಗಾತ್ರ

ಕಾರವಾರ: ಮೀನುಗಾರಿಕೆಯ ಈ ಋತುವಿನ ಮೊದಲ ದಿನವೇ ಮೀನುಗಾರರಿಗೆ ಭಾರಿ ನಿರಾಸೆಯಾಗಿದೆ. ಕಾರವಾರದಿಂದ ಆಳ ಸಮುದ್ರಕ್ಕೆ ಹೋಗಿದ್ದ ಸಣ್ಣ ದೋಣಿಗಳು ಡೀಸೆಲ್ ಖರ್ಚಿಗೆ ಅಗತ್ಯವಾದಷ್ಟೂ ಮೀನು ಸಿಗದೇ ವಾಪಸಾಗಿವೆ.

ನಗರದ ಬೈತಖೋಲ್ ಮೀನುಗಾರಿಕಾ ಬಂದರಿನಿಂದ ಶನಿವಾರ ಬೆಳಿಗ್ಗೆಯೇ ಸುಮಾರು 50 ದೋಣಿಗಳು ಮೀನುಗಾರಿಕೆಗೆ ತೆರಳಿದ್ದವು. ಆದರೆ, ಇಡೀ ದಿನ ಸಮುದ್ರದಲ್ಲಿ ಶ್ರಮಿಸಿದರೂ ಕೆಲವು ದೋಣಿಗಳಿಗೆ ಮಾತ್ರ ಒಂದೆರಡು ಬುಟ್ಟಿಗಳಷ್ಟೇ ಸೆಟ್ಲೆ (ಸೀಗಡಿ) ಮೀನುಗಳು ಸಿಕ್ಕಿದವು.

‘ಶನಿವಾರ ಅಂದಾಜು ಒಂದು ಕ್ವಿಂಟಲ್‌ನಷ್ಟೇ ಮೀನು ಸಿಕ್ಕಿದೆ. ದೋಣಿಗಳಿಗೆ ದಿನವೊಂದಕ್ಕೆ 70ರಿಂದ 80 ಲೀಟರ್‌ಗಳಷ್ಟು ಡೀಸೆಲ್ ಬೇಕು. ಮೀನು ವ್ಯಾಪಾರಿಗಳು ಸೆಟ್ಲೆಯನ್ನು ಕೆ.ಜಿ.ಗೆ ₹ 105ರಂತೆ ಖರೀದಿಸುವುದಾಗಿ ಹೇಳಿದ್ದಾರೆ. ಕಾರ್ಮಿಕರ ವೇತನ, ನಿತ್ಯದ ಆದಾಯವನ್ನೆಲ್ಲ ಒಟ್ಟುಗೂಡಿಸಿದರೆ ಮೊದಲ ದಿನ ನಷ್ಟವೇ ಆಗಿದೆ. ಈ ಅಂದಾಜಿನ ಪ್ರಕಾರ ದೋಣಿಗಳ ಡೀಸೆಲ್‌ ಖರ್ಚೂ ಸಿಕ್ಕುವುದಿಲ್ಲ’ ಎಂದು ಮೀನುಗಾರರು ತೀವ್ರ ಬೇಸರ ವ್ಯಕ್ತಪಡಿಸಿದರು.

ಮುದಗಾ ಬಂದರಿನಿಂದಲೂ ಸುಮಾರು 60 ದೋಣಿಗಳು ಸಮುದ್ರಕ್ಕೆ ತೆರಳಿದ್ದವು. ಆದರೆ, ಅವುಗಳೂ ಖಾಲಿಯಾಗಿಯೇ ಬಂದರಿಗೆ ಮರಳಿವೆ.

ಬೈತಖೋಲ್ ಮೀನುಗಾರಿಕಾ ಬಂದರಿಗೆ ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಪಿ.ನಾಗರಾಜು ಹಾಗೂ ಸಹಾಯಕ ನಿರ್ದೇಶಕ ಪ್ರತೀಕ್ ಶೆಟ್ಟಿ ಭೇಟಿ ನೀಡಿದರು. ಕೊರೊನಾ ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುತ್ತಿರುವ ಬಗ್ಗೆ ಪರಿಶೀಲಿಸಿದರು.

‘ಉತ್ತಮವಾಗುವ ನಿರೀಕ್ಷೆ’:‘ಮೀನುಗಾರಿಕೆಯ ಮೊದಲ ದಿನ ಶೇ 90ರಷ್ಟು ಸಣ್ಣ ದೋಣಿಗಳು ಮೀನುಗಾರಿಕೆಗೆ ಹೋಗಿವೆ. ಸಣ್ಣಪುಟ್ಟ ದುರಸ್ತಿಗೆ ಬಾಕಿಯಿದ್ದ ಬೆರಳೆಣಿಕೆಯ ದೋಣಿಗಳು ಲಂಗರು ಹಾಕಿದ್ದವು. ಪರ್ಸೀನ್ ದೋಣಿಗಳನ್ನು ಆ.5ರ ನಂತರ ಕಡಲಿಗಿಳಿಸಲು ದೋಣಿ ಮಾಲೀಕರು ನಿರ್ಧರಿಸಿದ್ದಾರೆ’ ಎಂದು ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ‍ಪಿ.ನಾಗರಾಜು ತಿಳಿಸಿದರು.

‘ಶನಿವಾರ ದೋಣಿಗಳು ಬಹುತೇಕ ಖಾಲಿಯಾಗಿಯೇ ವಾಪಸ್ ಬಂದಿವೆ. ಸಮುದ್ರದಲ್ಲಿ ಮೀನುಗಳಿರುವ ಪ್ರದೇಶವನ್ನು ಮೀನುಗಾರರು ಗುರುತಿಸಿದ್ದಾರೆ. ಹಾಗಾಗಿ ಇನ್ನೊಂದೆರಡು ದಿನಗಳಲ್ಲಿ ಬಲೆಗಳಿಗೆ ಸಾಕಷ್ಟು ಮೀನು ಸಿಗುವ ನಿರೀಕ್ಷೆಯಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT