ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಹರೆ’ಗೆ ಆರು ವರ್ಷ: ಕಡಲತೀರ ಸ್ವಚ್ಛತೆ

ನಟ, ನಿರ್ದೇಶಕ ಅರುಣ ಸಾಗರ್, ಶಾಸಕಿ ರೂಪಾಲಿ ನಾಯ್ಕ ಭಾಗಿ
Last Updated 23 ಜನವರಿ 2021, 13:06 IST
ಅಕ್ಷರ ಗಾತ್ರ

ಕಾರವಾರ: ನಗರದ ‍‘ಪಹರೆ ವೇದಿಕೆ’ಯು ಶನಿವಾರ ಆರು ವರ್ಷಗಳನ್ನು ಪೂರೈಸಿತು. ಈ ಸಂದರ್ಭದಲ್ಲಿ ನಗರದ ಕಾಳಿ ನದಿ ಸಂಗಮದಲ್ಲಿ ಬೆಳಿಗ್ಗೆ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಸ್ವಚ್ಛತಾ ಕಾರ್ಯಕ್ರಮಕ್ಕೆ ಶಾಸಕಿ ರೂಪಾಲಿ ನಾಯ್ಕ ಚಾಲನೆ ನೀಡಿದರು. ಚಲನಚಿತ್ರ ನಟ ಅರುಣ್ ಸಾಗರ್ ಈ ಬಾರಿ ಭಾಗವಹಿಸಿದ್ದು ವಿಶೇಷವಾಗಿತ್ತು. ಕಡಲತೀರದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಹಾಗೂ ಗಾಜಿನ ಬಾಟಲಿಗಳು, ‍ಪ್ಲಾಸ್ಟಿಕ್ ಪೊಟ್ಟಣಗಳು ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ಸಂಗ್ರಹಿಸಿದರು.

ಅರುಣ್ ಸಾಗರ್, ‘ಈ ರೀತಿಯ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಅನುಭವ ಎಂಬುದಕ್ಕಿಂತ ಅನುಭಾವವಾಗುತ್ತದೆ. ಪಹರೆ ವೇದಿಕೆಯವರು ನಗರದ ಸ್ವಚ್ಛತೆಗಾಗಿ ಪಕ್ಷ, ವರ್ಗ, ವಯಸ್ಸಿನ ಭೇದ ಮರೆತು ಶ್ರಮಿಸುತ್ತಿದ್ದಾರೆ. ಈ ಮೂಲಕ ಸ್ವಚ್ಛ ಭಾರತ ಪರಿಕಲ್ಪನೆಗೆ ಹೂಗುಚ್ಛ ಇಟ್ಟಿದ್ದಾರೆ. ಪ್ರವಾಸಿ ತಾಣವಾಗಿರುವ ಕಾರವಾರಕ್ಕೆ ಬಂದವರು ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಬಾಟಲಿ ಎಸೆಯುತ್ತಾರೆ. ಅವುಗಳ ಸ್ವಚ್ಛತೆಗೆ ವೇದಿಕೆ ಪರಿಶ್ರಮ ಪ‍ಡುವುದು ಬಹಳ ಸಂತೋಷದ ಕಾರ್ಯ’ ಎಂದು ಮೆಚ್ಚುಗೆ ಸೂಚಿಸಿದರು.

‘ಕಾರವಾರವನ್ನು ರವೀಂದ್ರನಾಥ ಟ್ಯಾಗೋರ್ ಕರ್ನಾಟಕದ ಕಾಶ್ಮೀರ ಎಂದು ಹೊಗಳಿದ್ದರು. ಇಲ್ಲಿನ ಕಾಳಿ ನದಿ ಸಂಗಮಕ್ಕೆ ಉತ್ತಮ ಹೆಸರಿದೆ. ಅದನ್ನು ಉಳಿಸುವ ಕಾರ್ಯವನ್ನು ಪಹರೆಯವರು ಮಾದರಿಯಾಗಿ ಮಾಡುತ್ತಿದ್ದಾರೆ. ನನಗೂ ಇದೊಂದು ಪಾಠವಾಗಿದ್ದು, ನಾನೂ ಮುಂದುವರಿಸುತ್ತೇವೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ವೇದಿಕೆಯ ಅಧ್ಯಕ್ಷ ನಾಗರಾಜ ನಾಯಕ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು. ಬೆಳಿಗ್ಗೆ 7.30ರ ಸುಮಾರಿಗೆ ಆರಂಭವಾದ ಶ್ರಮದಾನವು ಮೂರು ತಾಸು ನಡೆಯಿತು. ಒಂದು ಲಾರಿ ಲೋಡ್‌ನಷ್ಟು ತ್ಯಾಜ್ಯವನ್ನು ಸಂಗ್ರಹಿಸಲಾಯಿತು.

ಸಂಜೆ ಮಯೂರವರ್ಮ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೃಷಿ ಸಾಧಕಿ ಕವಿತಾ ಮಿಶ್ರಾ, ಅರುಣ್ ಸಾಗರ್ ಭಾಗವಹಿಸಿದ್ದರು. ‘ಪಹರೆ’ ವೇದಿಕೆಯು ನಗರದ ವಿವಿಧೆಡೆ ಪ್ರತಿ ವಾರ ಶ್ರಮದಾನದ ಮೂಲಕ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳುತ್ತಿದೆ. ನಗರದ ಗಣ್ಯರು, ಜನಸಾಮಾನ್ಯರು ಇದರಲ್ಲಿ ಭಾಗವಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT