ಗುರುವಾರ , ಜನವರಿ 21, 2021
23 °C
ಬೀದಿ ಬದಿ, ಖಾಲಿ ನಿವೇಶನ, ಕಾಡಿನಲ್ಲಿ ಕಳೇಬರ: ಆರೋಗ್ಯ, ಪರಿಸರದ ಮೇಲೆ ಪರಿಣಾಮ

ಕಾರವಾರ: ಸಾಕುಪ್ರಾಣಿ ಅಂತ್ಯಕ್ರಿಯೆಗೆ ಸ್ಥಳಾಭಾವ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಮನುಷ್ಯ ಮೃತಪಟ್ಟರೆ ಗೌರವಯುತವಾಗಿ ಅಂತ್ಯಕ್ರಿಯೆ ಮಾಡಲು ಸ್ಮಶಾನಗಳಿವೆ. ಆದರೆ, ಸಾಕುಪ್ರಾಣಿಗಳಿಗೆ ಇಂಥ ಯಾವುದೇ ವ್ಯವಸ್ಥೆಗಳಿಲ್ಲ. ಮನೆ ಸದಸ್ಯರಂತೆ ನೋಡಿಕೊಂಡರೂ ಬಹುತೇಕ ಸಂದರ್ಭದಲ್ಲಿ ಅವುಗಳ ಅಂತಿಮ ಯಾತ್ರೆಯು ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಅಥವಾ ಅರಣ್ಯ ಪ್ರದೇಶದಲ್ಲಿ ಅನಾಥವಾಗಿ ಕೊಳೆತು ನಾರುವ ಮೂಲಕ ಅಂತ್ಯಗೊಳ್ಳುತ್ತದೆ.

ಬೆಂಗಳೂರಿನಲ್ಲಿ ಸಾಕುನಾಯಿಗಳ ಅಂತ್ಯಕ್ರಿಯೆ ನಡೆಸಲೆಂದೇ ಸ್ಮಶಾನವೊಂದಿದೆ. ಅದೇ ಮಾದರಿಯಲ್ಲಿ ಜಿಲ್ಲೆಯಲ್ಲೂ ವ್ಯವಸ್ಥೆ ಮಾಡಬೇಕು ಎಂಬುದು ಪ್ರಾಣಿಪ್ರಿಯರ ಒತ್ತಾಯವಾಗಿದೆ. ಇದರಿಂದ ಸಾಕಿ ಸಲಹಿದವರ ಮನಸ್ಸಿಗೂ ಸಮಾಧಾನ ದೊರೆಯುತ್ತದೆ. ಜೊತೆಗೆ ಪರಿಸರ ಹಾಗೂ ಜನರ ಆರೋಗ್ಯದ ಮೇಲಿನ ಕಾಳಜಿಯನ್ನೂ ನಿಭಾಯಿಸಲು ಸಾಧ್ಯ ಎನ್ನುತ್ತಾರೆ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ.

ಸದ್ಯ ಕಾರವಾರದಲ್ಲಿ ಸಾಕುಪ್ರಾಣಿಗಳ ಕಳೇಬರಗಳನ್ನು ಮನೆಯ ಬಳಿ ಸ್ವಲ್ಪ ಜಾಗವಿದ್ದವರು ಅಲ್ಲೇ ಹೂತುಹಾಕುತ್ತಾರೆ. ಉಳಿದ ಸಂದರ್ಭಗಳಲ್ಲಿ ಪೌರಕಾರ್ಮಿಕರು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸುತ್ತಾರೆ.

ಶಿರಸಿ: ನಗರದಲ್ಲಿ ನಾಯಿ, ಬೆಕ್ಕುಗಳ ಸಾಕುವವರ ಸಂಖ್ಯೆ ಹೆಚ್ಚಿದೆ. ಮುದ್ದಿನಿಂದ ಸಾಕಿದ ಪ್ರಾಣಿಗಳು ಮೃತಪಟ್ಟರೆ ಕೆಲವರು ತಮ್ಮ ಮನೆ ಆವರಣದಲ್ಲೇ ಹೂತು ಹಾಕಿರುವ ಉದಾಹರಣೆಗಳು ಸಾಕಷ್ಟಿವೆ. ಆದರೆ, ಬೀಡಾಡಿ ದನಗಳು, ನಾಯಿ ಮೃತಪಟ್ಟರೆ ಅವುಗಳನ್ನು ಕೊಂಡೊಯ್ದು ಅಂತ್ಯಸಂಸ್ಕಾರ ನಡೆಸುವ ಜವಾಬ್ದಾರಿ ನಗರಸಭೆ ಹೆಗಲೇರುತ್ತದೆ.

‘ಸತ್ತ ಪ್ರಾಣಿಗಳ ವಿಲೇವಾರಿ ಮಾಡಲು ಪ್ರತ್ಯೇಕ ಜಾಗವಿಲ್ಲ. ತ್ಯಾಜ್ಯ ವಿಲೇವಾರಿ ಘಟಕದಲ್ಲೇ ನಿರ್ದಿಷ್ಟ ಜಾಗ ಗುರುತಿಸಿ ಹೂಳಲಾಗುತ್ತದೆ. ದನಗಳ ಅಂತ್ಯಸಂಸ್ಕಾರ ನಡೆಸುವ ಪ್ರಮೇಯ ನಗರಸಭೆಗೆ ಹೆಚ್ಚು ಬರುವುದಿಲ್ಲ’ ಎನ್ನುತ್ತಾರೆ ಸ್ವಚ್ಛತಾ ನಿರೀಕ್ಷಕ ಆರ್.ಎಂ.ವೆರ್ಣೇಕರ್.

‘ಸಾಕುಪ್ರಾಣಿಗಳ ಅಂತ್ಯಸಂಸ್ಕಾರ ಮಾಡುವಂತೆ ನಗರಸಭೆಗೆ ಈವರೆಗೆ ದೂರು ಬಂದಿದ್ದು ಕಡಿಮೆ. ಪ್ರಾಣಿಗಳ ಮಾಲೀಕರೇ ಅವುಗಳನ್ನು ಹೂತುಹಾಕುತ್ತಾರೆ. ಆದರೆ, ರಸ್ತೆಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಪ್ರಾಣಿ ಸತ್ತರೂ ನಗರಸಭೆಗೆ ಕರೆ ಬರುತ್ತದೆ. ವಾರಕ್ಕೆ ಸರಾಸರಿ 8ರಿಂದ 10 ನಾಯಿಗಳ ಅಂತ್ಯಸಂಸ್ಕಾರ ಮಾಡುತ್ತೇವೆ’ ಎನ್ನುತ್ತಾರೆ ಅವರು. 

‘ಖಾಲಿ ಜಾಗದಲ್ಲಿ ನಾಲ್ಕಾರು ಅಡಿ ಹೊಂಡ ತೆಗೆದು ಹೂತರೂ ಆರೇಳು ತಿಂಗಳಲ್ಲಿ ಮೃತದೇಹ ಮಣ್ಣಿನಲ್ಲಿ ಕರಗಿಹೋಗುತ್ತದೆ. ಪ್ರಾಣಿಗಳ ಅಂತ್ಯಸಂಸ್ಕಾರಕ್ಕೆ ಪ್ರತ್ಯೇಕ ಸ್ಮಶಾನ ಭೂಮಿ ನಿರ್ಮಿಸಿದರಂತೂ ಇನ್ನೂ ಅನುಕೂಲ’ ಎನ್ನುತ್ತಾರೆ ಪೆಟ್ ಪ್ಲ್ಯಾನೆಟ್‍ನ ರಾಜೇಂದ್ರ ಶಿರ್ಸಿಕರ್.

ಸಿದ್ದಾಪುರ: ಪಟ್ಟಣದಲ್ಲಿ ಸಾಕು ಪ್ರಾಣಿಗಳ ಕಳೇಬರದ ವಿಲೇವಾರಿಗೆ ಪ್ರತ್ಯೇಕ ಸ್ಮಶಾನವಿಲ್ಲ. ನಾಯಿ, ಬೆಕ್ಕು ಇತ್ಯಾದಿ ಪ್ರಾಣಿಗಳ ಮೃತದೇಹ ಸಾರ್ವಜನಿಕ ಸ್ಥಳದಲ್ಲಿ ಕಂಡುಬಂದರೆ ಅವುಗಳನ್ನು ಪಟ್ಟಣದ ಹೊರವಲಯದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕದ ಆವರಣದಲ್ಲಿ ಹೂಳಲಾಗುತ್ತದೆ.

ಬಹುತೇಕ ಸಂದರ್ಭಗಳಲ್ಲಿ ಸಾಕುಪ್ರಾಣಿಗಳ ಕಳೇಬರಗಳನ್ನು ಅವುಗಳ ಮಾಲೀಕರೇ ವಿಲೇವಾರಿ ಮಾಡುತ್ತಾರೆ. ಬೀಡಾಡಿ ನಾಯಿಗಳು ಅಥವಾ ಮಾಲೀಕರು ಇಲ್ಲದ ಪ್ರಾಣಿಗಳ ಮೃತದೇಹಗಳನ್ನು ಮಾತ್ರ ಪಟ್ಟಣ ಪಂಚಾಯಿತಿ ಮಾಡುತ್ತದೆ ಎನ್ನುತ್ತಾರೆ ಅಧಿಕಾರಿಗಳು.

‘ತಮ್ಮ ಸಾಕುಪ್ರಾಣಿಗಳ ಮೃತದೇಹವನ್ನು ವಿಲೇವಾರಿ ಮಾಡಲು ನಮಗೆ ಸಾರ್ವಜನಿಕರು ಮನವಿ ಮಾಡಿದ ಉದಾಹರಣೆ ಅಷ್ಟಾಗಿ ಇಲ್ಲ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕುಮಾರ್‌ ನಾಯ್ಕ ಹೇಳಿದರು.

ಅದರಂತೆ ತಾಲ್ಲೂಕಿನ 23 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಸಾಕುಪ್ರಾಣಿಗಳ ಕಳೇಬರದ ವಿಲೇವಾರಿಗೆ ಸ್ಮಶಾನದ ವ್ಯವಸ್ಥೆ ಇಲ್ಲ.

ಹೊನ್ನಾವರ: ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಮನುಷ್ಯರ ಶವಸಂಸ್ಕಾರಕ್ಕೂ ಸ್ಥಳವಿಲ್ಲದ ಹೀನಾಯ ಪರಿಸ್ಥಿತಿ ಇದೆ. ಹೀಗಿರುವಾಗ ಸಾಕು ಪ್ರಾಣಿಗಳ ಮೃತದೇಹದ ಸಂಸ್ಕಾರಕ್ಕೆ ಜಾಗ ಒದಗಿಸುವುದು ‘ವಿಲಾಸಿ’ ಬೇಡಿಕೆ ಎಂಬಂತೆ ಪರಿಭಾವಿಸುವ ಪರಿಪಾಠ ತಾಲ್ಲೂಕಿನಾದ್ಯಂತ ಸಹಜವಾಗಿದೆ.

ಹೆದ್ದಾರಿಗಳಲ್ಲಿ ಜಾನುವಾರು, ಬೀದಿ ಹಾಗೂ ಸಾಕು ನಾಯಿಗಳ ಸಾವು ದಿನನಿತ್ಯ ಸಂಭವಿಸುತ್ತಿದೆ. ಅಪರೂಪಕ್ಕೆ ಎಂಬಂತೆ ಇವುಗಳನ್ನು ಹೂಳಲಾಗುತ್ತದೆ. ಸತ್ತ ಪ್ರಾಣಿಗಳ ದುರ್ವಾಸನೆಯಿಂದ ರಸ್ತೆಯಲ್ಲಿ ಮೂಗು ಬಿಡಲು ಸಾಧ್ಯವಿಲ್ಲದಂತಾಗುತ್ತದೆ. ಬಿಸಿಲಿಗೆ ಒಣಗಿ ಅಥವಾ ವಾಹನಗಳ ಚಕ್ರಕ್ಕೆ ಸಿಲುಕಿ ಸ್ವಲ್ಪ ಸಮಯದ ನಂತರ ಮೃತದೇಹಗಳು ಹೇಗೋ ತಮ್ಮ ಅಂತ್ಯ ಕಾಣುತ್ತವೆ.

ತಾಲ್ಲೂಕಿನ 28 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಅಧಿಕೃತ ಹಾಗೂ ಅನಧಿಕೃತ ಸೇರಿ ಸುಮಾರು 50 ಸ್ಮಶಾನಗಳಿರಬಹುದು ಎಂಬುದು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಕೊಡುವ ಅಂದಾಜು ಲೆಕ್ಕ. ಆದರೆ, ಪ್ರಾಣಿಗಳ ಅಂತ್ಯಸಂಸ್ಕಾರಕ್ಕೆ ಹುಡುಕಿದರೂ ಒಂದೇ ಒಂದು ಸ್ಮಶಾನ ಕೂಡ ಸಿಗುವುದಿಲ್ಲ.

ಮುಂಡಗೋಡ: ಪಟ್ಟಣದ ವ್ಯಾಪ್ತಿಯಲ್ಲಿ ಸಾಕು ಪ್ರಾಣಿಗಳ ಕಳೇಬರಗಳನ್ನು ಪೌರ ಸಿಬ್ಬಂದಿಯೇ ಸಾಗಿಸುತ್ತಾರೆ. ಸತ್ತ ಪ್ರಾಣಿಗಳನ್ನು ಹೂಳಲು ಪ್ರತ್ಯೇಕ ಜಾಗ ಮೀಸಲಿಟ್ಟಿಲ್ಲ. ಅವು ಬಹುತೇಕ ಸಂದರ್ಭಗಳಲ್ಲಿ ಅರಣ್ಯ ಪಾಲಾಗುತ್ತವೆ.

ಸಾಮಾನ್ಯವಾಗಿ ನಾಯಿ, ಬೆಕ್ಕುಗಳನ್ನು ಬಹುತೇಕರು ಸಾಕಿರುತ್ತಾರೆ. ಸಾಕುಪ್ರಾಣಿಗಳು ಸತ್ತಾಗ, ಅವುಗಳ ಮಾಲೀಕರು ಪಟ್ಟಣ ಪಂಚಾಯಿತಿಯವರಿಗೆ ತಿಳಿಸುತ್ತಾರೆ. ಬೀದಿ ನಾಯಿಗಳು ಸತ್ತಾಗಲೂ ಪೌರ ಸಿಬ್ಬಂದಿಯೇ ಕಳೇಬರವನ್ನು ಕಸ ಸಾಗಿಸುವ ವಾಹನಗಳಲ್ಲಿ ಸಾಗಿಸುತ್ತಾರೆ.

‘ಬೆಕ್ಕು, ನಾಯಿಗಳು ಸತ್ತಾಗ ಅವುಗಳ ಮಾಲೀಕರು ಕರೆ ಮಾಡುತ್ತಾರೆ. ವಾಹನದಲ್ಲಿ ಅವುಗಳನ್ನು ಸಾಗಿಸಿ, ಘನತ್ಯಾಜ್ಯ ವಿಲೇವಾರಿ ಘಟಕದ ಒಂದು ಬದಿಯಲ್ಲಿ ತಗ್ಗು ತೆಗೆದು ಹೂಳಲಾಗುತ್ತದೆ. ಸತ್ತಿರುವ ಎತ್ತು, ಕರುಗಳನ್ನು ಅರಣ್ಯದಲ್ಲಿ ಹೂಳುತ್ತೇವೆ. ಹಂದಿಗಳು ಸತ್ತರೆ, ಅವುಗಳನ್ನು ಸಾಕಿದ ಮಾಲೀಕರೇ ಸಾಗಿಸಬೇಕಾಗುತ್ತದೆ’ ಎನ್ನುತ್ತಾರೆ ಪೌರ ಸಿಬ್ಬಂದಿ ಅರ್ಜುನ ಬೆಂಡ್ಲಗಟ್ಟಿ.

ಭಟ್ಕಳ: ತಾಲ್ಲೂಕಿನಲ್ಲಿ ನಾಯಿ, ಬೆಕ್ಕು, ದನ, ಮೊಲ ಹಾಗೂ ಹಕ್ಕಿಗಳನ್ನು ಸಾಮಾನ್ಯವಾಗಿ ಸಾಕುತ್ತಾರೆ. ಸಾಕುಪ್ರಾಣಿಗಳು ಸತ್ತಾಗ ವಿಲೇವಾರಿ ಮಾಡಲು ತಾಲ್ಲೂಕಿನಲ್ಲಿ ಯಾವುದೇ ಸ್ಮಶಾನವಿಲ್ಲ.

ಗ್ರಾಮೀಣ ಪ್ರದೇಶಗಳಲ್ಲಿ ತಮ್ಮ ತೋಟ, ಗದ್ದೆಗಳಲ್ಲಿ ಹೂಳುತ್ತಾರೆ. ಆದರೆ, ಪಟ್ಟಣದಲ್ಲಿ ಅದು ಸಾಧ್ಯವಾಗುವುದಿಲ್ಲ. ಬದುಕಿದಷ್ಟು ದಿನ ಕುಟುಂಬ ಸದಸ್ಯರಂತೆ ಪರಿಗಣಿಸಿ, ಸತ್ತಾಗ ಅದನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಸಾಧ್ಯವಾಗುವುದಿಲ್ಲ. ಆಗ ಮನಸ್ಸಿಗೆ ಆಗುವ ದುಃಖ ಅತೀವ ಎನ್ನುತ್ತಾರೆ ಪ್ರಾಣಿಪ್ರಿಯರು.

ಪುರಸಭೆಯವರು ಸಾಕುಪ್ರಾಣಿಗಳ ಶವವನ್ನು ವಿಲೇವಾರಿ ಮಾಡುವುದಿಲ್ಲ. ‘ಅದು ನಮಗೆ ಸಂಬಂಧಿಸಿದ್ದಲ್ಲ, ನೀವೇ ಮಾಡಿಕೊಳ್ಳಿ’ ಎಂದು ಕೈಚೆಲ್ಲಿ ಬಿಡುತ್ತಾರೆ. ಪುರಸಭೆಯವರ ತ್ಯಾಜ್ಯ ಸಂಗ್ರಹಣಾ ಘಟಕದಲ್ಲೂ ಹಾಕಲು ಸಾರ್ವಜನಿಕರಿಗೆ ಅನುಮತಿಯಿಲ್ಲ. ಹಸುಗಳು, ನಾಯಿಗಳು ಸತ್ತಾಗ ಕದ್ದುಮುಚ್ಚಿ ರಾತ್ರಿಯಲ್ಲಿ ನಿರ್ಜನ ಪ್ರದೇಶದಲ್ಲಿ ಹೂಳಲಾಗುತ್ತದೆ.

‘ಸತ್ತ ಸಾಕುಪ್ರಾಣಿಗಳನ್ನು ವಿಲೇವಾರಿ ಮಾಡಲು ನಮ್ಮಲ್ಲಿ ಸ್ಥಳವಿಲ್ಲ. ಬೀದಿಯಲ್ಲಿ ಸತ್ತ ಪ್ರಾಣಿಗಳನ್ನು ಘನತ್ಯಾಜ್ಯ ವಿಲೇವಾರಿ ಘಟಕದ ಲ್ಯಾಂಡ್ ಫಿಲ್ಲಿಂಗ್‌ನಲ್ಲಿ ಹಾಕುತ್ತೇವೆ’‍ ಎನ್ನುತ್ತಾರೆ ಭಟ್ಕಳ ಪುರಸಭೆ ಆರೋಗ್ಯಾಧಿಕಾರಿ ಸೋಜಿಯಾ ಸೋಮನ್.

‘ಪ್ರಸ್ತಾಪವೇ ಸಲ್ಲಿಕೆಯಾಗಿಲ್ಲ’: ‘ಸಾಕುಪ್ರಾಣಿಗಳ ಅಂತ್ಯ ಸಂಸ್ಕಾರಕ್ಕೆ ಸಂಬಂಧಿಸಿದ ಬೇಡಿಕೆಯೇ ಇದುವರೆಗೆ ಪ್ರಸ್ತಾಪವಾದಂತೆ ಕಾಣುತ್ತಿಲ್ಲ. ಪರಿಸರ ಹಾಗೂ ಸಾಮಾಜಿಕ ಹಿತದೃಷ್ಟಿಯಿಂದ ಪ್ರಾಣಿಗಳಿಗಳ ಅಂತ್ಯ ಸಂಸ್ಕಾರಕ್ಕೂ ನಿರ್ದಿಷ್ಟ ಜಾಗ ಕಲ್ಪಿಸಬೇಕಿದೆ. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈ ಕುರಿತ ನಿರ್ಣಯ ಅಂಗೀಕರಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವ ತುರ್ತು ಕಾರ್ಯವಾಗಬೇಕಿದೆ’ ಎನ್ನುವುದು ಹೊನ್ನಾವರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಉಲ್ಲಾಸ ನಾಯ್ಕ ಅವರ ಅಭಿಪ್ರಾಯವಾಗಿದೆ.

‘ಪ್ರತ್ಯೇಕ ಜಾಗವಿರಲಿ’: ‘ಸಾಕಿದ ನಾಯಿ ಸತ್ತಾಗ ದುಃಖ ತಡೆಯಲಾಗದು. ಅವುಗಳಿಗೆ ಮನುಷ್ಯರ ಮಾತು ಬಾರದಿದ್ದರೂ ಕುಟುಂಬ ಸದಸ್ಯರಲ್ಲಿ ಒಬ್ಬರಂತೆ ಆಗಿರುತ್ತವೆ. ಈಚೆಗೆ ಸಾಕಿದ ನಾಯಿ ಸತ್ತಾಗ, ಅರಣ್ಯದಂಚಿನಲ್ಲಿ ಅದನ್ನು ಹೂಳಿದೆ. ಪ್ರಾಣಿಗಳಿಗೂ ಒಂದು ಜಾಗ ಮೀಸಲಿಡಬೇಕು. ಬಿಡಾಡಿ ನಾಯಿಗಳಿಗೆ ಪಟ್ಟಣದ 3– 4 ಕಡೆ ಆಹಾರ ಸಿಗುವಂತೆ ವ್ಯವಸ್ಥೆ ಮಾಡಲು ನಿರ್ಧರಿಸಿದ್ದೇನೆ. ದಿನಕ್ಕೆ ಒಂದು ಬಾರಿ, ಆಹಾರವನ್ನು ನಿಗದಿತ ಸ್ಥಳದಲ್ಲಿ ಇಡಲಾಗುವುದು’ ಎನ್ನುತ್ತಾರೆ ಮುಂಡಗೋಡದ ಮೋತಿ ಫೌಂಡೇಷನ್ ಸ್ಥಾಪಕ ಶಿವರಾಜ ಶಿರಾಲಿ.

‘ನೆನಪು ಹಸಿರಾಗಿಸಿ’: ‘ಹೆದ್ದಾರಿಯ ಬದಿಯಲ್ಲಿ ನಾಯಿ, ಬೆಕ್ಕು ಮುಂತಾದ ಸಾಕುಪ್ರಾಣಿಗಳ ಕಳೇಬರಗಳನ್ನು ಕಾಣುತ್ತೇವೆ. ಅವುಗಳನ್ನು ಗಿಡುಗ, ಕಾಗೆ, ನಾಯಿಗಳು ಕಚ್ಚಿ ಸುತ್ತಮುತ್ತ ಚೆಲ್ಲಾಪಿಲ್ಲಿ ಮಾಡಿ ಅಸಹ್ಯ ವಾತಾವರಣ ಉಂಟಾಗಿರುತ್ತದೆ. ಅದರ ಬದಲು ಎಲ್ಲಾದರೂ ಒಂದು ಕಡೆ ಗುಂಡಿತೋಡಿ, ಅವುಗಳ ಮೇಲೆ ಮಣ್ಣು ಮುಚ್ಚಬೇಕು. ಬಳಿಕ

ಅಲ್ಲೊಂದು ಗಿಡ ನೆಟ್ಟರೆ ನಮ್ಮ ಸಾಕುಪ್ರಾಣಿಯ ನೆನಪು ಹಾಗೂ ಪರಿಸರ ಎರಡೂ ಉಳಿಯುತ್ತವೆ’ ಎನ್ನುತ್ತಾರೆ ಜನಶಕ್ತಿ ವೇದಿಕೆಯ ಮಾಧವ ನಾಯಕ.

***
ಪ್ರೀತಿಯಿಂದ ಸಾಕಿದ ನಾಯಿಗಳು ಒಮ್ಮೊಮ್ಮೆ ಆರೋಗ್ಯ ಏರುಪೇರಿನಿಂದ ಸಾಯುತ್ತವೆ. ಮನೆ ಬಳಿ ಸ್ಥಳವಿಲ್ಲದಿದ್ದರೂ ನಿರ್ಜನ ಪ್ರದೇಶದಲ್ಲಿ ವಿಧಿವಿಧಾನ ಮಾಡಿ ಹೂಳುತ್ತೇವೆ.
– ರಾಜಶೇಖರ ಗೌಡ, ಭಟ್ಕಳದ ತಲಾಂದ ನಿವಾಸಿ.

***
ಪ್ರಾಣಿಗಳು ನಮ್ಮಂತೇ ಜೀವಿಗಳು. ಅವು ಬದುಕಿದ್ದಾಗ ಉಪಕಾರ ಪಡೆದು, ಅವುಗಳು ಸತ್ತ ನಂತರ ಅಮಾನವೀಯವಾಗಿ ಎಸೆದು ಹೋಗುವುದು ಸರಿಯಾದ ಕ್ರಮವಲ್ಲ.
– ರಾಜೇಂದ್ರ ಶಿರ್ಸಿಕರ್, ಪೆಟ್ ಪ್ಲ್ಯಾನೆಟ್‍ ಮಾಲೀಕ, ಶಿರಸಿ.

–––––––––

ಪ್ರಜಾವಾಣಿ ತಂಡ: ಸದಾಶಿವ ಎಂ.ಎಸ್, ಗಣಪತಿ ಹೆಗಡೆ, ರವೀಂದ್ರ ಭಟ್ ಬಳಗುಳಿ, ಎಂ.ಜಿ.ಹೆಗಡೆ, ಶಾಂತೇಶ ಬೆನಕನಕೊಪ್ಪ, ಮೋಹನ ನಾಯ್ಕ, ದಿಲೀಪ ರೇವಣಕರ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು