ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕರ ನಿರಾಸಕ್ತಿ: ನ್ಯಾಯಬೆಲೆ ಅಂಗಡಿಗೆ ಒತ್ತಡ

ಇ–ಕೆವೈಸಿ ವಿಳಂಬ: ಕಾರಣ ಕೇಳಿ ಇಲಾಖೆಯಿಂದ ನೋಟಿಸ್ ಜಾರಿ
Last Updated 6 ಆಗಸ್ಟ್ 2021, 15:17 IST
ಅಕ್ಷರ ಗಾತ್ರ

ಶಿರಸಿ: ಪಡಿತರ ಚೀಟಿಗಳನ್ನು ಇ–ಕೆವೈಸಿ (ವಿದ್ಯುನ್ಮಾನ–ನಿಮ್ಮ ಗ್ರಾಹಕರನ್ನು ಅರಿಯಿರಿ) ಪ್ರಕ್ರಿಯೆಗೆ ಒಳಪಡಿಸುವ ಪ್ರಕ್ರಿಯೆ ಜಿಲ್ಲೆಯಲ್ಲಿ ನಿಧಾನಗತಿಯಲ್ಲಿ ಸಾಗಿದೆ. ಪ್ರಕ್ರಿಯೆ ಆರಂಭಿಸದ ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆ.2ರಂದು ಕಾರಣ ಕೇಳಿ ನೋಟಿಸ್ ನೀಡಿದೆ.

ಆಗಸ್ಟ್ 10ರ ಒಳಗೆ ಪಡಿತರ ಕಾರ್ಡುಗಳಿಗೆ ಇ–ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಇಲಾಖೆ ಆದೇಶಿಸಿದೆ. ಕಾರ್ಡುದಾರರ ನಿರ್ಲಕ್ಷ್ಯ, ಸರ್ವರ್ ಸಮಸ್ಯೆ ಕಾರಣದಿಂದ ಜಿಲ್ಲೆಯ 280ಕ್ಕೂ ಹೆಚ್ಚು ನ್ಯಾಯಬೆಲೆ ಅಂಗಡಿಗಳು ಇನ್ನೂ ಇ–ಕೆವೈಸಿ ಪ್ರಕ್ರಿಯೆ ಆರಂಭಿಸಿಲ್ಲ. ಜಿಲ್ಲೆಯಲ್ಲಿ ಒಟ್ಟು 410 ನ್ಯಾಯಬೆಲೆ ಅಂಗಡಿಗಳಿವೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಪಿಎಲ್, ಎ‍ಪಿಎಲ್ ಸೇರಿದಂತೆ ಒಟ್ಟೂ 3,92,044 ಕುಟುಂಬಗಳು ಪಡಿತರ ಕಾರ್ಡ್ ಹೊಂದಿವೆ. ಈ ಪೈಕಿ 2,03,413 ಕಾರ್ಡ್‌ಗಳಿಗೆ ಇ–ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿದೆ. ಎರಡು ವರ್ಷಗಳಿಂದ ಪ್ರಕ್ರಿಯೆ ನಡೆಯುತ್ತಿದ್ದರೂ ಪೂರ್ಣಗೊಳಿಸಲು ಕಷ್ಟವಾಗುತ್ತಿದೆ.

‘ಗುಡ್ಡಗಾಡು ಪ್ರದೇಶದಲ್ಲಿರುವ ನ್ಯಾಯಬೆಲೆ ಅಂಗಡಿಗಳಲ್ಲಿ ಇ–ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ನೆಟ್‍ವರ್ಕ್ ಸಮಸ್ಯೆ ಎದುರಾಗುತ್ತದೆ. ಸರ್ವರ್ ಸಮಸ್ಯೆ ಕೂಡ ಅಡ್ಡಿಯಾಗುತ್ತಿದೆ. ಅಲ್ಲದೆ ಪಡಿತರ ಚೀಟಿಯಲ್ಲಿ ಹೆಸರು ಹೊಂದಿರುವವರು ದೃಢೀಕರಣಕ್ಕೆ ಬರಲು ನಿರಾಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಪ್ರಕ್ರಿಯೆ ಪೂರ್ಣಗೊಳಿಸುವುದು ಕಷ್ಟಸಾಧ್ಯ’ ಎನ್ನುತ್ತಾರೆ ಮುಂಡಗನಮನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ.

‘ಪಡಿತರ ಚೀಟಿದಾರರಿಗೆ ಪ್ರತಿ ಬಾರಿ ಇ–ಕೆವೈಸಿ ಮಾಡಿಕೊಳ್ಳಲು ಸೂಚಿಸಲಾಗುತ್ತಿದೆ. ಅವರೇ ನಿರಾಸಕ್ತಿ ತೋರುತ್ತಿದ್ದಾರೆ. ಈಗ ಏಕಾಏಕಿ ಪ್ರಕ್ರಿಯೆ ಪೂರ್ಣಗೊಳಿಸಲು ಇಲಾಖೆ ಸೂಚನೆ ನೀಡಿದೆ. ಸೀಮಿತ ಅವಧಿಯಲ್ಲಿ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ನ್ಯಾಯಬೆಲೆ ಅಂಗಡಿಗಳನ್ನೇ ಹೊಣೆಗಾರರನ್ನಾಗಿಸಲಾಗುತ್ತದೆ ಎಂದು ಎಚ್ಚರಿಸಲಾಗಿದೆ. ಇದರಲ್ಲಿ ನ್ಯಾಯಬೆಲೆ ಅಂಗಡಿಗಳ ತಪ್ಪೇನು’ ಎಂದು ಅವರು ಪ್ರಶ್ನಿಸುತ್ತಾರೆ.

‘ಎರಡು ದಿನಗಳಿಂದ ಈಚೆಗೆ ಇ–ಕೆವೈಸಿ ಪ್ರಕ್ರಿಯೆ ವೇಗ ಪಡೆದುಕೊಂಡಿದೆ. ತಾಂತ್ರಿಕ ಸಮಸ್ಯೆಗಳಿದ್ದರೂ ಗ್ರಾಹಕರಿಗೆ ತಿಳಿಹೇಳಿ ಇ–ಕೆವೈಸಿ ಪೂರ್ಣಗೊಳಿಸಲು ಮುಂದಾಗುವಂತೆ ನ್ಯಾಯಬೆಲೆ ಅಂಗಡಿಗಳಿಗೆ ಸೂಚಿಸಲಾಗಿದೆ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಮಂಜುನಾಥ ರೇವಣಕರ ಪ್ರತಿಕ್ರಿಯಿಸಿದರು.

‘ಸೆ.10ರ ವರೆಗೂ ಇ–ಕೆವೈಸಿ ಪ್ರಕ್ರಿಯೆ ಕೈಗೊಳ್ಳಲು ಅವಕಾಶ ನೀಡಲಾಗಿದೆ. ಗ್ರಾಹಕರು ಆದಷ್ಟು ಬೇಗ ಪ್ರಕ್ರಿಯೆ ಪೂರ್ಣಗೊಳ್ಳಲು ಸಹಕರಿಸಬೇಕು’ ಎಂದು ಹೇಳಿದರು.

–––––

ಅಂಕಿ–ಅಂಶ

ತಾಲ್ಲೂಕು;ಇ–ಕೆವೈಸಿ ಬಾಕಿ ಇರುವ ಕಾರ್ಡ್‌ಗಳು (ಆ.6ರ ಅಂತ್ಯಕ್ಕೆ)

ಕಾರವಾರ;23,851

ಅಂಕೋಲಾ;12,825

ಕುಮಟಾ;21,098

ಹೊನ್ನಾವರ;23,446

ಭಟ್ಕಳ;24,918

ಶಿರಸಿ;19,707

ಸಿದ್ದಾಪುರ;11,585

ಯಲ್ಲಾಪುರ;7360

ಮುಂಡಗೋಡ;12,276

ಹಳಿಯಾಳ;15,984

ದಾಂಡೇಲಿ;6,928

ಜೋಯಿಡಾ;8,653

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT