ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಾಶದಲ್ಲಿ ಬೆಳಕಿನ ಸರ: ವಿಸ್ಮಯದ ಹಿಂದಿದೆ ಸಾವಿರಾರು ಉಪಗ್ರಹಗಳ ಉಡಾವಣೆ ಯೋಜನೆ!

Last Updated 21 ಡಿಸೆಂಬರ್ 2021, 5:00 IST
ಅಕ್ಷರ ಗಾತ್ರ

ಕಾರವಾರ: ರಾಜ್ಯದ ವಿವಿಧೆಡೆ ಸೋಮವಾರ ಸಂಜೆ 7ರ ಸುಮಾರಿಗೆ ಆಕಾಶದಲ್ಲಿ ಪಶ್ಚಿಮ ದಿಕ್ಕಿನಲ್ಲಿ ಅಪರೂಪದ ಸನ್ನಿವೇಶವೊಂದು ಗೋಚರಿಸಿತ್ತು. ಫಳಫಳ ಹೊಳೆಯುವ ಬೆಳಕಿನ ಸರವೊಂದು ಸಾಗುತ್ತಿದ್ದುದನ್ನು ಕಂಡು ಜನ ಕುತೂಹಲಗೊಂಡಿದ್ದರು.

ಹಲವರು ಏಲಿಯನ್‌ಗಳು ಬರುತ್ತಿರಬಹುದು, ಯುದ್ಧ ವಿಮಾನಗಳಿರಬಹುದು ಅಥವಾ ಡ್ರೋನ್‌ಗಳಿರಬಹುದು ಎಂದು ಊಹೆ ವ್ಯಕ್ತಪಡಿಸಿದ್ದರು. ಮತ್ತೆ ಕೆಲವರು ಎಲ್.ಇ.ಡಿ ಬಲ್ಬ್‌ಗಳ ಸರವೊಂದು ತೇಲಾಡುತ್ತಿದೆ ಎಂದು ಭಾವಿಸಿದ್ದರು.

ಹಾಗಿದ್ದರೆ ಕಾಣಿಸಿದ್ದೇನು?:
ಇದು ಮಾನವ ನಿರ್ಮಿತ ಉಪಗ್ರಹಗಳ ಸರಮಾಲೆ. ಹೌದು, ದಕ್ಷಿಣ ಆಫ್ರಿಕಾ ಮೂಲದ ಉದ್ಯಮಿ, ಎಲಾನ್ ಮಸ್ಕ್ ಮಾಲೀಕತ್ವದ ಬಾಹ್ಯಾಕಾಶ ಸಂಸ್ಥೆ, ಅಮೆರಿಕದ ‘ಸ್ಪೇಸ್ ಎಕ್ಸ್’ ಒಂದೇ ಸಲಕ್ಕೆ ಉಡಾವಣೆ ಮಾಡಿದ 60 ಉಪಗ್ರಹಗಳಿವು.

‘ಸ್ಟಾರ್ ಲಿಂಕ್’ ಎಂಬ ಯೋಜನೆಯಡಿ ವಿಶ್ವದಾದ್ಯಂತ, ಪ್ರತಿ ಹಳ್ಳಿಗೂ ವೇಗದ ಇಂಟರ್‌ನೆಟ್ ಸಂಪರ್ಕ ಕಲ್ಪಿಸುವುದು ಇದರ ಗುರಿಯಾಗಿದೆ. ಸಾಮಾನ್ಯ ಗಾತ್ರದ ಕಾರಿನಷ್ಟೂ ದೊಡ್ಡದಲ್ಲದ ಈ ಉಪಗ್ರಹಗಳು, ತಲಾ 260 ಕೆ.ಜಿ ತೂಕವಿರುತ್ತವೆ. 2019ರ ಮೇನಲ್ಲಿ ಮೊದಲ ಉಡಾವಣೆಯ ಬಳಿಕ ಈ ರೀತಿ ಸುಮಾರು 2,000 ಉಪಗ್ರಹಗಳನ್ನು ಸಂಸ್ಥೆಯು ಕಕ್ಷೆಗೆ ಕಳುಹಿಸಿದೆ. ಇಂಥ 12 ಸಾವಿರ ಉಪಗ್ರಹಗಳನ್ನು ನಿಗದಿತ ಕಕ್ಷೆಗೆ ಕಳುಹಿಸಿ ಕಾರ್ಯಾಚರಣೆ ಮಾಡುವ ಗುರಿಯನ್ನು ಸ್ಪೇಸ್ ಎಕ್ಸ್ ಹೊಂದಿದೆ.

40 ಸಾವಿರ ಉಪಗ್ರಹಗಳನ್ನು ಉಡಾವಣೆ ಮಾಡುವ ಸಾಮರ್ಥ್ಯವನ್ನು, ಸಂಸ್ಥೆಯ ಮರುಬಳಕೆ ಮಾಡಬಹುದಾದ ಉಡಾವಣಾ ರಾಕೆಟ್‌ 'ಫಾಲ್ಕನ್ 9' ಹೊಂದಿದೆ. ಇದು ಈಗ ಆಕಾಶದಲ್ಲಿ ಕಾರ್ಯಾಚರಿಸುತ್ತಿರುವ ಒಟ್ಟು ಉಪಗ್ರಹಗಳ 15 ಪಟ್ಟು ಅಧಿಕವಾಗಿದೆ.

2002ರ ಮೇ 6ರಂದು ಸ್ಪೇಸ್ ಎಕ್ಸ್ ಸ್ಥಾಪನೆಯಾಯಿತು. ಈ ಯೋಜನೆಯಲ್ಲಿ ಬೇರೆ ಬೇರೆ ಹಂತಗಳಲ್ಲಿ ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತಿದೆ. ಅವುಗಳಲ್ಲಿ ಒಂದು ಗುಂಪಿನ ಉಪಗ್ರಹಗಳು ಸಾಗುತ್ತಿದ್ದುದು ಆಗಸದಲ್ಲಿ ಸೋಮವಾರ ಗೋಚರಿಸಿತು.

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಖಗೋಳ ಅಧ್ಯಯನ ಸಂಸ್ಥೆ ‘ಆಗಸ್ 360’ಯ ಸ್ಥಾಪಕ, ಶಿರಸಿಯ ವಸಂತ ಹೆಗಡೆ ಭೈರುಂಬೆ, ‘ಈ ಉಪಗ್ರಹಗಳ ಮೇಲೆ ಅಳವಡಿಸಲಾಗಿರುವ ಸೌರ ಫಲಕಗಳ ಮೇಲೆ ಕೆಲವು ಕೋನದಲ್ಲಿ ಸೂರ್ಯನ ಕಿರಣಗಳು ಬಿದ್ದಾಗ ಅವು ಪ್ರತಿಫಲಿಸುತ್ತವೆ’ ಎಂದರು.

'ಈ ಉಪಗ್ರಹಗಳು ಭೂಮಿಯಿಂದ ಬಹಳ ಎತ್ತರದ ಕಕ್ಷೆಯಲ್ಲಿಲ್ಲ. ಹಾಗಾಗಿ ಬರಿಗಣ್ಣಿಗೆ ಬಲ್ಬ್‌ನ ಮಾಲೆಯಂತೆ ಕಾಣುತ್ತವೆ. ಇವುಗಳನ್ನು ಕೆಲವರು ಹಾರುವ ತಟ್ಟೆಗಳು ಎಂದು ಆಶ್ಚರ್ಯ ಪಟ್ಟಿದ್ದೂ ಇದೆ. ಸ್ಪೇಸ್ ಎಕ್ಸ್ ಸಂಸ್ಥೆಯು ಮುಂದಿನ ದಿನಗಳಲ್ಲಿ ಮಂಗಳ ಗ್ರಹದ ಮೇಲೆ ಮನುಷ್ಯರನ್ನು ಕರೆದುಕೊಂಡು ಹೋಗಲೂ ಗುರಿ ಹಾಕಿಕೊಂಡಿದೆ’ ಎಂದು ವಿವರಿಸಿದರು.

ಭೂಮಿಯಿಂದ ಸುಮಾರು 290 ಕಿಲೋಮಿಟರ್ ಎತ್ತರದ ಕಕ್ಷೆಯಲ್ಲಿ ಇವು ಸಂಚರಿಸುತ್ತವೆ. ಬಳಿಕ ಸುಮಾರು 340ರಿಂದ 550 ಕಿಲೋಮೀಟರ್ ಎತ್ತರದ ಕಕ್ಷೆಗೆ ಸಾಗಲಿವೆ. ಅದಕ್ಕೆ ಹಲವು ತಿಂಗಳು ಬೇಕಾಗಬಹುದು. ಹೀಗೆ ಹೋಗುವಾಗ ಬೆಳಕು ಬೀರುತ್ತ, ನಿಶ್ಶಬ್ದವಾಗಿ ಸಾಗಿದ ಉಪಗ್ರಹಗಳ ದೃಶ್ಯಗಳು ನೋಡುಗರನ್ನು ಅಚ್ಚರಿಗೊಳಿಸುತ್ತಿವೆ.

ಆತಂಕವೂ ಇದೆ:
ಎಲಾನ್ ಮಸ್ಕ್ ಅವರ ಈ ಮಹತ್ವಾಕಾಂಕ್ಷಿ ಯೋಜನೆಯ ಬಗ್ಗೆ ಖಗೋಳ ತಜ್ಞರು ಆತಂಕವನ್ನೂ ಹೊರ ಹಾಕಿದ್ದಾರೆ. ಇದು ಭೂಮಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಉಪಗ್ರಹಗಳ ಸೌರ ಫಲಕಗಳಿಂದ ಹೊರಸೂಸುವ ಪ್ರಖರ ಬೆಳಕು ಸೌರ ಮಂಡಲದ ಅಧ್ಯಯನಕ್ಕೆ ತೊಡಕಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ಭೂಮಿಯತ್ತ ವೇಗವಾಗಿ ಬರುವ ಅಪಾಯಕಾರಿ ಉಲ್ಕೆಗಳು, ಆಕಾಶಕಾಯಗಳನ್ನು ಗುರುತಿಸಲು ಸಾಧ್ಯವಾಗದಿರಬಹುದು. ಆಕಾಶದ ಅಧ್ಯಯನಕ್ಕಾಗಿ ಮಾಡುವ ಪ್ರಯಾಣಕ್ಕೆ ದಶಕಗಳ ಕಾಲ ಅಡ್ಡಿಯುಂಟು ಮಾಡಬಹುದು ಎಂದೂ ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT