‘ವನದುರ್ಗಾ ನರ್ಸರಿ’ ಬದುಕು ಹಸಿರಾಗಿಸಿದ ಗಿಡಗಳ ಪಾಲನೆ

ಶುಕ್ರವಾರ, ಜೂಲೈ 19, 2019
24 °C
ಯಲ್ಲಾಪುರ ತಾಲ್ಲೂಕಿನ ಗುಳ್ಳಾಪುರದಲ್ಲಿ ತರಹೇವಾರಿ ಸಸಿಗಳು

‘ವನದುರ್ಗಾ ನರ್ಸರಿ’ ಬದುಕು ಹಸಿರಾಗಿಸಿದ ಗಿಡಗಳ ಪಾಲನೆ

Published:
Updated:
Prajavani

ಕಾರವಾರ: ಒಂದೆಡೆ ಮಹಿಳೆಯರ ಮನಗೆಲ್ಲುವ ಬಣ್ಣಬಣ್ಣದ ಹೂವಿನ ಗಿಡಗಳು, ಮತ್ತೊಂದೆಡೆ ಕೃಷಿಕರಿಗೆ ಆದಾಯ ಕೊಡುವ ತೋಟಗಾರಿಕಾ ಬೆಳೆಗಳ ಸಸಿಗಳು. ಇವುಗಳನ್ನು ಲಾಲನೆ ಪಾಲನೆ ಮಾಡುತ್ತ ಕುಟುಂಬಕ್ಕೊಂದು ಆದಾಯ ಮೂಲ ಮಾಡಿಕೊಂಡವರು ಸಂಧ್ಯಾ ಭಟ್.

ಯಲ್ಲಾಪುರ ತಾಲ್ಲೂಕಿನ ಗುಳ್ಳಾಪುರದಲ್ಲಿರುವ ‘ವನದುರ್ಗಾ ನರ್ಸರಿ’, ಪ್ರಸ್ತುತ ಈ ಭಾಗದಲ್ಲಿ ಗಿಡಗಳ ಮಾರಾಟದ ಪ್ರಮುಖ  ಕೇಂದ್ರವಾಗಿದೆ. ನಿರಂತರ ಪರಿಶ್ರಮದ ಫಲವಾಗಿ ಈಗ ಸಾವಿರಾರು ಗಿಡಗಳು ಗ್ರಾಹಕರ ಕೈ ಸೇರುತ್ತಿವೆ.

‘ಎಂಟು ವರ್ಷಗಳ ಹಿಂದೆ ಇಲ್ಲಿ ಈ ಉದ್ಯಮ ಆರಂಭಿಸಿದೆವು. ಈಗ ಗುಲಾಬಿ, ಸೇವಂತಿಗೆ, ಜರ್ಬೆರಾ, ದಾಸವಾಳ, ಮಲ್ಲಿಗೆ, ಹಬ್ಬಲಿಗೆ, ಡೇರೆ, ಅಶೋಕಾ, ಗೊಂಡೆ ಹೀಗೆ ವಿವಿಧ ಜಾತಿಯ ಹೂವಿನ ಗಿಡಗಳನ್ನು ಈಗ ಮಾರಾಟ ಮಾಡುತ್ತಿದ್ದೇವೆ. ಅದರಲ್ಲೂ ಗುಲಾಬಿ ಗಿಡಗಳನ್ನಂತೂ ಲೋಡ್‌ಗಟ್ಟಲೆ ತರಿಸುತ್ತೇವೆ. ಒಂದೊಂದು ಜಾತಿಯ ಗಿಡಗಳು 5 ಸಾವಿರದಿಂದ 10 ಸಾವಿರದವರೆಗೆ ಸಂಗ್ರಹ ಇವೆ. ಎಲ್ಲವನ್ನೂ ನಿರ್ವಹಣೆ ಮಾಡಲು 10–12 ಕಾರ್ಮಿಕರು ದಿನವೂ ಜೊತೆಗಿರುತ್ತಾರೆ’ ಎಂದು ವಿವರಿಸಿದರು.

ತೋಟಗಾರಿಕಾ ಬೆಳೆಯ ಗಿಡಗಳು: ‘ಆಲಂಕಾರಿಕ ಗಿಡಗಳ ಜೊತೆಗೆ ತೋಟಗಾರಿಕಾ ಬೆಳೆಗಳ ಗಿಡಗಳನ್ನೂ ಮಾರಾಟ ಮಾಡುತ್ತಿದ್ದೇವೆ. ಮಾವು, ಗೇರು, ಕಾಳುಮೆಣಸು, ಅಡಿಕೆ, ತೆಂಗು ಗಿಡಗಳಿಗೆ ಉತ್ತಮ ಬೇಡಿಕೆಯಿದೆ. ಸ್ಥಳೀಯವಾಗಿ ಸಿಗುವ ಉತ್ತಮ ತಳಿಗಳ ತೆಂಗು, ಅಡಿಕೆ ಗಿಡಗಳನ್ನು ನಾವೇ ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದೇವೆ. 100 ಗಿಡಗಳಿಂದ 1,000 ಗಿಡಗಳು ಬೇಕಿದ್ದರೂ ಗ್ರಾಹಕರು ನರ್ಸರಿಗೆ ಬರುತ್ತಾರೆ’ ಎಂದು ತಿಳಿಸಿದರು.

ಪ್ರಯೋಗದಿಂದ ಉದ್ಯಮದತ್ತ: ಈ ನರ್ಸರಿ ಆರಂಭಿಸಿದ್ದರ ಹಿಂದೆ ಕಾಳುಮೆಣಸಿನ ಸಸಿಗೆ ಕಸಿ ಮಾಡಿದ ಪ್ರಯೋಗವೊಂದಿದೆ ಎನ್ನುತ್ತಾರೆ ಸಂಧ್ಯಾ ಅವರ ಪತಿ ಜಿ.ಆರ್.ಭಟ್.

‘ಫಸಲು ನೀಡುವ ಹಂತಕ್ಕೆ ಬಂದ ಕಾಳುಮೆಣಸಿನ ಬಳ್ಳಿಗೆ ರೋಗ ಬಂದು ನಷ್ಟವಾಗುತ್ತಿತ್ತು. ಆಗ ಕೇರಳದಲ್ಲಿ ಹಿಪ್ಪಲಿ ಗಿಡಕ್ಕೆ ಕಾಳುಮೆಣಸಿನ ಸಸಿಯನ್ನು ಕಸಿ ಮಾಡಿದ ಬಗ್ಗೆ ಕೇಳಿದೆವು. ಈ ಬಗ್ಗೆ ಅಧ್ಯಯನ ಮಾಡಿದ ನಾವು, ಕೇರಳಕ್ಕೆ ಹೋಗಿ ಒಂದು ಲೋಡ್ ಹಿಪ್ಪಲಿ ಗಿಡಗಳನ್ನು ತಂದು ಕಸಿ ಮಾಡಿ ಮೆಣಸಿನ ಬಳ್ಳಿಯನ್ನು ಅಭಿವೃದ್ಧಿ ಪಡಿಸಿದೆವು’ ಎಂದು ನೆನಪಿಸಿಕೊಂಡರು. 

‘ಇದರ ನಂತರ ನರ್ಸರಿ ಆರಂಭಿಸುವ ಬಗ್ಗೆ ಗಮನ ಹರಿಸಿದೆವು. ಸ್ವತಃ ಗಿಡಗಳನ್ನು ಅಭಿವೃದ್ಧಿ ಪಡಿಸಿ ಮಾರಾಟ ಮಾಡಲು ಆರಂಭಿಸಿದೆವು. ಆಗ ಮಹಾರಾಷ್ಟ್ರದ ಸಿಂಧುದುರ್ಗಾದ ವೆಂಗುರ್ಲದ ಗೇರುಬೀಜದ ಗಿಡಗಳನ್ನು ಇಲ್ಲಿನ ಕೃಷಿಕರಿಗೆ ಪರಿಚಯಿಸಿದೆವು’ ಎಂದರು.

‘ಈ ಎಲ್ಲದರ ಪರಿಣಾಮದಿಂದ ನರ್ಸರಿ ಅಭಿವೃದ್ಧಿ ಆಯಿತು. ಹಿಲ್ಲೂರಿನ ನಾರಾಯಣ ಹೆಗಡೆ ಕರಿಕಲ್ಲು ಅವರೂ ಜೊತೆಯಲ್ಲಿದ್ದು, ಉದ್ಯಮಕ್ಕೆ ಸಹಕರಿಸುತ್ತಿದ್ದಾರೆ’ ಎಂದು ಹೇಳಿದರು.

‘ಗುಚ್ಛ ಗ್ರಾಮ’ಕ್ಕೆ ಪೂರೈಕೆ: ‘ತೋಟಗಾರಿಕಾ ಇಲಾಖೆಯವರು ‘ಗುಚ್ಛ ಗ್ರಾಮ’ ಯೋಜನೆಗೆ ನಮ್ಮಿಂದ ಉತ್ತಮ ಗಿಡಗಳನ್ನು ತರಿಸಿಕೊಂಡರು. ಜಾಯಿಕಾಯಿ, ಕಾಳುಮೆಣಸು, ಗೇರು ಮುಂತಾದವನ್ನು ಬೇರೆ ಬೇರೆ ಯೋಜನೆಗಳಲ್ಲಿ ಇಲಾಖೆಗೆ ಪೂರೈಕೆ ಮಾಡಿದೆವು. ಅಂಕೋಲಾ ತಾಲ್ಲೂಕು ಮಾತ್ರವಲ್ಲದೇ ಕಾರವಾರ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಯಲ್ಲಾಪುರ ತಾಲ್ಲೂಕುಗಳಿಗೂ ಗಿಡಗಳನ್ನು ಪೂರೈಕೆ ಮಾಡಿದ್ದೇವೆ’ ಎಂದು ಜಿ.ಆರ್.ಭಟ್ ಹಮ್ಮೆಯಿಂದ ಹೇಳಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !