ಗುರುವಾರ , ಮೇ 19, 2022
20 °C
ಮುಂಡಗೋಡ: ಬ್ಯಾಂಕ್‌ಗಳ ಮುಂದೆ ಜನರ ಸಾಲು

ಆಧಾರ್‌ ಕಾರ್ಡ್‌ಗೆ ಮೊಬೈಲ್‌ ಸಂಖ್ಯೆ ಜೋಡಣೆಗೆ ರಾತ್ರಿಯಿಡೀ ಸರದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಡಗೋಡ: ಆಧಾರ್‌ ಕಾರ್ಡ್‌ಗೆ ಮೊಬೈಲ್ ಸಂಖ್ಯೆ ಜೋಡಣೆಗೆ ತಾಲ್ಲೂಕಿನ ಜನರು ಪರದಾಡುತ್ತಿದ್ದಾರೆ.

ವಿದ್ಯಾರ್ಥಿಗಳ ಶೈಕ್ಷಣಿಕ ಸೌಲಭ್ಯಕ್ಕಾಗಿ, ಕಾರ್ಮಿಕರ ಕಾರ್ಡ್‌ಗಳ ನವೀಕರಣಕ್ಕಾಗಿ ಹಾಗೂ ಪಡಿತರ ಚೀಟಿ ಚಾಲ್ತಿಗೊಳಿಸಲು, ಮೊಬೈಲ್ ಸಂಖ್ಯೆ ಜೋಡಣೆಯಾಗಿರುವ ಆಧಾರ್‌ ಕಾರ್ಡ್‌ ಬೇಕಾಗಿದೆ. ಅದಕ್ಕಾಗಿ ಟೋಕನ್‌ ಪಡೆಯಲು ರೈತರು, ಕೂಲಿಕಾರ್ಮಿಕರು ರಾತ್ರಿಯೇ, ಬ್ಯಾಂಕ್‌ಗಳ ಆವರಣದಲ್ಲಿ ತಂಗುತ್ತಿದ್ದಾರೆ.

ಇಲ್ಲಿನ ಎಸ್‌ಬಿಐ ಹಾಗೂ ಕೆವಿಜಿ ಬ್ಯಾಂಕ್‌ಗಳ ಮುಂದೆ, ಕಳೆದ ನಾಲ್ಕೈದು ದಿನಗಳಿಂದ ಜನರು ರಾತ್ರಿ ಬಂದು ಮಲಗುತ್ತಿದ್ದಾರೆ. ಬೆಳಿಗ್ಗೆ 7ಗಂಟೆ ಸುಮಾರಿಗೆ ಆಧಾರ್‌ ಕಾರ್ಡ್‌ ತಿದ್ದುಪಡಿ ಮಾಡುವ ಸಿಬ್ಬಂದಿ ಬಂದು, ಅಂದಿಗೆ ನಿಗದಿಪಡಿಸಿದಷ್ಟು ಟೋಕನ್ ನೀಡುತ್ತಿದ್ದಾರೆ. ಇದರಿಂದ ರಾತ್ರಿಯಿಡೀ ಬ್ಯಾಂಕ್ ಮುಂದೆ ಮಲಗಿದರೂ, ಕೆಲವರಿಗೆ ಟೋಕನ್ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

‘ಮಕ್ಕಳ ಶೈಕ್ಷಣಿಕ ಉದ್ದೇಶಕ್ಕಾಗಿ ಆಧಾರ್‌ ಕಾರ್ಡ್‌ಗೆ ಮೊಬೈಲ್ ಸಂಖ್ಯೆ ಜೋಡಣೆ ಮಾಡಿಸಬೇಕಾಗಿದೆ. ಎರಡು ದಿನಗಳಿಂದ ಪಾಳಿಯಲ್ಲಿ ನಿಂತರೂ ಟೋಕನ್ ಸಿಕ್ಕಿಲ್ಲ. ಒಬ್ಬರಿಗೆ ಒಂದೇ ಟೋಕನ್ ನೀಡುತ್ತಿದ್ದಾರೆ. ಇದರಿಂದ ಮಕ್ಕಳ ಸಮೇತ ಬ್ಯಾಂಕ್ ಮುಂದೆ ರಾತ್ರಿ ಮಲಗಿದ್ದೇವೆ’ ಎಂದು ಹುನಗುಂದ ಗ್ರಾಮಸ್ಥ ಮಲ್ಲಪ್ಪ ಹೇಳಿದರು.

‘ಕೂಲಿಕೆಲಸ ಬಿಟ್ಟು ಅಧಾರ್‌ ಕಾರ್ಡ್‌ ತಿದ್ದುಪಡಿ ಮಾಡಲು ಬ್ಯಾಂಕ್ ಮುಂದೆ ಬಂದು ಮಲಗಬೇಕಾಗಿದೆ. ಪ್ರತಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಇದಕ್ಕೆ ಅವಕಾಶ ನೀಡಿದರೆ, ಬಡವರು ಕಷ್ಟಪಡುವುದು ತಪ್ಪುತ್ತದೆ. ನಿತ್ಯ 20 ಜನರಿಗೆ ಮಾತ್ರ ಟೋಕನ್ ನೀಡುತ್ತಿದ್ದಾರೆ. ಇದರಿಂದ ರಾತ್ರಿ ನಿದ್ದೆಗೆಟ್ಟು ಕಾದರೂ ಹಲವರಿಗೆ ಟೋಕನ್ ಸಿಗುತ್ತಿಲ್ಲ’ ಎಂದು ರೈತ ಮಹಿಳೆ ಸರೋಜಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಬುಧವಾರ ಸಭೆ: ‘ಆಧಾರ್‌ ಕಾರ್ಡ್‌ಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡಲು, ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬುಧವಾರ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸುತ್ತೇನೆ. ತಹಶೀಲ್ದಾರ್ ಕಚೇರಿಯಲ್ಲಿ ಆಧಾರ್‌ ತಿದ್ದುಪಡಿ ಕೇಂದ್ರ ತೆರೆಯಲಾಗುವುದು’ ಎಂದು ತಹಶೀಲ್ದಾರ್‌ ಶ್ರೀಧರ ಮುಂದಲಮನಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು