ಬುಧವಾರ, ಜೂನ್ 23, 2021
24 °C

ಗಣೇಶೋತ್ಸವಕ್ಕೆ ಅನುಮತಿ ಕಡ್ಡಾಯ: ಕಾರವಾರ ಜಿಲ್ಲಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಸಾರ್ವಜನಿಕ ಗಣೇಶೋತ್ಸವ ನಡೆಸಲು ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿರುವ ಏಕ ಗವಾಕ್ಷಿಯನ್ನು ರಚಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಹಬ್ಬದ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಕಂದಾಯ, ಪೊಲೀಸ್, ಪಂಚಾಯತ್ ರಾಜ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಹಮ್ಮಿಕೊಂಡ ವಿಡಿಯೊ ಸಂವಾದ ಸಭೆಯಲ್ಲಿ ಅವರು ಮಾತನಾಡಿದರು.

‘ಸರ್ಕಾರದ ಮಾರ್ಗಸೂಚಿಯಂತೆ ನಿಬಂಧನೆಗಳನ್ನು ವಿಧಿಸಿ ಅನುಮತಿಯನ್ನು ನೀಡಬೇಕು. ಈ ಬಗ್ಗೆ ಪರಿಶೀಲಿಸಲು ಪ್ರತಿ ಸಾರ್ವಜನಿಕ ಗಣೇಶೋತ್ಸವದ ಸ್ಥಳಕ್ಕೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಬೇಕು’ ಎಂದು ಅವರು ತಿಳಿಸಿದರು.

‘ಅನುಮತಿ ಪತ್ರದಲ್ಲಿ ವಿಧಿಸಲಾಗಿರುವ ನಿಬಂಧನೆಗಳನ್ನು ಪಾಲಿಸುವ ಬಗ್ಗೆ ಸಮಿತಿಯ ಒಬ್ಬ ಪ್ರತಿನಿಧಿಯಿಂದ ಮುಚ್ಚಳಿಕೆ ಬರೆಸಿ ಪಡೆದುಕೊಳ್ಳಬೇಕು. ಯಾವುದೇ ರೀತಿಯಲ್ಲಿ ಸರ್ಕಾರದ ಮಾರ್ಗಸೂಚಿಯ ನಿರ್ದೇಶಗಳ ಉಲ್ಲಂಘನೆಯಾದಲ್ಲಿ, ಆ ವ್ಯಕ್ತಿಯನ್ನೇ ಜವಾಬ್ದಾರನನ್ನಾಗಿ ಮಾಡಬೇಕು’ ಎಂದು ನಿರ್ದೇಶನ ನೀಡಿದರು.

‘ಜಿಲ್ಲಾ ಉಸ್ತುವಾರಿ ಸಚಿವರು ಈ ಹಿಂದೆ ತಿಳಿಸಿದಂತೆ ಜಿಲ್ಲೆಯಲ್ಲಿ ಎರಡು ದಿನಗಳಿಗಿಂತ ಹೆಚ್ಚು ಗಣೇಶೋತ್ಸವ ನಡೆಸಲು ಅವಕಾಶವಿಲ್ಲ. ಕೊರೊನಾ ಸೋಂಕು ಹರಡುವದನ್ನು ತಡೆಯುವುದು ಜಿಲ್ಲಾಡಳಿತದ ಮುಖ್ಯ ಉದ್ದೇಶವಾಗಿದೆ’ ಎಂದರು.

‘ಈ ಬಾರಿಯ ಗಣೇಶೋತ್ಸವ ಆಚರಣೆಯಲ್ಲೂ ಉತ್ತರ ಕನ್ನಡವು ದೇಶಕ್ಕೇ ಮಾದರಿಯಾಗಲಿ. ಜಿಲ್ಲೆಯ ಜನರು ಪ್ರಜ್ಞಾವಂತರಿದ್ದು, ಅವರಿಗೆ ಸರ್ಕಾರದ ಮಾರ್ಗಸೂಚಿ ಹಾಗೂ ಕೊರೊನಾ ಮಾರ್ಗಸೂಚಿಗಳ ಬಗ್ಗೆ ಅಧಿಕಾರಿಗಳು ಸೂಕ್ತ ತಿಳಿವಳಿಕೆ, ಮಾರ್ಗದರ್ಶನವನ್ನು ನೀಡಬೇಕು’ ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ, ತಹಶೀಲ್ದಾರ್ ಆರ್.ವಿ.ಕಟ್ಟಿ ಇದ್ದರು. ವಿಡಿಯೊ ಸಂವಾದದಲ್ಲಿ ಜಿಲ್ಲೆಯ ಎಲ್ಲ ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು, ಪೊಲೀಸ್ ಅಧಿಕಾರಿಗಳು, ತಾಲ್ಲೂಕು ಪಂಚಾಯ್ತಿಗಳ ಕಾರ್ಯ ನಿರ್ವಹಣಾಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು